Gas Cylinder Blast | ಸಿಲಿಂಡರ್ ಸ್ಫೋಟ: 7 ಮಂದಿಗೆ ಗಂಭೀರ ಗಾಯ
Gas Cylinder Blast | ಸ್ಪೋಟದ ಪರಿಣಾಮ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟು ಮಾಡಿದೆ.;
ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ಆರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯ ಚೊಕ್ಕಸಂದ್ರದಲ್ಲಿ ಸಂಭವಿಸಿದೆ.
ಸೋಮವಾರ ಬೆಳಗ್ಗೆ 8:25ಕ್ಕೆ ಈ ಅವಘಡ ಸಂಭವಿಸಿದ್ದು, ಒಂದು ಪುಟ್ಟ ಮಗು ಸೇರಿದಂತೆ ಒಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ದಿಜುಧಾರ್(34), ಅಂಜಲಿದಾಸ್ (31), ಮನುಶ್ರೀ(3) ಎನ್ನುವವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಎದುರು ಮನೆಯಲ್ಲಿ ವಾಸವಿದ್ದ ಮನು(25), ತಿಪ್ಪೇರುದ್ರಸ್ವಾಮಿ(50), ಪಕ್ಕದ ಮನೆ ಶೋಭ(60) ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಪೋಟದ ಪರಿಣಾಮ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟು ಮಾಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದು, ಸ್ಥಳೀಯ ಪೀಣ್ಯ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.