ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್ | ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಸೂಚನೆ
ರಾಜ್ಯದಲ್ಲಿ ಈಗಾಗಲೇ 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಪೈಕಿ 398 ಅಭ್ಯರ್ಥಿಗಳಿಗೆ ನೇಮಕಾತಿಗೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಪೊಲೀಸ್ ಇಲಾಖೆ ಸೇರಬಯಸುವ ಆಕಾಂಕ್ಷಿಗಳಿಗೆ ಶುಭಸುದ್ದಿಯೊಂದು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್‌ಸ್ಟೆಬಲ್‌ಗಳ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಇಲಾಖೆ ಸಜ್ಜಾಗಿದೆ.
ರಾಜ್ಯದಲ್ಲಿ ಅಂದಾಜು 10 ರಿಂದ 15 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಹೊಸ ನೇಮಕಾತಿ ಪ್ರಕ್ರಿಯೆಯಿಂದ ಕೆಎಸ್‌ಆರ್‌ಪಿ, ಸಿವಿಲ್, ಸಶಸ್ತ್ರ ಮೀಸಲು ಪಡೆಗಳಲ್ಲಿ ಖಾಲಿ ಉಳಿದಿದ್ದ ಕಾನ್‌ಸ್ಟೆಬಲ್ ಹುದ್ದೆಗಳು ಭರ್ತಿಯಾಗಲಿವೆ. ನೇಮಕಾತಿ ಪ್ರಕ್ರಿಯೆ ಆರಂಭಿಸಲು ಇಲಾಖಾ ಅಧಿಕಾರಿಗಳು ಸಚಿವ ಡಾ.ಜಿ. ಪರಮೇಶ್ವರ್ ಅವರು ಸೂಚನೆ ನೀಡಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆಯಲ್ಲಿ ಈಗಾಗಲೇ 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಪೈಕಿ 398 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ. ಕಾರಾಗೃಹ ಪಿಎಸ್‌ಐ ಹಾಗೂ ಪೊಲೀಸ್ ಪೇದೆ ಹುದ್ದೆಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಯಾವ ಘಟಕಕ್ಕೆ ಎಷ್ಟು ಹುದ್ದೆ ?
ಕಲ್ಯಾಣ ಕರ್ನಾಟಕೇತರ ವೃಂದದಲ್ಲಿ ಬೆಂಗಳೂರು 1ನೇ ಪಡೆ- 134, ಬೆಳಗಾವಿ 2ನೇ ಪಡೆ- 140, ಬೆಂಗಳೂರು 3ನೇ ಪಡೆ- 113, ಬೆಂಗಳೂರು 4ನೇ ಪಡೆ- 134, ಮೈಸೂರು 5ನೇ ಪಡೆ- 103, ಮಂಗಳೂರು 7ನೇ ಪಡೆ- 335, ಶಿವಮೊಗ್ಗ 8ನೇ ಪಡೆ- 120, ಬೆಂಗಳೂರು 9ನೇ ಪಡೆ- 75, ಹಾಸನ 11ನೇ ಪಡೆ- 135, ತಮಕೂರು 12ನೇ ಪಡೆ - 135 ಹುದ್ದೆಗಳನ್ನು ಪುರುಷರಿಗೆ ಹಾಗೂ ಬೆಳಗಾವಿ 2ನೇ ಪಡೆ- 23, ಬೆಂಗಳೂರು 4ನೇ ಪಡೆ- 28, ಮೈಸೂರು 5ನೇ ಪಡೆ- 25 ಹುದ್ದೆಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿ ಬೆಂಗಳೂರು 1ನೇ ಪಡೆ- 33, ಬೆಂಗಳೂರು 3ನೇ ಪಡೆ - 34, ಬೆಂಗಳೂರು 4ನೇ ಪಡೆ - 33 ಹುದ್ದೆ, ಕಲಬುರಗಿ 6ನೇ ಪಡೆ- 180 ಹುದ್ದೆ, ಬೆಂಗಳೂರು 9ನೇ ಪಡೆ - 33 ಹುದ್ದೆಗಳು ಪುರುಷರಿಗೆ ಹಾಗೂ ಬೆಂಗಳೂರು 4ನೇ ಪಡೆ- 12 ಹುದ್ದೆ, ಕಲಬುರಗಿ 6ನೇ ಪಡೆಗೆ - 41 ಹುದ್ದೆಗಳು ಮಹಿಳೆಯರಿಗೆ ಹಂಚಿಕೆ ಮಾಡಲಾಗಿದೆ. ಮುನಿರಾಬಾದ್‌ನಲ್ಲಿರುವ ಭಾರತ ಮೀಸಲು ಪಡೆಯಲ್ಲಿ ಪುರುಷರಿಗೆ 166 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.