ಘಾಟಿ ಸುಬ್ರಹ್ಮಣ್ಯ | ಹಳ್ಳಿಕಾರ್‌, ಅಮೃತ್‌ ಮಹಲ್‌ ರಾಸುಗಳಿಂದ ಕಳೆಗಟ್ಟಿದ ಜಾನುವಾರು ಜಾತ್ರೆ

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಳ್ಳಿಕಾರ್‌ ರಾಸುಗಳ ಖರೀದಿಗಾಗಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ರೈತರು ಬಂದಿದ್ದಾರೆ. ಹಳ್ಳಿಕಾರ್‌ ರಾಸುಗಳು 10-12 ಲಕ್ಷ ರೂ. ಬೆಲೆಗೆ ಮಾರಾಟವಾಗುತ್ತಿವೆ.

Update: 2024-12-23 02:30 GMT
ಘಾಟಿ ಸುಬ್ರಹ್ಮಣ್ಯದಲ್ಲಿ ಜಾನುವಾರು ಜಾತ್ರೆ ನಡೆಯಿತು

ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಆರಂಭವಾಗಿರುವ ಜಾನುವಾರು ಜಾತ್ರೆ ಹಳ್ಳಿಕಾರ್‌ ರಾಸುಗಳಿಂದ ಕಳೆಗಟ್ಟಿದೆ. ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಜಾತ್ರೆಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯದಲ್ಲಿ ಅತಿ ಹೆಚ್ಚು ಹಳ್ಳಿಕಾರ್‌ ರಾಸುಗಳ ಮಾರಾಟ, ಖರೀದಿ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ರಾಸು ಖರೀದಿಗೆ ನೆರೆ ರಾಜ್ಯದ ರೈತರು

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಳ್ಳಿಕಾರ್‌ ರಾಸುಗಳ ಖರೀದಿಗಾಗಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ರೈತರು ಬರುತ್ತಾರೆ. ಕಳೆದ ಬಾರಿ ಪೊಗದಸ್ತಾದ ಹಳ್ಳಿಕಾರ್‌ ಎತ್ತುಗಳ ಜೋಡಿ 8ಲಕ್ಷಕ್ಕೆ ಮಾರಾಟವಾಗಿತ್ತು. ಈಗ 10-12 ಲಕ್ಷ ಬೆಲೆ ಬಾಳುವ ರಾಸುಗಳು ಜಾತ್ರೆಗೆ ಬಂದಿವೆ. ವ್ಯಾಪಾರವೂ ಜೋರಾಗಿದೆ.

ಬಾಗೇಪಲ್ಲಿ, ಹಿಂದೂಪುರ ಸೇರಿದಂತೆ ಹಲವು ತಾಲೂಕುಗಳಿಂದ ಬಂದ ರೈತರು ಕೃಷಿ ಕೆಲಸಕ್ಕಾಗಿ ಹಳ್ಳಿಕಾರ್‌, ಅಮೃತ್‌ ಮಹಲ್‌ ಹಾಗೂ ಇತರೆ ಮಿಶ್ರತಳಿಯ ಹೋರಿಗಳನ್ನು ಖರೀದಿಸುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಜಾನುವಾರು ಜಾತ್ರೆಯ ನೋಟ

6000 ಜೋಡಿಗಳು ಆಗಮನ

ಕಳೆದ ಮೂರ್ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಪ್ರಮಾಣದ ರಾಸುಗಳು ಜಾತ್ರೆಗೆ ಬಂದಿವೆ. ಘಾಟಿ ಸುಬ್ರಹ್ಮಣ್ಯ ದೇವಾಲಯದ ಎರಡೂ ಕಡೆಗಳಲ್ಲಿ ಸುಮಾರು 3 ಕಿ.ಮೀ. ದೂರದಿಂದಲೇ ಮಾಲೀಕರು ರಾಸುಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಬಹುತೇಕರು ಪೆಂಡಾಲ್‌ ನಿರ್ಮಿಸಿ , ಎತ್ತುಗಳಿಗೆ ಮೆತ್ತನೆಯ ಹುಲ್ಲು ಹಾಸು ಹಾಸಿ ಆರೈಕೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಲುಬಾಯಿ ಜ್ವರ ವ್ಯಾಪಿಸಿದ ಕಾರಣ ಜಾನುವಾರು ಜಾತ್ರೆಗೆ ಅನುಮತಿ ನೀಡಿರಲಿಲ್ಲ. ಆದರೂ ರೈತರು ಜಾನುವಾರುಗಳನ್ನು ಕರೆತಂದಿದ್ದರು. ಈ ಬಾರಿ ಜಾತ್ರೆ ಪೂರ್ಣ ಪ್ರಮಾಣದಲ್ಲಿ ಕಳೆಗಟ್ಟಿದೆ ಎಂದು ರೈತ ಹಳ್ಳಿಕಾರ್‌ ಅಂಬರೀಷ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. .

ಹಳ್ಳಿಕಾರ್‌ ತಳಿಗಳೇ ಹೆಚ್ಚು

ಘಾಟಿ ಸುಬ್ರಹ್ಮಣ್ಯ ಜಾತ್ರೆಗಾಗಿ ಹಳ್ಳಿಕಾರ್‌ ಎತ್ತು ಹಾಗೂ ಹೋರಿಗಳನ್ನು ಹೆಚ್ಚಾಗಿ ಕರೆತರಲಾಗಿದೆ. ಮೈಸೂರು, ಮಂಡ್ಯ, ಬಾಗೇಪಲ್ಲಿ, ಹಿಂದೂಪುರ, ರಾಮನಗರ ಸೇರಿದಂತೆ ದಕ್ಷಿಣ ಜಿಲ್ಲೆಗಳಿಂದ ಹೆಚ್ಚಿನ ರೈತರು ಹಳ್ಳಿಕಾರ್‌ ಎತ್ತುಗಳನ್ನು ಜಾತ್ರೆಗೆ ಕರೆತಂದು ಮಾರಾಟ ಮಾಡುತ್ತಿದ್ದಾರೆ, ಇನ್ನು ಹಾಸನ ಜಿಲ್ಲೆಯಿಂದ ಅಮೃತ್‌ ಮಹಲ್‌ ತಳಿಯ ಎತ್ತುಗಳನ್ನು ತರಲಾಗಿದೆ.

ಘಾಟಿ ಜಾನುವಾರು ಜಾತ್ರೆಯಲ್ಲಿ ಎತ್ತುಗಳ ಜೋಡಿ

ಸ್ಥಳೀಯರಿಗೆ ಲಾಭದಾಯಕವಾದ ಜಾತ್ರೆ

ದೂರದಿಂದ ಜಾನುವಾರುಗಳೊಂದಿಗೆ ಜಾತ್ರೆಗೆ ಬರುವವರು ಜಾಗಕ್ಕಾಗಿ ಹಣ ಪಾವತಿಸಬೇಕಾಗಿದೆ. ಘಾಟಿ ದೇವಸ್ಥಾನದ ಸುತ್ತಲೂ ಸಾಕಷ್ಟು ರೈತರ ಜಮೀನುಗಳಿದ್ದು, ಪೆಂಡಾಲ್‌ ಹಾಕಿಕೊಂಡು ಜಾನುವಾರು ಕಟ್ಟಲು ಸಾವಿರಾರು ರೂ. ಪಾವತಿಸಬೇಕಾಗಿದೆ. ಜಾನುವಾರು ಮಾಲೀಕರು ಅವರವರ ಶಕ್ತಿಗೆ ಅನುಗುಣವಾಗಿ ದೊಡ್ಡ, ಅಲಂಕೃತ ಪೆಂಡಾಲ್‌, ಸ್ವಾಗತ ಕಮಾನು ನಿರ್ಮಿಸಿಕೊಂಡಿದ್ದಾರೆ.

ಎತ್ತು ಹಾಗೂ ಹೋರಿಗಳು ಮಲಗಲು ವಿಶೇಷವಾಗಿ ಮೆತ್ತನೆಯ ಹುಲ್ಲಿನ ಹಾಸಿಗೆ ನಿರ್ಮಿಸಲಾಗಿದೆ.

ಮುಂಗಾರು ಕೊಯ್ಲು ಮುಕ್ತಾಯವಾದ ಬಳಿಕ ನಡೆಯುವ ಜಾನುವಾರು ಜಾತ್ರೆಯಲ್ಲಿ ರಾಸುಗಳ ಜೊತೆಗೆ ಕೃಷಿ ಕೆಲಸಕ್ಕೆ ಬೇಕಾದ ಎತ್ತುಗಳನ್ನು ಖರೀದಿಸಲು ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಹಾಗೂ ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದಾರೆ. ಜಾನುವಾರು ಜಾತ್ರೆ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಬಂದಿದ್ದರು.

