ಎನ್‌ಕೌಂಟರ್‌ನಲ್ಲಿ ಹತರಾದವರ ಕುಟುಂಬಕ್ಕೂ ಪರಿಹಾರ ಕೊಡಿ: ನಕ್ಸಲ್‌ ವಿಕ್ರಮ್‌ ಗೌಡ ಸಹೋದರಿ ಮನವಿ!

ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ. ಉಳಿದವರಿಗೆ ಕೊಡುವ ಪರಿಹಾರ ನಮಗೆ ಕೊಟ್ಟರೆ ಸಾಕು ಎಂದು ಸುಗುಣ ಹೇಳಿದರು.;

Update: 2025-01-08 09:01 GMT
ವಿಕ್ರಂ ಗೌಡ ಸಹೋದರಿ ಸುಗುಣ
Click the Play button to listen to article

ಅಣ್ಣನ ಜೀವ ಅಂತೂ ಹೋಗಿದೆ... ಅದನ್ನು ಮರಳಿಪಡೆಯಲು ಸಾಧ್ಯವಿಲ್ಲ. ಆದರೆ ಸರ್ಕಾರ ಪರಿಹಾರವನ್ನಾದರೂ ನೀಡಲಿ ಎಂದು ಕಳೆದ ನವೆಂಬರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ ನಕ್ಸಲ್ ನಾಯಕ ವಿಕ್ರಂಗೌಡನ ಸಹೋದರಿ ಸುಗುಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೇ ನಕ್ಸಲ್‌ಪಡೆಯಲ್ಲಿ ಗುರುತಿಸಿಕೊಂಡಿರುವ ಆರು ಜನರು ಶರಣಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ  ಸುಗುಣ, ಅಣ್ಣ ಇದ್ದಿದ್ದರೆ ಆತನಿಗೂ ಪರಿಹಾರ ಸಿಗುತ್ತಿತ್ತು. ಆದರೆ ಸರ್ಕಾರ ನನ್ನಣ್ಣನ ಜೀವ ತೆಗೆದುಕೊಂಡಿದೆ. ಜೀವವನ್ನಂತೂ ವಾಪಸ್ಸು ಕೊಡಲಾಗಲ್ಲ, ಅದರೆ ಪರಿಹಾರ ಕೊಟ್ಟರೆ ಬಹಳ ಕಷ್ಟದಿಂದ ಸಾಗುತ್ತಿರುವ ತಮ್ಮ ಬದುಕು ಕಟ್ಟಿಕೊಳ್ಳಲು ಶರಣಾಗುತ್ತಿರುವ ನಕ್ಸಲರಿಗೆ ಮಾಡಿಕೊಡುತ್ತಿರುವ ಸೌಲಭ್ಯಗಳನ್ನು ತಮ್ಮ ಕುಟುಂಬಕ್ಕೂ ನೀಡಲಿ ಎಂದು ಹೇಳಿದ್ದಾರೆ. 

ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ. ಉಳಿದವರಿಗೆ ಕೊಡುವ ಪರಿಹಾರ ನಮಗೆ ಕೊಟ್ಟರೆ ಸಾಕು. ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಹೇಳಿದರು.

ಎನ್‌ಕೌಂಟರ್‌ಗೆ  ಬಲಿಯಾಗಿದ್ದ ವಿಕ್ರಮ್‌ ಗೌಡ

ಕಳೆದ ನವೆಂಬರ್‌ ತಿಂಗಳಿನಲ್ಲಿ  ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ವಾಂಟೆಡ್‌ ನಕ್ಸಲ್‌ ವಿಕ್ರಂ ಗೌಡ ಬಲಿಯಾಗಿದ್ದರು. ವಿಕ್ರಂ ಗೌಡ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗಗಳ ಪೊಲೀಸರ "ವಾಂಟೆಡ್" ಪಟ್ಟಿಯಲ್ಲಿದ್ದ ವಿಕ್ರಮ್ ಗೌಡ ನಕ್ಸಲರ "ನೇತ್ರಾವತಿ" ತಂಡದಲ್ಲಿ ಸಕ್ರಿಯನಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಎನ್ ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು.  5 ಮಂದಿ ನಕ್ಸಲರ ತಂಡ ಉಡುಪಿ ಜಿಲ್ಲೆಯ ಹೆಬ್ರಿ ಪಕ್ಕದ ಸೀತಂಬೈಲು ಸಮೀಪ ಅಕ್ಕಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಲು ಬಂದಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದರು. ಆ ವೇಳೆ ನಡೆದ ಮುಖಾಮುಖಿಯ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹೊಡೆದುರಿಳಿಸಿದ್ದರು. 

ನ್ಯಾಯಾಂಗ ತನಿಖೆಗೆ ಆಗ್ರಹ

ವಿಕ್ರಮ್ ಗೌಡ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೊರಹಾಕಿರುವ ನಕ್ಸಲರು, ಅದೊಂದು ನಕಲಿ ಎನ್‌ಕೌಂಟರ್ ಎಂದು ಶಾಂತಿಗಾಗಿ ನಾಗರಿಕ ವೇದಿಕೆಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ವಿಕ್ರಮ್ ಗೌಡ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯು ನಕ್ಸಲರ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟಿದೆ. ನಕ್ಸಲರ ಬೇಡಿಕೆಯಂತೆ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ಹೇಳಲಾಗುತ್ತಿದೆ. 

ಕಳೆದ ಕೆಲ ದಿನಗಳ ಹಿಂದೆ ನಕ್ಸಲರ ಶರಣಾಗತಿಗೆ ಸರ್ಕಾರ ಕೇಳಿಕೊಂಡಿತ್ತು. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ, ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಸಿಎಂ ಕಚೇರಿ ತಿಳಿಸಿತ್ತು

Tags:    

Similar News