ಶಿರೂರು ಗುಡ್ಡ ಕುಸಿತ | ಭೂ ಕುಸಿತಕ್ಕೆ ಕಾರಣ ಪತ್ತೆ ಮಾಡಿದ ಭೂವೈಜ್ಞಾನಿಕ ಸಮೀಕ್ಷೆ

ಭೂ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ನಿರಾಕರಿಸಿದ್ದು, ಇದೊಂದು ನೈಸರ್ಗಿಕ ವಿಕೋಪ ಎಂದು ಪ್ರತಿಪಾದಿಸಿದೆ.

Update: 2024-07-27 10:31 GMT
ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆ ನಡೆಯುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿ ಇಂದಿಗೆ ಹನ್ನೆರಡು ದಿನಗಳಾಗಿವೆ. ಇದುವರೆಗೆ ಎಂಟು ಜನರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿತ ಮೃತದೇಹಗಳಿಗೆ ಮತ್ತು ಗಂಗಾವಳಿ ನೀರಿನಲ್ಲಿ ಕೊಚ್ಚಿಹೋಗಿರುವ ಟ್ರಕ್‌ ಮೇಲೆತ್ತಲು ಕಾರ್ಯಾಚರಣೆ ನಡೆಯುತ್ತಲೇ ಇದೆ. ಇದೀಗ ಗುಡ್ಡ ಕುಸಿತಕ್ಕೆ ಸಂಬಂಧಪಟ್ಟಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಅಧ್ಯಯನ  ವರದಿ ಹೊರಬಿದ್ದಿದ್ದು, ಇಡೀ ಗುಡ್ಡವೇ ಕುಸಿದು ಜಾರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಹೇಳಿದೆ.

ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ನಿರಾಕರಿಸಿದ್ದು, ಇದೊಂದು ನೈಸರ್ಗಿಕ ವಿಕೋಪ ಎಂದು ಪ್ರತಿಪಾದಿಸಿದೆ. 

ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಸರ್ಕಾರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಅದು ಕಾಮಗಾರಿಗಳ ವಿಧಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹೆಚ್ಚಿನ ಹಾನಿಯನ್ನು ತಡೆಯಲು ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಸೂಚಿಸಿದೆ. ಕಾಮಗಾರಿಯಿಂದ ನೈಸರ್ಗಿಕ ನೀರಿನ ಒಳಹರಿವಿಗೆ ತೊಂದರೆಯಾಗಿದೆ. ಇಳಿಜಾರು ಪ್ರದೇಶ ಮತ್ತು ಎಡ ಪಾರ್ಶ್ವವು ವಿರೂಪಗೊಂಡಿದೆ. ಇಳಿಜಾರು ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಎದ್ದು ಕಾಣಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕಡಿಮೆ ಅವಧಿಯಲ್ಲಿ 503 ಮಿಮೀ ಮಳೆಯಾಗಿರುವುದು ಕೂಡ ಘಟನೆಗೆ ಕಾರಣ ಹೌದೆಂಬುದನ್ನು ಭೂವೈಜ್ಞಾನಿಕ ಸಮೀಕ್ಷೆ ವರದಿ ಒಪ್ಪಿದೆ. ಆದರೆ, ಇದರ ಹೊರತಾಗಿಯೂ ಮಳೆ ನೀರಿನ ಹರಿವಿನ ನೈಸರ್ಗಿಕ ತಡೆಗಳು ಮಾಯವಾಗಿರುವುದು ಮತ್ತು ಕಡಿದಾದ ಇಳಿಜಾರಿನ ಪ್ರದೇಶ ಸೃಷ್ಟಿಯಾಗಿರುವುದು ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ 

ಈ ಮಧ್ಯೆ, ಕಾಮಗಾರಿಯ ದೋಷದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೆಲವು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಈಗ ಜನರ ಜೀವ ಕಳೆದುಕೊಂಡಾಗಿದೆ. ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ. ಇದು ಎನ್‌ಎಚ್‌ಎಐ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ, ನಾವು ಪ್ರಾದೇಶಿಕ ಪ್ರಾಧಿಕಾರದ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಸಮಸ್ಯೆ ಬಗೆಹರಿಯುವವರೆಗೆ ಆ ಬಗ್ಗೆ ಗಮನ ಸೆಳೆಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಭಾರೀ ಮಳೆಯೇ ದುರಂತಕ್ಕೆ ಕಾರಣ 

ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿ ಪಿ ಬ್ರಹ್ಮಂಕರ್ ಅವರು ಐಐಟಿ-ಬಾಂಬೆ ಪ್ರಾಧ್ಯಾಪಕರ ಪರ್ಯಾಯ ವರದಿಯ ಬಗ್ಗೆ ಸೂಚಿಸಿದ್ದು, ಭಾರೀ ಮಳೆಯೇ ಈ ದುರಂತಕ್ಕೆ ಕಾರಣವಾಗಿದೆ. ಮೂರು ದಿನಗಳ ಅಲ್ಪಾವಧಿಯಲ್ಲಿ 500 ಮಿ.ಮೀ.ಗೂ ಹೆಚ್ಚು ಮಳೆ ಸುರಿದಿರುವುದು ಅವಘಡಕ್ಕೆ ಕಾರಣವಾಗಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. 

