ಕೆರೆಗಳ ಬಫರ್ ಜೋನ್ ನಿಗದಿ | ಸದನ ಸಮಿತಿ ರಚನೆಗೆ ಸರ್ಕಾರ ನಕಾರ; ಬಿಜೆಪಿ ಸದಸ್ಯರ ಸಭಾತ್ಯಾಗ
ವಿಧಾನಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಭೋಸರಾಜು ವಿಧೇಯಕದ ಕುರಿತು ಮಾಹಿತಿ ನೀಡಿದ ಅಂಗೀಕರಿಸುವಂತೆ ಸದನವನ್ನು ಕೋರಿದರು. ದನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.;
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕದಲ್ಲಿ ಕೆರೆಗಳ ಬಫರ್ ಜೋನ್ ನಿಗದಿ ಸಂಬಂಧ ಸದನ ಸಮಿತಿ ರಚನೆ ಮಾಡಲು ಸರ್ಕಾರ ಒಪ್ಪದಿರುವುದನ್ನು ಖಂಡಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ವಿಧಾನಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಭೋಸರಾಜು ವಿಧೇಯಕದ ಕುರಿತು ಮಾಹಿತಿ ನೀಡಿದ ಅಂಗೀಕರಿಸುವಂತೆ ಸದನವನ್ನು ಕೋರಿದರು. ದನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ಇದಕ್ಕೂ ಮುನ್ನ ಕೆರೆಗಳ ಸುತ್ತ ಬಫರ್‌ಜೋನ್ ಕಡಿಮೆ ಮಾಡುವುದಕ್ಕೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಹ ಇದಕ್ಕೆ ದನಿಗೂಡಿಸಿ ಬೆಂಗಳೂರಿಗೆ ಸಿಮೀತವಾಗಿರುವಂತೆ ಸದನ ಸಮಿತಿ ರಚನೆ ಮಾಡಬೇಕು. ಅಲ್ಲಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಮುಂದಿನ ಸದನದಲ್ಲಿ ವಿಧೇಯಕವನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಕ್ಕೆ ಇದಕ್ಕೆ ಸಹಮತ ವ್ಯಕ್ತಪಡಿಸದೆ ವಿಧೇಯಕವನ್ನು ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.
ರಿಯಲ್ ಎಸ್ಟೇಟ್ ಲಾಬಿಗೆ ಶರಣಾದ ಸರ್ಕಾರ
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಕೆರೆಗಳ ಬಫರ್ ಜೋನ್ ಕಡಿಮೆ ಮಾಡಲು ಮುಂದಾಗಿರುವುದು ರಿಯಲ್ ಎಸ್ಟೇಟ್ ಲಾಬಿಗೆ ಸರ್ಕಾರ ಶರಣಾಗಿದೆ ಎಂದು ಟೀಕಿಸಿದರು. ಕೆರೆಗಳನ್ನು ಮತ್ತು ಪರಿಸರವನ್ನು ರಕ್ಷಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಇರುವ ಬಫರ್ ಜೋನ್ ಅನ್ನು ಕಡಿಮೆ ಮಾಡುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅಧ್ಯಯನ ನಡೆಸಲು ಸದನ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಎಸ್.ಆರ್.ವಿಶ್ವನಾಥ್ ಮಾತನಾಡಿ, ವಿಧೇಯಕಕ್ಕೆ ತಿದ್ದುಪಡಿ ಮಾಡಿ ಬಫರ್‌ಜೋನ್ ಕಡಿತ ಮಾಡುವುದು ಸುಪ್ರೀಂಕೋರ್ಟ್ ಮತ್ತು ಎನ್‌ಜಿಟಿ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುವುದಿಲ್ಲವೇ? ನಿಯಮ ಉಲ್ಲಂಘನೆಯಾದರೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಮತ್ತೆ ಸರ್ಕಾರಕ್ಕೆ ಹಿನ್ನಡೆಯಾಗುವುದಿಲ್ಲವೇ? ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದರು.
