ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ| ನೇರ ನೇಮಕಾತಿಗಳಲ್ಲಿ ಮೂರು ವರ್ಷ ವಯೋಮಿತಿ ಸಡಿಲಿಕೆ; ರಾಜ್ಯ ಸರ್ಕಾರ ಆದೇಶ

ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಸರ್ಕಾರ ಮೂರು ವರ್ಷ ಸಡಿಲಿಕೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ.

Update: 2025-09-29 14:02 GMT

ಸರ್ಕಾರ ವಯೋಮಿತಿ ಸಡಿಲಕೆ ಮಾಡಿ ಆದೇಶ ಹೊರಡಿಸಿದೆ. 

Click the Play button to listen to article

ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ನಡೆಸುವ ನೇರ ನೇಮಕಾತಿಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಮೂರು ವರ್ಷ ಸಡಿಲಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್‌ ಹಾಗೂ ಒಳ ಮೀಸಲಾತಿ ಕಾರಣದಿಂದ ಸರ್ಕಾರವು ಸರಿಯಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಆದ್ದರಿಂದ ಸರ್ಕಾರ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಸರ್ಕಾರ ಮೂರು ವರ್ಷ ಸಡಿಲಿಕೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ.

ಆದೇಶದಲ್ಲೇನಿದೆ ? 

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆ ಮಾಡದಂತೆ 2024 ಅ.28 ರಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು.

ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಆ. 25ರ ಸರ್ಕಾರದ ಆದೇಶದಲ್ಲಿ ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಿಗೆ ಪ್ರವರ್ಗ- ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಿತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇ. 17 ರಷ್ಟು ಮೀಸಲಾತಿಯನ್ನು ಪ್ರವರ್ಗ-ಎ ರಲ್ಲಿನ ಸಮುದಾಯಗಳಿಗೆ ಶೇ. 6 ರಷ್ಟು, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇ. 6 ರಷ್ಟು ಮತ್ತು ಪ್ರವರ್ಗ - ಸಿ ಯಲ್ಲಿ ಸಮುದಾಯಗಳಿಗೆ ಶೇ. 5 ರಷ್ಟು ನಿಗದಿಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು.

ಎರಡು ವರ್ಷ ಸಡಿಲಿಕೆ ನೀಡಿದ್ದ ಸರ್ಕಾರ

ಕಳೆದೊಂದು ವರ್ಷದಿಂದ ಯಾವುದೇ ನೇಮಕಾತಿ ನಡೆಯದಿರುವ ಕಾರಣ  ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆ ಬಯಸಿ ಅರ್ಜಿಗಳನ್ನು ಸಲ್ಲಿಸಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಕ್ರಮವಾಗಿ ಸೆ.6 ರಿಂದ 2027 ಡಿ. 31 ರವರೆಗೆ ಹೊರಡಿಸುವ ಎಲ್ಲಾ ನೇಮಕಾತಿಗಳಿಗೂ  2 ವರ್ಷಗಳ ಸಡಿಲಿಕೆ ನೀಡಲು ಸರ್ಕಾರ ತೀರ್ಮಾನಿಸಿತ್ತು.

ಐದು ವರ್ಷ ವಯೋಮಿತಿ ಸಡಿಲಿಕೆಗೆ ಆಗ್ರಹ

ರಾಜ್ಯ ಸರ್ಕಾರ ಎರಡು ವರ್ಷ ವಯೋಮಿತಿ ಸಡಿಲಕೆ ಮಾಡಿದ ನಂತರ ಹಲವಾರು ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡುವಂತೆ ಕೋರಿದ್ದರು. ಈ ಎಲ್ಲಾ ಮನವಿಗಳನ್ನು ಸರ್ಕಾರ ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ.

ಈ ಆದೇಶ ಹೊರಡಿಸಿದ ದಿನಾಂಕದ 2027 ಡಿ.31 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ ಮೂರು ವರ್ಷಗಳ ಸಡಿಲಿಕೆ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ವಿಶೇಷ ಕಾರ್ಯದರ್ಶಿ ಆದೇಶ ಹೊರಡಿಸಿ ಆದೇಶಿಸಿದ್ದಾರೆ.

Tags:    

Similar News