ಗಾಂಧಿ ಜಯಂತಿ ವಿಶೇಷ | ಕನ್ನಡ ನೆಲದೊಂದಿಗಿನ ಮಹಾತ್ಮನ ನಂಟಿನ ಬುತ್ತಿ

ಸ್ವಾತಂತ್ರ್ಯ ಹೋರಾಟ ಸಂಘಟಿಸಲು ದೇಶದ ಉದ್ದಗಲಕ್ಕೂ ಸತ್ಯಾಗ್ರಹ, ಪಾದಯಾತ್ರೆ, ಹರತಾಳಗಳನ್ನು ನಡೆಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಕರ್ನಾಟಕಕ್ಕೆ ಬರೋಬ್ಬರಿ 18 ಬಾರಿ ಭೇಟಿ ನೀಡಿದ್ದರು.;

Update: 2024-10-02 02:00 GMT

ಅಂದು 1924 ರ ಡಿಸೆಂಬರ್‌ 26 ಹಾಗೂ 27ನೇ ತಾರೀಖು. ಕನ್ನಡದ ನೆಲದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಲು ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಅಂದಿನ ಕಾಂಗ್ರೆಸ್‌ ಅಧಿವೇಶನ ಅಧ್ಯಕ್ಷತೆ ವಹಿಸಲು ರಾಷ್ಟ್ರಪಿತ ಮಹಾತ್ಮ ಗಾಂಧಿ ಬೆಳಗಾವಿಗೆ ಆಗಮಿಸಿದ್ದರು. ಕೊಲ್ಕತ್ತ ಒಪ್ಪಂದವನ್ನು ಅನುಮೋದಿಸುವ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದ ಆ ಅಧಿವೇಶನ ಕನ್ನಡಿಗರಲ್ಲಿ ಸ್ವಾತಂತ್ರ್ಯ ಚಳವಳಿಯ ಕಿಚ್ಚು ಹೆಚ್ಚಿಸಿದ ಮಹತ್ವದ ಘಟನೆ.

ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಈ ಸುಸಂದರ್ಭದಲ್ಲಿ ಗಾಂಧಿ ಜಯಂತಿ(ಅ.2)ಯ ಪ್ರಯುಕ್ತ ಕರ್ನಾಟಕದೊಂದಿಗಿನ ಗಾಂಧಿ ಅವರ ನಂಟಿನ ಕುರಿತು ಮೆಲುಕು ಹಾಕುವ ಪ್ರಯತ್ನ ಈ ಲೇಖನ.

ಮಹಾತ್ಮಾಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಕರ್ನಾಟಕದ ವಿವಿಧೆಡೆ 18 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರೆಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಆದರೆ, ಅದು ನಿಜ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸತ್ಯಾಗ್ರಹ, ಪಾದಯಾತ್ರೆ, ಹರತಾಳಗಳಲ್ಲಿ ಭಾಗವಹಿಸಿದ ಗಾಂಧೀಜಿ ಅವರು, ಕರ್ನಾಟಕದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿ 154 ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಚಳವಳಿಯ ಜೊತೆಗೆ ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ ಚಾಲನೆ ಕೊಟ್ಟಿದ್ದರು.

ಮಹಾತ್ಮಾಗಾಂಧಿ ಅವರು ಪ್ರಪ್ರಥಮ ಬಾರಿಗೆ ಪತ್ನಿ ಕಸ್ತೂರ ಬಾ ಅವರೊಂದಿಗೆ 1915 ಮೇ ತಿಂಗಳ 8 ರಂದು ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಆಹ್ವಾನದ ಮೇರೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಭಾಷಣ ಮಾಡಿದ ಸಭಾಂಗಣಕ್ಕೆ ಈಗ ಬಾಪೂಜಿ ಸಭಾಂಗಣ ಎಂದೇ ನಾಮಕರಣ ಮಾಡಲಾಗಿದೆ. ಅದು ಈಗ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿದೆ.

1920 ಆಗಸ್ಟ್ 21 ರಂದು ಎರಡನೇ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ ಮಹಾತ್ಮಾಗಾಂಧಿ ಅವರು ಬೆನ್ಸನ್ ಟೌನ್ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಭಾಷಣ ಮಾಡಿದ್ದರು.

