ಗುಜರಾತ್​ನಂತೆ ಕರ್ನಾಟಕಕ್ಕೂ ಆದ್ಯತೆ ನೀಡಿ: ಪ್ರಧಾನಿ ಮುಂದೆ ಸಿಎಂ ಸಿದ್ದರಾಮಯ್ಯ ನೇರ ಬೇಡಿಕೆ

ನಮ್ಮ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಸಿಂಹಪಾಲಿನ ಆರ್ಥಿಕ ಹೊರೆ ಹೊರುತ್ತಿರುವುದನ್ನು ಅಂಕಿಅಂಶಗಳ ಸಮೇತ ವಿವರಿಸಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.;

Update: 2025-08-10 11:47 GMT

ಅಭಿವೃದ್ಧಿಯ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀಡುವಷ್ಟೇ ಪ್ರಾಮುಖ್ಯತೆ ಮತ್ತು ಒತ್ತನ್ನು ನಮ್ಮ ಕರ್ನಾಟಕಕ್ಕೂ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಮನವಿ ಸಲ್ಲಿಸಿದರು. ನಮ್ಮ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಸಿಂಹಪಾಲಿನ ಆರ್ಥಿಕ ಹೊರೆ ಹೊರುತ್ತಿರುವುದನ್ನು ಅಂಕಿಅಂಶಗಳ ಸಮೇತ ವಿವರಿಸಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಭಾನುವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಮೆಟ್ರೋ ಮೂರನೇ ಹಂತದ ಶಂಕುಸ್ಥಾಪನೆ ಮತ್ತು ಹಳದಿ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲೇ ಮಾತನಾಡಿದ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ನಡುವಿನ ವೆಚ್ಚ ಹಂಚಿಕೆಯಲ್ಲಿನ ಅಸಮಾನತೆಯನ್ನು ಪ್ರಸ್ತಾಪಿಸಿದರು. "ನಮ್ಮ ಮೆಟ್ರೋ ಯೋಜನೆಗೆ 50:50ರ ಅನುಪಾತದಲ್ಲಿ ವೆಚ್ಚ ಭರಿಸುವ ಒಪ್ಪಂದವಿದೆ. ಆದರೆ, ಇದುವರೆಗೆ ನಿರ್ಮಾಣವಾಗಿರುವ 96.10 ಕಿ.ಮೀ. ಜಾಲಕ್ಕೆ ರಾಜ್ಯ ಸರ್ಕಾರ 25,387 ಕೋಟಿ ರೂ. ಖರ್ಚು ಮಾಡಿದ್ದರೆ, ಕೇಂದ್ರದಿಂದ ಬಂದಿರುವುದು ಕೇವಲ 7,468.86 ಕೋಟಿ ರೂ. ಮಾತ್ರ. ಇದರಿಂದ ಸ್ಪಷ್ಟವಾಗುವಂತೆ, ನಮ್ಮ ರಾಜ್ಯವೇ ಹೆಚ್ಚಿನ ಭಾರವನ್ನು ಹೊರುತ್ತಿದೆ" ಎಂದು ಅವರು ಹೇಳಿದರು.

ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯೋಜನೆಗೆ ಚಾಲನೆ ದೊರೆತಿದ್ದನ್ನು ಸ್ಮರಿಸಿದ ಅವರು, ಬೆಂಗಳೂರಿನಂತಹ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ಮೆಟ್ರೋ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯವು ತನ್ನ ಜವಾಬ್ದಾರಿಯನ್ನು ಅರಿತು ಹೆಚ್ಚಿನ ಕೊಡುಗೆ ನೀಡುತ್ತಿದೆ, ಕೇಂದ್ರವೂ ಇದೇ ರೀತಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.

ಹೊಸದಾಗಿ ಉದ್ಘಾಟನೆಗೊಂಡ 7,160 ಕೋಟಿ ರೂ. ವೆಚ್ಚದ ಹಳದಿ ಮಾರ್ಗದಿಂದಾಗಿ ಮೆಟ್ರೋ ಪ್ರಯಾಣಿಕರ ದೈನಂದಿನ ಸಂಖ್ಯೆ 12.50 ಲಕ್ಷಕ್ಕೆ ಏರಲಿದೆ ಎಂದು ಮಾಹಿತಿ ನೀಡಿದ ಸಿದ್ದರಾಮಯ್ಯನವರು, 2030ರ ವೇಳೆಗೆ ಬೆಂಗಳೂರಿನಲ್ಲಿ ಮೆಟ್ರೋ ಜಾಲವನ್ನು 220 ಕಿ.ಮೀ.ಗೆ ವಿಸ್ತರಿಸುವ ಬೃಹತ್ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ವಿವರಿಸಿದರು. ಈ ಮಹತ್ವಾಕಾಂಕ್ಷೆಯ ಗುರಿ ತಲುಪಲು ಕೇಂದ್ರ ಸರ್ಕಾರದ ಸಮಾನ ಸಹಭಾಗಿತ್ವ ಅತ್ಯಗತ್ಯ ಎಂದು ಅವರು ತಮ್ಮ ಮಾತುಗಳ ಮೂಲಕ ಒತ್ತಿ ಹೇಳಿದರು. 

Tags:    

Similar News