ವರದಿಯಲ್ಲಿ ರಸ್ತೆಯ ಕುರಿತು ಕೆಲವು ಸಮಸ್ಯೆಗಳಿವೆ. ಆದರೆ ಪ್ರಾಕೃತಿಕ ಅನಾಹುತವನ್ನು ತಪ್ಪಿಸಲಾಗುವುದಿಲ್ಲ. ನಾನು ನಾಲ್ವರು ಸದಸ್ಯರ ತಂಡವನ್ನು ಶಿರೂರು ಮತ್ತು ಹಾಸನ-ಮಾರನಹಳ್ಳಿ ಮತ್ತು ಅಡ್ಡಹೊಳೆ-ಬಂಟ್ವಾಳದಲ್ಲಿ ಇತರ ಇಬ್ಬರನ್ನು ಅಧ್ಯಯನ ಮಾಡಲು ರಚಿಸಿದ್ದೇವೆ. ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಕಂಡುಹಿಡಿದು ಪರಿಹರಿಸಲು ಸೂಚಿಸಿದ್ದೇವೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿ ಪಿ ಬ್ರಹ್ಮಂಕರ್ ತಿಳಿಸಿದ್ದಾರೆ. 

ಸರ್ಕಾರಕ್ಕೆ ಪತ್ರ ಬರೆದಿರುವ ಡಿಸಿಗಳು 

ಈ ಮಧ್ಯೆ ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣಕನ್ನಡದ ಜಿಲ್ಲಾಧಿಕಾರಿಗಳು ಎನ್‌ಎಚ್ -66 ರ ಹಲವಾರು ಸಮಸ್ಯೆಗಳನ್ನು ಗಮನಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಉತ್ತರಕನ್ನಡ ಡಿಸಿ, ಇಳಿಜಾರು ಸ್ಥಿರೀಕರಣದ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರೆ, ಉಡುಪಿ ಡಿಸಿ ನೀರು ನಿಲ್ಲುವುದು, ಕಳಪೆ ಒಳಚರಂಡಿ ವ್ಯವಸ್ಥೆ ಮತ್ತು ಬೀದಿ ದೀಪಗಳು ಕಾರ್ಯನಿರ್ವಹಿಸದಿರುವ ಬಗ್ಗೆ ಹಾಗೂ ದಕ್ಷಿಣಕನ್ನಡ ಡಿಸಿ ಭೂಕುಸಿತದ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರಣ ಗೋಡೆಯನ್ನು ನಿರ್ಮಿಸುವಂತೆ ಪತ್ರ ಬರೆದಿದ್ದಾರೆ. 

ಮುಳುಗುತಜ್ಞ ಈಶ್ವರ ಮಲ್ಪೆ ಆಗಮನ

ಈ ನಡುವೆ ಗಂಗಾವಳಿ ನದಿಯಲ್ಲಿ ಮುಳುಗಿರುವ ಟ್ರಕ್‌ನಲ್ಲಿ ಕೇರಳದ ಚಾಲಕ ಅರ್ಜುನ್‌ ಪತ್ತೆಗಾಗಿ ಖ್ಯಾತ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ಅವರ ತಂಡ ಶನಿವಾರ ಘಟನಾ ಸ್ಥಳಕ್ಕೆ ಆಗಮಿಸಿದೆ. ಅಲ್ಲಿ "ಈಗಾಗಲೇ ಹನ್ನೆರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ತಜ್ಞರ ಸಲಹೆ ಪಡೆದು ತಾವು ನೀರಿಗಿಳಿದು ಟ್ರಕ್‌ ಪತ್ತೆ ಮಾಡಿ ಚಾಲಕನನ್ನು ಪತ್ತೆ ಮಾಡಲಿದ್ದೇವೆ. ನದಿಯ ನೀರಿನ ರಭಸ ಹೆಚ್ಚಿರುವುದರಿಂದ ಅಪಾಯಕಾರಿ ಸುಳಿಗಳಿವೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವು ನೀರಿಗೆ ಇಳಿಯಬೇಕಿದೆ. ನಮ್ಮ ಪ್ರಯತ್ನ ಮಾಡುತ್ತೇವೆ.. ನೋಡೋಣ.." ಎಂದು ಈಶ್ವರ್‌ ಮಲ್ಪೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Tags:    

Similar News