ನ.21ರಿಂದ ಶೇ. 50 ಟ್ರಾಫಿಕ್ ಫೈನ್ ಕಟ್ಟಲು ಅವಕಾಶ ನೀಡಿ ಸರ್ಕಾರ ಆದೇಶ
ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ನ.21 ರಿಂದ ಡಿಸೆಂಬರ್12 ರವರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಿ ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಆದೇಶಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಅಕ್ಟೋಬರ್ 18ರಂದು ಬರೆದ ಪತ್ರದಲ್ಲಿ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ಗಳಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಹಾಗೂ ಸಾರಿಗೆ ಇಲಾಖೆಯಲ್ಲಿ (ಕನಿಷ್ಠ 1991 ರಿಂದ 2020 ರವರೆಗೆ) ದಾಖಲಾಗಿರುವ ಪ್ರಕರಣಗಳಲ್ಲಿ ವಾಹನ ಮಾಲೀಕರುಗಳಿಂದ ಶೇ.50 ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಹಾಗೂ ಈ ಶೇ.50 ವಿನಾಯಿತಿಯನ್ನು ನ.21 ರಿಂದ ಡಿಸೆಂಬರ್12 ರವರೆಗೆ ವಿಸ್ತರಿಸಲು ಕೋರಿದ್ದರು.
ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ, ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ನ.21 ರಿಂದ ಡಿಸೆಂಬರ್12 ರವರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಿ ಆದೇಶಿಸಿದ್ದಾರೆ.
ಈ ಹಿಂದೆಯೂ ಸರ್ಕಾರವು ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಶೇ.50 ರಿಯಾಯಿತಿ ನೀಡಿ ಆದೇಶಿಸಿತ್ತು. ಈ ಸಂದರ್ಭದಲ್ಲಿ ವಾಹನ ಸವಾರರು ಅವಕಾಶವನ್ನು ಸದ್ಭಳಕೆ ಮಾಡಿಕೊಂಡಿದ್ದರು. ಪೊಲೀಸ್ ಇಲಾಖೆಗೆ ಕೇವಲ ಎರಡು ದಿನದಲ್ಲೇ ಏಳು ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು.