Mysore MUDA Case | 48 ಮುಡಾ ನಿವೇಶನಗಳ ಹಂಚಿಕೆ ರದ್ದುಗೊಳಿಸಿದ ಸರ್ಕಾರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 48 ನಿವೇಶನಗಳ ಹಂಚಿಕೆಯನ್ನು ರದ್ದು ಮಾಡಿ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ ಆದೇಶ ಹೊರಡಿಸಿದ್ದಾರೆ;

Update: 2024-12-04 06:38 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ 48 ನಿವೇಶನಗಳ ಹಂಚಿಕೆಯನ್ನು ರಾತ್ರೋರಾತ್ರಿ ರದ್ದು ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಈ ನಿವೇಶನಗಳನ್ನು ಮಾರ್ಚ್ 23, 2023 ರ ನಿರ್ಣಯದ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. ನಿವೇಶನಗಳು ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿವೆ. ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಹಂಚಿಕೆ ಮಾಡಿದ್ದ ಸೈಟ್‌ಗಳು ಹಂಚಿಕೆ ನಿಯಮಗಳಿಗೆ ವಿರುದ್ಧವಾಗಿದೆ. ಅವರು ಮುಡಾ ಕಾನೂನಿಗೆ ವಿರುದ್ಧವಾಗಿ 48 ಜನರಿಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಸೈಟ್ ಗಳನ್ನು 5-6 ಲಕ್ಷಕ್ಕೆ ಹಂಚಿದ್ದರು. ಅದನ್ನು ಇದೀಗ ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನೀಡದಿದ್ದರೂ ನಿಯಮಗಳ ಉಲ್ಲಂಘನೆಯ ಆರೋಪ ರದ್ದಿಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ವಿವಾದಾತ್ಮಕ 50:50 ಯೋಜನೆಯಡಿ ಈ ಹಂಚಿಕೆ ಮಾಡಲಾಗಿಲ್ಲ. ಅಸ್ತಿತ್ವವೇ ಇಲ್ಲದ ಸಹಕಾರ ಸಂಘದ ಹೆಸರಿನಲ್ಲಿ ಸೈಟ್​ಗಳನ್ನು ದಿನೇಶ್ ಕುಮಾರ್ ಹಂಚಿಕೆ ಮಾಡಿದ್ದರು. ಚಾಮುಂಡೇಶ್ವರಿ‌ ನಗರ ಸರ್ವೊದಯ ಸಂಘದ ಸದಸ್ಯರು ಎಂದು ಹಂಚಿಕೆ ಮಾಡಿದ್ದರು. ಸೈಟ್ ಹಂಚಿಕೆಯಲ್ಲಿ ಬೇನಾಮಿ ಇದೆ ಎಂಬ ಆರೋಪ ಬಂದಿತ್ತು. ಇದು ಬಹುದೊಡ್ಡ ಅಕ್ರಮ ಎಂದು ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ವರದಿ ಕೊಟ್ಟಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ವ್ಯಕ್ತಿಗಳಿಗೆ 48 ನಿವೇಶನ ಹಂಚಿಕೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ರದ್ದತಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದ್ದಾರೆ. 

ಸಿದ್ದರಾಮಯ್ಯ ಅವರಿಗೆ ಎದುರಾದ ಸಂಕಷ್ಟ 

ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಕಷ್ಟ ಎದುರಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ 14 ಸೈಟ್‌ಗಳನ್ನು ಹಸ್ತಾಂತರಿಸುವಲ್ಲಿ ನಡೆದ  ಹಲವಾರು ಅಕ್ರಮಗಳ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರ ರೀತಿಯ ವ್ಯವಹಾರಗಳಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಇಡಿ ಪ್ರತಿಪಾದಿಸಿದೆ.

ಪಾರ್ವತಿ ಅವರಿಗೆ ಭೂಮಿ ಹಸ್ತಾಂತರದಲ್ಲಿ ಕಾನೂನು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಕಚೇರಿಯ ಕಾರ್ಯವಿಧಾನಗಳಲ್ಲಿನ ಅಕ್ರಮಗಳು, ಪಾರ್ವತಿ ಅವರ ಪರವಾದ ಹಾಗೂ ಪ್ರಭಾವದ ಬಳಕೆ, ಪೋರ್ಜರಿ ಮಾಡಿರುವುದಕ್ಕೆ ಸಾಕ್ಷ್ಯಗಳು ಇಡಿ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲೊಬ್ಬರಾದ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಬಹುಪಾಲು ನಿವೇಶನಗಳನ್ನು ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಮಾಡಲಾಗಿದೆ ಎಂದು ಇಡಿ ಹೇಳಿದೆ. 

ಪಾರ್ವತಿಯವರಿಗೆ ನಿವೇಶನ ಸಿಕ್ಕಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು. ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಮುಡಾದಿಂದ ಕೆಲವೊಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ. ಕೃಷಿ ಜಮೀನು ಎಂದು ತೋರಿಸಿ ಆ ಜಾಗವನ್ನು ಕೊಂಡುಕೊಂಡಿದ್ದಾರೆ. ಜಮೀನು ಮಾಲೀಕ ಮಾರುವ ಮುನ್ನವೇ ಮುಡಾ ಸೈಟ್​ ಪಡೆದಿದ್ದಾರೆ. ಪಾರ್ವತಿ ಅವರಿಗೆ ನಿವೇಶನವನ್ನು ಸಂಬಂಧಿಸಿದ ವಿಭಾಗ ಹಂಚಿಕೆ ಮಾಡಿಲ್ಲ. ಮುಡಾ ಆಯುಕ್ತರಾಗಿದ್ದ ನಟೇಶ್​ ಅವರು ಸ್ವ ಇಚ್ಛೆಯಿಂದ ಹಂಚಿದ್ದಾರೆ. ಪಾರ್ವತಿ ಅವರಿಗೆ ಯಾವ ಭಾಗದ ನಿವೇಶನ ನೀಡಬೇಕು ಎಂದು ಮುಡಾ ಆಯುಕ್ತರೇ ಆಯ್ಕೆ ಮಾಡಿ, ಹಂಚಿಕೆ ಮಾಡಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

Tags:    

Similar News