Honnavar Turtle | ಕಡಲಾಮೆ ಮೊಟ್ಟೆ ಸಂರಕ್ಷಣೆ ಕೇಂದ್ರ ಸ್ಥಾಪನೆಗೆ ಸರ್ಕಾರದ ಚಿಂತನೆ
ರಾಜ್ಯದ ಹೊನ್ನಾವರ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದ ಕಡಲಂಚಿನ ಮರಳು ದಿಬ್ಬಗಳಲ್ಲಿ ಪ್ರತಿವರ್ಷ ಮೊಟ್ಟೆ ಇಡುವ ಕಡಲಾಮೆಗಳ ಮೊಟ್ಟೆ ಮತ್ತು ಮರಿಗಳನ್ನು ರಕ್ಷಿಸಲು ವಿಶೇಷ ಕಡಲಾಮೆ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ.;
ರಾಜ್ಯದ ಹೊನ್ನಾವರ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದ ಕಡಲಂಚಿನ ಮರಳು ದಿಬ್ಬಗಳಲ್ಲಿ ಪ್ರತಿವರ್ಷ ಮೊಟ್ಟೆ ಇಡುವ ಕಡಲಾಮೆಗಳ ಮೊಟ್ಟೆ ಮತ್ತು ಮರಿಗಳನ್ನು ರಕ್ಷಿಸಲು ವಿಶೇಷ ಕಡಲಾಮೆ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಪ್ರತಿವರ್ಷ ವಿವಿಧ ಸಮುದ್ರ ಭಾಗದಿಂದ ಸಾವಿರಾರು ಕಡಲಾಮೆಗಳು ರಾಜ್ಯದ ಕರಾವಳಿ ಭಾಗಕ್ಕೆ ಬಂದು ಸಮುದ್ರದಂಚಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಇಂಥಹ ಮೊಟ್ಟೆಗಳನ್ನು ಪತ್ತೆ ಮಾಡಿ, ಅವು ಮರಿಗಳಾಗಿ ಕಡಲಿಗೆ ವಾಪಸ್ ಹೋಗುವವರೆಗೆ ಸಂರಕ್ಷಣೆ ಮಾಡಿ ಕಡಲಿಗೆ ಬಿಡುವುದು ಇಲಾಖೆಗಳಿಗೆ ಹೆಚ್ಚಿನ ಕೆಲಸ ಹಿಡಿಯಲಿದೆ. ಅದಕ್ಕಾಗಿ ಕಡಲಾಮೆ ಮತ್ತು ಅವುಗಳ ಮೊಟ್ಟೆ ಸಂರಕ್ಷಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಕೇಂದ್ರದ ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಆಫ್ ವೈಲ್ಡ್ ಲೈಫ್ ಹ್ಯಾಬಿಟೇಟ್ (ಐಡಿಡಬ್ಲ್ಯೂಎಚ್) ಸಹಯೋಗ ದಲ್ಲಿ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.
ಈ ಕಡಲಾಮೆಗಳ ಮೊಟ್ಟೆಗಳು 40-60 ದಿನಗಳಲ್ಲಿ ಮರಿಯಾಗಲಿದ್ದು, ಅಲ್ಲಿಯವರೆಗೆ ಅವುಗಳನ್ನು ಸಂರಕ್ಷಿಸಬೇಕಾಗುತ್ತದೆ. ಮೊಟ್ಟೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಅವುಗಳನ್ನು ಮರಿಯನ್ನಾಗಿಸಿ ಕಡಲಿಗೆ ಬಿಡಲು ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.
ಕರಾವಳಿ ಭಾಗಕ್ಕೆ ಬರುವ ಸಮುದ್ರ ಆಮೆಗಳ ಚಲನವಲನಗಳನ್ನು ಅಧ್ಯಯನ ಮಾಡಲು ಸರ್ಕಾರ ಮುಂದಾಗಿದ್ದು, ಡಿಸೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಕೆಲ ಕಡಲಾಮೆಗಳಿಗೆ ಸ್ಯಾಟಲೈಟ್ ಟ್ಯಾಗಿಂಗ್‌ಗಿರುವ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಅಲ್ಲದೆ ಹೀಗೆ ಮೈಕ್ರೋಚಿಪ್ ಅಳವಡಿಕೆ ಹಾಗೂ ಅದರ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸಲು ಭಾರತೀಯ ವನ್ಯಜೀವಿ ಸಂಸ್ಥೆ ರೀತಿಯ ಸಂಸ್ಥೆ ಜತೆಗೆ ಅರಣ್ಯ ಇಲಾಖೆ ಸಹಯೋಗ ಹೊಂದಲಿದೆ.
ಮೈಕ್ರೋಚಿಪ್ ಅಳವಡಿಕೆಯಿಂದ ಆಮೆಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ, ಯಾವ ಪ್ರದೇಶದಲ್ಲಿ ಎಷ್ಟು ಸಮಯ ಉಳಿದುಕೊಳ್ಳಲಿವೆ. ಅಂತಿಮವಾಗಿ ಯಾವ ಕರಾವಳಿ ಭಾಗಕ್ಕೆ ತೆರಳಲಿವೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಆ ಮೂಲಕ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಜೀವನ ಶೈಲಿ ಅಧ್ಯಯನ ಮಾಡಿ ಮುಂದಿನ ವರ್ಷ ಬರುವ ಕಡಲಾಮೆಗಳ ನಡವಳಿಕೆಯಂತೆ ಇಲಾಖೆ ಕಾರ್ಯ ಯೋಜನೆ ರೂಪಿಸಲಿದೆ.