ವಾಣಿಜ್ಯ, ಮನರಂಜನೆ ಚಟುವಟಿಕೆಗಳಿಗೆ ಅವಕಾಶ ಇಲ್ಲ
ವಿಧೇಯಕ ಕುರಿತು ಸ್ಪಷ್ಟನೆ ನೀಡಿದ ಸಣ್ಣ ನೀರಾವರಿ ಸಚಿವ ಭೋಸರಾಜು, ಕರಾವಳಿ ಭಾಗದ ಹಲವು ನಾಯಕರು ಕೆರೆಗಳಿಗಿರುವ ಬಫರ್‌ಜೋನ್ ಅಧಿಕವಾಗಿದ್ದು, ಅದನ್ನು ಕಡಿಮೆ ಮಾಡಬೇಕು ಎಂಬುದಾಗಿ ಮನವಿ ಮಾಡಿದರು. ಬಫರ್ ಜೋನ್‌ನಲ್ಲಿ ಸರ್ಕಾರಿ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಖಾಸಗಿ ಚಟುವಟಿಕೆಗಳಿಗೆ ಇರುವುದಿಲ್ಲ. ಕೆರೆಗಳ ಬಫರ್‌ಜೋನ್‌ನಲ್ಲಿ ಯಾವುದೇ ಕಾಮಗಾರಿಯನ್ನು ಮಾಡುವಂತಿಲ್ಲ. ಅಲ್ಲದೇ, ವಾಣಿಜ್ಯ ಮತ್ತು ಮನರಂಜನೆ, ಕೈಗಾರಿಕಾ ಚಟವಟಿಕೆಗಳನ್ನು ನಡೆಸಲು ಅವಕಾಶ ಇಲ್ಲ ಎಂದು ತಿಳಿಸಿದರು.
0.05ರವರೆಗಿನ ಕೆರೆಯ ವಿಸ್ತೀರ್ಣಕ್ಕೆ ಯಾವುದೇ ಬಫರ್‌ಜೋನ್ ಇರುವುದಿಲ್ಲ. 0.05ರಿಂದ 1 ಎಕರೆವರೆಗೆ 3 ಮೀಟರ್ ಬಫರ್‌ಜೋನ್ ಇರಲಿದೆ. 1ಎಕರೆಯಿಂದ 10 ಎಕರೆಯವರೆಗೆ 6 ಮೀಟರ್‌ನಷ್ಟು ಬಫರ್‌ಜೋನ್, 10 ಎಕರೆಯಿಂದ 25ರವರೆಗೆ 12 ಮೀಟರ್ ಬಫರ್‌ಜೋನ್, 25 ಎಕರೆಯಿಂದ 100ರವರೆಗೆ 24 ಮೀಟರ್ ಬಫರ್‌ಜೋನ್, 100 ಎಕರೆಗಿಂತ ಅಧಿಕ ಇದ್ದರೆ 30 ಮೀಟರ್ ಬಫರ್ ಜೋನ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಯಾವುದೇ ಬಿಲ್ಡರ್ ಲಾಬಿ ಮಾಡಿಲ್ಲ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಧೇಯಕ ತಿದ್ದುಪಡಿಗೆ ಯಾವುದೇ ಬಿಲ್ಡರ್‌ಗಳು ಲಾಬಿ ಮಾಡಿಲ್ಲ. ಸರ್ಕಾರವೇ ಕೆರೆಗಳ ಸಂರಕ್ಷಣೆಗೆ ಬದ್ಧವಾಗಿ ವಿಧೇಯಕ ತಂದಿದೆ. ಬಿಜೆಪಿ ಸದಸ್ಯರ ಆರೋಪವು ಸತ್ಯಕ್ಕೆ ದೂರವಾದುದು. ಅಲ್ಲದೇ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆಯಾಗುವಂತಹ ಅಂಶಗಳು ವಿಧೇಯಕದಲ್ಲಿ ಸೇರಿಸಿಲ್ಲ ಎಂದು ಹೇಳಿದರು.