1924 ರಲ್ಲಿ ಮಹಾತ್ಮಾಗಾಂಧಿ ಬೆಳಗಾವಿಯಲ್ಲಿ ನಡೆದ 39 ನೇ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿದ್ದರು. ಈ ಐತಿಹಾಸಿಕ ಅಧಿವೇಶನದ ಮೂಲಕ ಅವರು ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ಕಿಚ್ಚು ಹೊತ್ತಿಸಿದರು. ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನ ಇದಾಗಿದೆ. ಈಗ ಅಧಿವೇಶನದ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ.


1927 ಏಪ್ರಿಲ್ 20 ರಂದು ರೈಲು ಪ್ರಯಾಣದ ಮೂಲಕ ಯಶವಂತಪುರಕ್ಕೆ ಆಗಮಿಸಿದ್ದ ಮಹಾತ್ಮಾಗಾಂಧಿ ಅವರು ಯಶವಂತಪುರ ರೈಲ್ವೆನಿಲ್ದಾಣದಲ್ಲಿಯೇ ನೂರಾರು ಮಂದಿ ಬೆಂಬಲಿಗರೊಂದಿಗೆ ಪ್ರಾರ್ಥನಾ ಸಭೆ ನಡೆಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದ್ದರು.

ಇದೇ ಅವಧಿಯಲ್ಲಿ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮಕ್ಕೆ ಭೇಟಿ ನೀಡಿ ಕೆಲ ದಿನಗಳ ವಿಶ್ರಾಂತಿ ಪಡೆದಿದ್ದರು.

1927 ಜುಲೈ 19 ರಂದು ಮಹಾತ್ಮಾಗಾಂಧಿ ಕೃಷ್ಣರಾಜ ಸಾಗರ ( ಕೆ ಆರ್ ಎಸ್) ಜಲಾಶಯಕ್ಕೆ ಭೇಟಿ ನೀಡಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೇ ಪ್ರವಾಸದಲ್ಲಿ ಬೆಂಗಳೂರು ಇಂಪಿರಿಯಲ್ ಹಾಲಿನ ಡೈರಿಗೆ ಭೇಟಿ ನೀಡಿದ ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆದಿದ್ದರು.

ಇದರ ಮಧ್ಯೆ, ಕಸ್ತೂರ್ಬಾ ಗಾಂಧಿ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರ ಪತ್ನಿ ಲೋಕಸುಂದರಿ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿದ್ದರು. ಮೈಸೂರಿನ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರ ಮನೆಗೆ ಭೇಟಿ ನೀಡಿ ಅತಿಥ್ಯ ಸ್ವೀಕರಿಸಿದ್ದರು.

1927 ಆಗಸ್ಟ್‌ 19 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿಗೆ ಭೇಟಿ ನೀಡಿದ್ದ ಗಾಂಧೀಜಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ಸಭೆಯಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿದ್ದರು.

1927 ಮತ್ತು 1936 ರಲ್ಲಿ ಶಂಕರಪುರದ ಮಹಿಳಾ ಸೇವಾ ಸಮಾಜಕ್ಕೆ ಮಹಾತ್ಮಾಗಾಂಧಿ ಮತ್ತು ಕಸ್ತೂರ್ಬಾ ಗಾಂಧಿ ಭೇಟಿ ನೀಡಿ ಮಹಿಳೆಯರಿಗೆ ಶಿಕ್ಷಣ ಮಹತ್ವ, ಸ್ವಾವಲಂಬನೆಯ ಜೀವನ ಸಾಸಗಿಸುವ ಕುರಿತು ಹಿತೋಪದೇಶ ಮಾಡಿದ್ದರು. ಇದೇ ಅವಧಿಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಗೆ ಭೇಟಿ ನೀಡಿ ಪಶು ಸಂಗೋಪನೆ ಕುರಿತು ಮಾಹಿತಿ ಪಡೆದಿದ್ದರು. ಬಳಿಕ ಸಂದರ್ಶಕರ ಪುಸ್ತಕದಲ್ಲಿ ಹಸ್ತಾಕ್ಷರ ಮಾಡಿ ತಮ್ಮ ಹೆಸರಿನ ಜೊತೆಗೆ ʼರೈತ ಸಾಬರಮತಿ ಆಶ್ರಮʼ ಎಂದು ನಮೂದಿಸಿದ್ದರು.Full View

