ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ವಿಧೇಯಕ ಅಂಗೀಕಾರ; ದೇಶದಲ್ಲೇ ಪ್ರಥಮ ಹೆಜ್ಜೆ

ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಮಸೂದೆಗೆ ಸಂಬಂಧಿಸಿದಂತೆ ಸಾಕಷ್ಟು ಸಭೆ, ಚರ್ಚೆಗಳನ್ನು ಮಾಡಲಾಗಿದೆ. ಪಾಲುದಾರರು, ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿ ವಿಧೇಯಕ ಮಂಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.;

Update: 2025-08-19 14:03 GMT

ಸಾಂದರ್ಭಿಕ ಚಿತ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕನಸಿನ ಯೋಜನೆಯಾಗಿರುವ ʼಕರ್ನಾಟಕ ವೇದಿಕೆ ಆಧಾರಿತ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. 

ʼಭಾರತ್‌ ಜೋಡೋʼ ಯಾತ್ರೆ ವೇಳೆ ಗಿಗ್‌ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಯೋಜನೆ ಜಾರಿಗೊಳಿಸುವ ಕುರಿತು ರಾಹುಲ್‌ ಗಾಂಧಿ ಅವರು ಪ್ರಸ್ತಾಪಿಸಿದ್ದರು. ಮಹತ್ವದ ವಿಧೇಯಕವನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಮಂಡಿಸಿ ಅಂಗೀಕಾರ ಪಡೆದರು. ಆ ಮೂಲಕ ಇಡೀ ದೇಶದಲ್ಲೇ ಮೊದಲ ಬಾರಿಗೆ ಗಿಗ್‌ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ ಒದಗಿಸಿದ ಮೊದಲ ರಾಜ್ಯ ಕರ್ನಾಟಕ ಎಂಬ ಇತಿಹಾಸ ಬರೆಯಿತು.

 ʼಕರ್ನಾಟಕ ವೇದಿಕೆ ಆಧಾರಿತ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕʼಕ್ಕೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡಿದರು. ವಿಧೇಯಕ ಮಂಡನೆ ಮಾಡಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌. ಲಾಡ್ ಅವರು, ವಿಧೇಯಕದ ಪ್ರಮುಖ ಅಂಶಗಳು, ಮಂಡಳಿ ರಚನೆ, ಸೆಸ್‌ ಸಂಗ್ರಹ, ಕಾರ್ಮಿಕರಿಗೆ ಸಿಗುವ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಸದನದ ಗಮನಕ್ಕೆ ತಂದರು.

ಗಿಗ್‌ ಕಾರ್ಮಿಕರ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಸಂದರ್ಭದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ರಾಜ್ಯದಲ್ಲಿದ್ದಾರೆ. ಬೇರೆ ದೇಶಗಳಲ್ಲಿ ಗಿಗ್‌ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳಿವೆ.  ಅದೇ ರೀತಿ ಗಿಗ್‌ ಕಾರ್ಮಿಕರ ಆರೋಗ್ಯ, ಜೀವನ ಭದ್ರತೆ, ಕೆಲಸದ ಸಮಗ್ರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದರು.

ಮಸೂದೆಗೆ ಸಂಬಂಧಿಸಿದಂತೆ ಸಾಕಷ್ಟು ಸಭೆ, ಚರ್ಚೆಗಳನ್ನು ಮಾಡಲಾಗಿದೆ. ಪಾಲುದಾರರು, ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಈ ಹಿಂದೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿದೆ. ಇದೀಗ ಇದನ್ನು ವಿಧೇಯಕವಾಗಿ ಮಂಡಿಸಲಾಗಿದೆ ಎಂದು ವಿವರಿಸಿದರು.

ವಿಧೇಯಕಕ್ಕೆ ಪಕ್ಷಾತೀತವಾಗಿ ಪ್ರಶಂಸೆ

ವಿಧೇಯಕದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು, ಇದೊಂದು ಮಹತ್ವಾಕಾಂಕ್ಷಿಯ ಐತಿಹಾಸಿಕ ಮಸೂದೆ. ಗಿಗ್‌ ಕಾರ್ಮಿಕರ ಕಲ್ಯಾಣದ ಬಗ್ಗೆ ಸಚಿವರಿಗಿರುವ ಕಾಳಜಿ ಪ್ರಶಂಸನಾರ್ಹವಾಗಿದ್ದು, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಶ್ರಮದಿಂದ ಈ ಮಸೂದೆ ಬಂದಿದೆ ಎಂದು ಪಕ್ಷಭೇದ ಮರೆತು ಎಲ್ಲರೂ ಶ್ಲಾಘಿಸಿದರು. 

ಹೊರಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಮನವಿ

"ಗಿಗ್‌ ಕಾರ್ಮಿಕರ ಹಿತ ಕಾಪಾಡುವಲ್ಲಿ ಈ ಮಸೂದೆ ಮಹತ್ವದ್ದಾಗಿದೆ. ಇಂದು ವೇದಿಕೆಯು ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.  ಮನೆ ಬಾಗಿಲಿಗೆ ಸೇವೆ ಒದಗಿಸುವ ಕಾರ್ಮಿಕರಿಗೆ ಸರ್ಕಾರ ಜೀವನ ಭದ್ರತೆ ನೀಡುತ್ತಿದೆ. ಅವರ ಹಿತ ಕಾಪಾಡಲು ಸರ್ಕಾರ ಒಳ್ಳೆಯ ಕ್ರಮಕ್ಕೆ ಮುಂದಾಗಿದೆ" ಎಂದು ಸುರೇಶ್‌ ಕುಮಾರ್‌ ಬಣ್ಣಿಸಿದರು. ಹೊರ ಗುತ್ತಿಗೆ ಕಾರ್ಮಿಕರನ್ನೂ ಇದರಲ್ಲಿ ಸೇರಿಸಬೇಕು ಎಂಬ ಸಲಹೆ ನೀಡಿದರು.

ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಿ

ಬಿಜೆಪಿಯ ಅರವಿಂದ ಬೆಲ್ಲದ್‌ ಮಾತನಾಡಿ, "ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ರಾಜ್ಯ ಸರ್ಕಾರ ಮಸೂದೆ ತಂದು ಮೇಲ್ಪಂಕ್ತಿ ಹಾಕಿದೆ. ಒಳ್ಳೆಯ ಕಾನೂನು ಇದಾಗಲಿದೆ" ಎಂದರು.

ಸಿ.ಕೆ. ರಾಮಮೂರ್ತಿ ಅವರು, "ಗಿಗ್‌ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದರು.

ಎಲ್ಲರ ಸಲಹೆ ಪರಿಗಣನೆ

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸಂತೋಷ್‌ ಲಾಡ್‌, "ಮಸೂದೆ ಸಂಬಂಧ ಎಲ್ಲರ ಸಲಹೆಗಳ ಬಗ್ಗೆ ಸಮಾಲೋಚಿಸಿ ಭಾಗೀದಾರರೊಂದಿಗೆ ಚರ್ಚೆ ನಡೆಸಲಾಗುವುದು" ಎಂದು ಭರವಸೆ ನೀಡಿದರು.

"ಮಸೂದೆಯಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಸೇರಿಸಲು ಸಾಧ್ಯವಿಲ್ಲ. ಆ ಸಂಬಂಧ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೊಸೈಟಿ ರಚಿಸಲಾಗುವುದು" ಎಂದರು.

Tags:    

Similar News