ಜಾತ್ರೆಗಾಗಿಯೇ ರಾಸುಗಳ ಸಾಕಣೆ

ಜಾನುವಾರು ಜಾತ್ರೆಗಾಗಿಯೇ ಹಲವು ರೈತರು ರಾಸುಗಳನ್ನು ಸಾಕುತ್ತಿದ್ದಾರೆ. ಪೌಷ್ಟಿಕ ಆಹಾರ ನೀಡಿ ರಾಸುಗಳನ್ನು ದಷ್ಟಪುಷ್ಠವಾಗಿ ಬೆಳೆಸಲಾಗುತ್ತದೆ. ಹೀಗೆ ಬೆಳೆಸಿದ ರಾಸುಗಳನ್ನು ಅಲ್ಲಲ್ಲಿ ನಡೆಯುವ ದೊಡ್ಡ ಪ್ರಮಾಣದ ಜಾನುವಾರು ಜಾತ್ರೆಗೆ ಕರೆದೊಯ್ಯಲಾಗುತ್ತದೆ. ಭಾರೀ ಮೊತ್ತಕ್ಕೆ ಮಾರಾಟ ಮಾಡಿ, ಹೊಸ ಜೋಡಿಯನ್ನು ಖರೀದಿಸಿ ಬೆಳೆಸಲಾಗುತ್ತದೆ. ಇನ್ನು ಜಾನುವಾರು ಸಾಕಾಣಿಕೆ ಹಲವು ರೈತರಿಗೆ ಪ್ರತಿಷ್ಠೆಯ ವಿಷಯವೂ ಆಗಿದೆ. ದೇವನಹಳ್ಳಿ ತಾಲೂಕಿನ ವಿಜಯಪುರ, ಚನ್ನರಾಯಪಟ್ಟಣ, ಮಂಡ್ಯ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣದ ರೈತರು ಪ್ರತಿವರ್ಷ ರಾಸುಗಳನ್ನು ತಂದು ಮಾರಾಟ ಮಾಡುತ್ತಾರೆ. ಅದಕ್ಕಾಗಿ ಹೈಟೆಕ್ ಮಾದರಿಯ ಪೆಂಡಾಲ್, ಇನ್ನಿತರೆ ಖರ್ಚುಗಳಾಗಿ ಲಕ್ಷಾಂತರ ರೂ ವ್ಯಯ ಮಾಡುತ್ತಿದ್ದಾರೆ.

ಘಾಟಿ ಜಾನುವಾರು ಜಾತ್ರೆಯಲ್ಲಿ ರಾಸುಗಳಿಗೆ ಅಗತ್ಯವಾದ ಹಗ್ಗ, ಇತರೆ ಸಾಮಗ್ರಿಗಳು

ಬಣ್ಣದ ಬಾರುಕೋಲಿಗೂ ಡಿಮ್ಯಾಂಡ್‌

ಕೃಷಿ ಕೆಲಸಕ್ಕಾಗಿ ಎತ್ತುಗಳನ್ನು ಖರೀದಿಸುವ ಜೊತೆಗೆ ರಾಸುಗಳ ಕೊರಳಿಗೆ ಕಟ್ಟುವ ಕಂಬಳಿ ದಾರ, ಘಂಟೆಗಳು, ಬಣ್ಣ ಬಣ್ಣದ ಬಾರು ಕೋಲುಗಳು, ಘಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರಗಳನ್ನು ಖರೀದಿಸಲಾಗುತ್ತದೆ. ಅತಿ ಹೆಚ್ಚು ರೈತರು ಬಾಲು ಕೋಲುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.

ಎತ್ತುಗಳಿಗೆ ಯಾವುದೇ ಸುಂಕವಿಲ್ಲ

ಜಾನುವಾರು ಜಾತ್ರೆಗೆ ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೈತರಿಗೆ ಘಾಟಿ‌ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ರೈತರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ನವಕರ್ನಾಟಕ ಸೇನೆ ವತಿಯಿಂದ ಜಾನುವಾರುಗಳಿಗೆ ಉಚಿತವಾಗಿ ನೀರು ಹಾಗೂ ಮೇವು ವಿತರಿಸಲಾಗುತ್ತಿದೆ. ಜಾತ್ರೆಗೆ ಬರುವ ಎತ್ತುಗಳಿಗೆ ಯಾವುದೇ ಸುಂಕ ವಿಧಿಸಿಲ್ಲ.

Tags:    

Similar News