1934 ರ ಜನವರಿ 7 ರಂದು ಮಹಾತ್ಮಾಗಾಂಧಿ ಅವರು ಶೇಷಾದ್ರಿಪುರಂ ದೀನಸೇವಾ ಸಂಘಕ್ಕೆ ಭೇಟಿ ನೀಡಿ ಅಲ್ಲಿಯ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದಿದ್ದರು. ರಾಜ್ಯದಲ್ಲಿರುವ ತಳ ಸಮುದಾಯದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಮನುಷ್ಯರೆಲ್ಲ ಒಂದೇ ಜಾತಿಗೆ ಸೇರಿದವರು ಎಂಬ ಸಂದೇಶ ಸಾರಲು ಚಿಕ್ಕಮಗಳೂರು, ಕಡೂರು , ಬಳ್ಳಾರಿ, ವಿಜಯಪುರ ( ಬಿಜಾಪುರ), ಮಂಗಳೂರು ಹಾಗೂ ಕಾರವಾರದಲ್ಲಿ ಹರಿಜನ ಪ್ರವಾಸ ಕೈಗೊಂಡು, ಅಸ್ಪ್ರಶ್ಯತೆ ತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ಉತ್ತೇಜನ ನೀಡಿದ್ದರು. ಈ ಸಂದರ್ಭದಲ್ಲಿ ಸಂಗ್ರಹವಾದ ಹರಿಜನ ನಿಧಿಯನ್ನು ಹರಿಜನರ ಏಳಿಗೆಗಾಗಿ ವಿನಿಯೋಗಿಸಿದ್ದರು. ಗಾಂಧೀಜಿ ಅವರು ಕರ್ನಾಟಕದಲ್ಲಿ ಒಟ್ಟು ಎರಡು ಬಾರಿ ಹರಿಜನ ನಿಧಿ ಪ್ರವಾಸ ಕೈಗೊಂಡಿರುವುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.

1934 ಜೂನ್ 6 ರಂದು ಮಂಡ್ಯ ಬಳಿಯ ಸೋಮನಹಳ್ಳಿಗೆ ಭೇಟಿ ನೀಡಿದ್ದ ಗಾಂಧೀಜಿ ಅವರು ಅಲ್ಲಿಯ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಆಗ ಬಾಲಕರಾಗಿದ್ದ ಎಸ್.ಎಂ. ಕೃಷ್ಣ ಅವರು ಗಾಂಧೀಜಿಯವರ ಆಶೀರ್ವಾದ ಪಡೆದು, ಮುಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವುದು ಈಗ ಇತಿಹಾಸ. ಗಾಂಧೀಜಿ ಅವರು ತಮ್ಮ ಪ್ರವಾಸದ ವೇಳೆ ಕೆಂಗೇರಿಯಲ್ಲಿ 1934 ರ ಜನವರಿ 6 ರಂದು ಕುಡಿಯುವ ನೀರಿನ ಬಾವಿ ಉದ್ಘಾಟಿಸಿದ್ದರು.

ಇದಕ್ಕೂ ಎರಡು ದಿನ ಮೊದಲು ಅಂದರೆ ಜೂನ್ 4 ರಂದು ಮಲ್ಲೇಶ್ವರಂ ಅಸೋಸಿಯೇಷನ್ ಸಮಾರಂಭದಲ್ಲಿ ಗಾಂಧೀಜಿ ಭಾಗವಹಿಸಿದ್ದರು. ಇಲ್ಲಿ ಮಹಿಳಾ ಸೇವಾ ಸಮಾಜ ಒಪ್ಪಿಸಿದ ಭಿನ್ನವತ್ತಳೆಗೆ ಗಾಂಧೀಜಿ ಸ್ಥಳದಲ್ಲೇ ಉತ್ತರ ನೀಡಿದ್ದರು.

ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ 1936 ರಲ್ಲಿ ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ಕಸ್ತೂರ್ಬಾ ಗಾಂಧಿಯವರು ಶಾಲೆಯನ್ನು ಉದ್ಘಾಟಿಸಿದ್ದರು.

