ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್ ಅಪ್ಪ ಡಿಜಿಪಿ ರಾಮಚಂದ್ರರಾವ್‌ಗೆ ಕಡ್ಡಾಯ ರಜೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಾನೂನುಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್) ಸೌಲಭ್ಯ ಒದಗಿಸಲಾಗಿತ್ತು ಎಂಬ ವಿಚಾರ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು.;
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಮಲಮಗಳು ರನ್ಯಾ ರಾವ್‌ಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ ಹೊತ್ತಿರುವ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ , ಡಿಜಿಪಿ ರಾಮಚಂದ್ರರಾವ್ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೂಲಕ ಈ ನಿರ್ದೇಶನ ನೀಡಲಾಗಿದೆ. ಈ ಸೂಚನೆಯ ನಂತರ, ಡಿಜಿಪಿ ರಾಮಚಂದ್ರರಾವ್ ಮಧ್ಯಾಹ್ನ ಕಚೇರಿಯಿಂದ ತೆರಳಿದ್ದಾರೆ ಎನ್ನಲಾಗಿದೆ.
ರಾಮಚಂದ್ರ ರಾವ್ ಅವರ ಹುದ್ದೆಗೆ ಕೆ.ವಿ ಶರತ್ ಚಂದ್ರ ಅವರನ್ನು ನಿಯೋಜಿಸಲಾಗಿದೆ. ಅವರು ಪ್ರಸ್ತುತ ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ನೇಮಕ) ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಈ ಹೊಣೆಗಾರಿಕೆಯನ್ನು ನೀಡಲಾಗಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನದ ನಂತರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಾನೂನುಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್) ಸೌಲಭ್ಯ ಒದಗಿಸಲಾಗಿತ್ತು ಎಂಬ ವಿಚಾರ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ, ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ಮಧ್ಯೆ, ಅವರ ಮಲಮಗಳ ಮನೆಯ ಮೇಲೆ ಇನ್ಫೋರ್ಮೇಷನ್ ಡಿಪಾರ್ಟ್ಮೆಂಟ್ (ಇ.ಡಿ) ದಾಳಿ ನಡೆಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಡಿಜಿಪಿ ರಾಮಚಂದ್ರರಾವ್ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ಸಮಯದಲ್ಲಿ ಚಿತ್ರಹಿಂಸೆ: ರನ್ಯಾ ಆರೋಪ
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್, ತನ್ನ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳು ತಮ್ಮನ್ನು ಚಿತ್ರಹಿಂಸೆಗೆ ಒಳಪಡಿಸಿದ್ದಾರೆ ಎಂದು ದೂರು ನೀಡಿದ್ದಾಳೆ . ರನ್ಯಾ ತಮ್ಮ ಪತ್ರದಲ್ಲಿ, ಡಿಆರ್ಐ ಅಧಿಕಾರಿಗಳು ತಮ್ಮನ್ನು ಹಲವು ಬಾರಿ ಕೆನ್ನೆಗೆ ಹೊಡೆದಿದ್ದರು, ಆಹಾರ ಮತ್ತು ನಿದ್ರೆ ನಿರಾಕರಿಸಿದ್ದರು ಮತ್ತು ಖಾಲಿ ದಾಖಲೆಗಳಿಗೆ ಸಹಿ ಹಾಕಿಸಿದ್ದರು ಎಂದು ಆರೋಪಿಸಿದ್ದಾಳೆ .
"ನನ್ನನ್ನು ಬಂಧಿಸಿದ ಕ್ಷಣದಿಂದ ನ್ಯಾಯಾಲಯದಲ್ಲಿ ಹಾಜರಾಗುವವರೆಗೆ, ನಾನು ಗುರುತಿಸಬಲ್ಲ ಡಿಆರ್ಐ ಅಧಿಕಾರಿಗಳು ನನಗೆ 10ರಿಂದ 15 ಬಾರಿ ಹೊಡೆದರು. ಹಲವು ಬಾರಿ ದೈಹಿಕ ದೌರ್ಜನ್ಯಕ್ಕೆ ಒಳಗಾದರೂ, ಅವರು ತಯಾರಿಸಿದ ಹೇಳಿಕೆಗಳಿಗೆ ಸಹಿ ಹಾಕಲು ನಾನು ನಿರಾಕರಿಸಿದೆ," ಎಂದು ರನ್ಯಾ ಹೇಳಿದ್ದಾಳೆ.
"ಅತ್ಯಂತ ಒತ್ತಡ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗಿ ನಾನು 50-60 ಟೈಪ್ ಮಾಡಿದ ಪುಟಗಳು ಮತ್ತು 40 ಖಾಲಿ ಪುಟಗಳಿಗೆ ಸಹಿ ಹಾಕಿದೆ," ಎಂದು ಪತ್ರದಲ್ಲಿ ಹೇಳಿದ್ದಾಳೆ.
ರನ್ಯಾ ಅವರ ಬಂಧನದ ನಂತರ, ಈ ಪ್ರಕರಣವು ಹಲವು ತಿರುವುಗಳನ್ನು ತೆಗೆದುಕೊಂಡಿದೆ. ಡಿಆರ್ಐ ಕಸ್ಟಡಿಯಲ್ಲಿ ಮೂರು ದಿನಗಳ ಕಾಲ ಇದ್ದ ನಂತರ, ರನ್ಯಾ ಅವರನ್ನು 15 ದಿನಗಳ ನ್ಯಾಯಾಲಯದ ಕಸ್ಟಡಿಗೆ ಕಳುಹಿಸಲಾಗಿದೆ.