ತಾಪಂ, ಜಿಪಂ ಚುನಾವಣೆ | ಮೀಸಲು ಅಂತಿಮಕ್ಕೆ ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೀಸಲು ನಿಗದಿಪಡಿಸುವ ಪ್ರಕ್ರಿಯೆ ಅಂತಿಮಗೊಳಿಸಲು ರಾಜ್ಯ ಸರ್ಕಾರ ಇನ್ನಷ್ಟು ಸಮಯ ಕೊಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದೆ.;

Update: 2024-11-28 05:28 GMT
ಕರ್ನಾಟಕ ಹೈಕೋರ್ಟ್‌

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೀಸಲು ನಿಗದಿಪಡಿಸುವ ಪ್ರಕ್ರಿಯೆ ಅಂತಿಮಗೊಳಿಸಲು ರಾಜ್ಯ ಸರ್ಕಾರ ಇನ್ನಷ್ಟು ಸಮಯ ಕೊಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದೆ. 

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟಿಸಲು ಏಕಸದಸ್ಯ ಪೀಠದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಲ್ಲಿಸಿರುವ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಕ್ಷೇತ್ರ ಪುನ‌ರ್ ವಿಂಗಡಣೆ ಮುಗಿದಿದೆ. ಪುನರ್ ವಿಂಗಡಣೆ ಆದ ಕ್ಷೇತ್ರಗಳ ವಾರ್ಡ್‌ವಾರು ಮೀಸಲಾತಿ ಅಂತಿಮಗೊಳಿಸಲು ನಾಲ್ಕು ವಾರಗಳ ಕಾಲಾವಕಾಶ ಬೇಕು. ಕನಿಷ್ಠ ಜನವರಿ ಮೊದಲ ವಾರದವರೆಗೆ ಸಮಯಬೇಕು. ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ ವಿಂಗಡಣೆ ವಿಳಂಬವಾಗಿದ್ದರಿಂದ ಎಲ್ಲಾ ಜಿಲ್ಲೆಗಳ ಮೀಸಲು ನಿಗದಿ ತಡವಾಗಿದೆ. ಮೀಸಲು ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಲಾಗಿದೆ. ಶೀಘ್ರದಲ್ಲೇ ಕರಡು ಮೀಸಲು ಹೊರಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗುವುದು. ಬಳಿಕ ಮೀಸಲು ಪಟ್ಟಿಯನ್ನು ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳಿಸಿಕೊಡಲಾಗುವುದು ಎಂದು  ನ್ಯಾಯಪೀಠಕ್ಕೆ ಮನವಿ ಮಾಡಿದರು.

ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ, ಚುನಾವಣೆ ನಡೆಯದೆ ಈಗಾಗಲೇ ಬಹಳ ವಿಳಂಬವಾಗಿದೆ. ಕಳೆದೊಂದು ವರ್ಷದಿಂದ ಮೀಸಲಾತಿ ನಿಗದಿ ನನೆಗುದಿಗೆ ಬಿದ್ದಿದೆ. ಸರ್ಕಾರ ಪುನಃ ಜನವರಿ ತನಕ ಕಾಲಾವಕಾಶ ಕೇಳುತ್ತಿದೆ. ಅದಕ್ಕಾದರೂ ಬದ್ಧರಾಗಿರುವಂತೆ ಸರ್ಕಾರದ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬೇಕು ’ ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಡಿ.12 ಕ್ಕೆ ಮುಂದೂಡಿತು. ಅಲ್ಲದೆ, ‘ಕಾಲಾವಕಾಶ ನೀಡುವ ಬಗ್ಗೆ ಮುಂದಿನ ವಿಚಾರಣೆ ದಿನ ನಿರ್ಧರಿಸಲಾಗುವುದುʼ ಎಂದು ಪೀಠ ಹೇಳಿದೆ. 

Tags:    

Similar News