1934 ರಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಗಾಂಧೀಜಿಯವರು ಭೇಟಿ ನೀಡಿದ್ದರು. ಶಿರಸಿಯ ಮಾರಿಕಾಂಬಾ ದೇವಿಗೆ ಕೋಣ ಬಲಿಕೊಡುವ ಪದ್ದತಿಯ ಬಗ್ಗೆ ಗಾಂಧೀಜಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗಾಂಧೀಜಿಯವರು ಆಕ್ಷೇಪ ಗೌರವಿಸಿದ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಂದಿನಿಂದ ಮಾರಿಕಾಂಬಾ ದೇವಿಗೆ ಕೋಣ ಬಲಿಕೊಡುವ ಪದ್ದತಿ ನಿಲ್ಲಿಸಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಬದನವಾಳದ ನೂಲುವ ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಹರಿಜನ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಿದ್ದರು.

1936 ಮೇ 31 ರಂದು ಕೋಲಾರದ ಹಿರಿಯ ಮುಖಂಡ ಕೆ.ಸಿ.ರೆಡ್ಡಿಯವರು ಗಾಂಧೀಜಿ ಅವರೊಂದಿಗೆ ಜನಜಾಗೃತಿ ಪಾದಯಾತ್ರೆ ನಡೆಸಿದ್ದರು. ಇದೇ ವರ್ಷ ಜೂನ್ 5 ರಂದು ಮಹಾತ್ಮಾಗಾಂಧಿ ಅವರು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಗೆ ಭೇಟಿ ನೀಡಿ ಅಲ್ಲಿಯ ಶಿಕ್ಷಣ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ನಡೆಸುತ್ತಿರುವ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು.

ಗಾಂಧಿ ಗ್ರಾಮವೆಂದೇ ಹೆಸರಾದ ಬೆಳಗಾವಿ ಜಿಲ್ಲೆಯ ಹುದಳಿ ಗ್ರಾಮಕ್ಕೆ 1937 ರಂದು ಭೇಟಿ ನೀಡಿದ್ದರು. ಸಹಕಾರ ತತ್ವದಡಿಯಲ್ಲಿ ಗ್ರಾಮೋದ್ಯೋಗ ಆರಂಭಿಸಲು ಗ್ರಾಮಸ್ಥರಿಗೆ ಉತ್ತೇಜನ ನೀಡಿದ್ದರು. ಇದು ಗಾಂಧೀಜೀ ಅವರು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊನೆಯ ಭೇಟಿಯಾಗಿದೆ ಎಂದು ಬೆಂಗಳೂರಿನ ಗಾಂಧಿ ಭವನದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೊಡೇ ಪಿ ಕೃಷ್ಣ ಹೇಳುತ್ತಾರೆ.

ಬಾಪೂಜಿ ಅವರು 1915 ರ ಮೇ ರಿಂದ 1937 ರ ತನಕ 18 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರು,ಬೆಳಗಾವಿ, ಬಿಜಾಪುರ, ಕಾಸರಗೋಡು, ಮಂಗಳೂರು, ಉತ್ತರ ಕನ್ನಡ, ಧಾರವಾಡ, ಗದಗ, ಸಾಂಗ್ಲಿ, ಬಾಗಲಕೋಟೆ, ಸೊಲ್ಲಾಪುರ, ಬಳ್ಳಾರಿ, ಗುಲ್ಬರ್ಗಾ, ತುಮಕೂರು, ಯಡತೊರೆ, ಶ್ರೀರಂಗಪಟ್ಟಣ, ಮೈಸೂರು, ರಾಮನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಹೊಸೂರು, ಕೃಷ್ಣಗಿರಿ, ಹಿಂದೂಪುರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಉಡುಪಿ ಜಿಲ್ಲೆಗಳ 154 ಊರುಗಳಿಗ ಭೇಟಿ ನೀಡಿದ್ದರು ಎಂದು ಡಾ ವೊಡೇ ಪಿ.ಕೃಷ್ಣ ವಿವರಿಸಿದರು.

ಹೀಗೆ.. ಗಾಂಧೀಜಿ ಅವರು ಕರ್ನಾಟಕದ ನೆಲದಲ್ಲಿ ಸ್ವಾತಂತ್ರ್ಯ ಚಳವಳಿ ಜೊತೆಗೆ ಮಹಿಳಾ ಸ್ವಾವಲಂಬನೆ, ಅಶ್ಪೃಶ್ಯತೆ ನಿವಾರಣೆ, ಶಿಕ್ಷಣ, ಗುಡಿ ಕೈಗಾರಿಕೆಗೆ ಆದ್ಯತೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

Tags:    

Similar News