ತಾರಾ ನಟ ದರ್ಶನ್‌ ಅಭಿನಯದ ಚಿತ್ರಗಳ ನಷ್ಟ, ಕಷ್ಟ ಸಂಕಷ್ಟ

ಮಂಡಳಿಯ ಮೂಲಗಳ ಪ್ರಕಾರ; ಮುಂದಿನ ದಿನಗಳಲ್ಲಿ ದರ್ಶನ್‌ ಅವರ ಒಟ್ಟು 14 ಚಿತ್ರಗಳು ನಿರ್ಮಾಣವಾಗುವ ಬಗ್ಗೆ ಮಾಹಿತಿ ಇತ್ತು. ಪ್ರತಿ ಚಿತ್ರಕ್ಕೂ ದರ್ಶನ್‌ ಎರಡರಿಂದ ಮೂರು ಕೋಟಿ ರೂಪಾಯಿಗಳಷ್ಟು ಮುಂಗಡ ಪಡೆದಿದ್ದರೂ, ಅದು 30 ಕೋಟಿ ದಾಟುವ ಸಾಧ್ಯತೆ ಇತ್ತು. . ಇದುವರೆಗೆ ʻಡೆವಿಲ್‌ʼ ಚಿತ್ರಕ್ಕೆ ಮಾಡಿರುವ ಖರ್ಚು ಲೆಕ್ಕಹಾಕಿದರೆ, ಈಗಾಗಲೇ ದರ್ಶನ್‌ ಅವರ ಚಿತ್ರಗಳ ಮೇಲೆ ಇರುವ ತಕ್ಷಣದ ಬಂಡವಾಳ 50 ಕೋಟಿ ರೂಪಾಯಿ ದಾಟಬಹುದು ಎನ್ನಲಾಗುತ್ತಿದೆ

Update: 2024-07-10 00:30 GMT

ವಿವಾದಾತ್ಮಕ ಸ್ಟಾರ್‌ ನಟ ದರ್ಶನ್‌ , ತಮ್ಮ ʻಅಭಿಮಾನಿʻ ಎನ್ನಿಸಿಕೊಂಡಿದ್ದ ವ್ಯಕ್ತಿಯೊಬ್ಬರ ಅಮಾನವೀಯ ಕೊಲೆಯ ಹಿನ್ನೆಲೆಯಲ್ಲಿ ಜೈಲು ಸೇರಿ ನಾಳೆಗೆ ಸರಿಯಾಗಿ ಒಂದು ತಿಂಗಳಾಗುತ್ತದೆ. ದರ್ಶನ್‌ ಅವರ ಆರೋಪಿತ ಅಪರಾಧ ಪ್ರಕರಣವನ್ನು ಎಳೆಎಳೆಯಾಗಿ ಇಂಚಿಂಚಾಗಿ ಬಿಡಿಸಿ ಬಿಡಿಸಿ ಇಟ್ಟರೂ, ಸುದ್ದಿ ಚಾನೆಲ್ ಗಳ ಹಸಿವು ಹಿಂಗಿದಂತೆ ಕಾಣುತಿಲ್ಲ.

“ಕಳೆದ ಹದಿಮೂರು ವರ್ಷಗಳಿಂದ ಬದಲಾಯಿತೆನ್ನಲಾದ ದರ್ಶನ್‌ ಅವರ ವ್ಯಕ್ತಿತ್ವ, ಅವರ ಹಿಂದಿನ ಅಪರಾಧ ಸ್ವರೂಪದ ಸಾಹಸಗಳನ್ನು ಚರ್ವಿತಚರ್ವಣವಾಗಿಸಿದರೂ, ಇದು ಎಂದೆಂದೂ ಮುಗಿಯದ ಕಥೆ ಎಂಬಂತೆ ಸುದ್ದಿ ಚಾನೆಲ್ ಗಳು ಧಾರವಾಹಿ ಸ್ವರೂಪದಲ್ಲಿ ಪ್ರಸಾರ ಮಾಡಿ, ಅಪರಾಧ ನಿನ್ನೆ ಮೊನ್ನೆ ನಡೆದಂತೆ ನಡೆದುಕೊಳ್ಳುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ”, ಎನ್ನುವ ಸೂಕ್ಷ್ಮ ಮನಸ್ಸಿನ ನಿರ್ದೇಶಕರ ಮಾತುಗಳು ಅರ್ಥಪೂರ್ಣ.

“ಆದರೆ ದರ್ಶನ್‌ ಅವರ ಅರೋಪಿತ ಅಪರಾಧಿ ಕೃತ್ಯಕ್ಕೆ ತಡವಾಗಿ ಪ್ರತಿಕ್ರಿಯಿಸಿದ ಚಿತ್ರರಂಗದ ಕೆಲವು ಮಂದಿಯನ್ನು ದರ್ಶನ್‌ ಅವರ ಅಭಿಮಾನಿಗಳೆನ್ನಿಸಿಕೊಂಡವರು ಕಾಡುತ್ತಿರುವುದನ್ನು ಗಮನಿಸಿದರೆ, ಯಾರಿಗೆ ತಾನೇ ತಮ್ಮ ಹೆಸರು ಹೇಳಿ ಪ್ರತಿಕ್ರಿಯಿಸಲು ಸಾಧ್ಯ ಹೇಳಿ”, ಎಂದು ಅವರು ಕೇಳಿದಾಗ ಅವರ ಪ್ರಶ್ನೆಗೆ ಮಾಧ್ಯಮಗಳ ಬಳಿಯೂ ಉತ್ತರವಿಲ್ಲ.

ಇನ್ನು, ದರ್ಶನ್‌ ಅಭಿಮಾನಿಗಳು ತಮ್ಮ ʻಡಿ-ಬಾಸ್‌ʼ ಖೈದಿ ಸಂಖ್ಯೆಯನ್ನು ತಮ್ಮ ವಾಹನಗಳ ಹಿಂದೆ ಹಾಕಿಸಿಕೊಂಡು ಮೆರೆಯುತ್ತಿರುವ ಪರಿಯನ್ನು ಗಮನಿಸಿದರೆ, ನಾಗರಿಕ ಸಮಾಜ ತಲೆ ತಗ್ಗಿಸುವಂತಿಲ್ಲವೇ? ಎಂಬ ಅವರ ಪ್ರಶ್ನೆಗೂ ಮಾಧ್ಯಮದವರ ಬಳಿ ಉತ್ತರವಿಲ್ಲ. ದರ್ಶನ್‌ ಅವರ ಬಂಧನ, ವಿಚಾರಣೆ, ನಂತರ ವಿಚಾರಣಾಧೀನ ಖೈದಿಯಾದ ಪ್ರತಿಯೊಂದು ಕ್ಷಣವನ್ನು ʻಸಂಭ್ರಮಿಸುತ್ತಿರುವʼ ಸುತ್ತಲಿನ ಜಗತ್ತು, ಆತಂಕ ಹುಟ್ಟಿಸುವಂತಿದೆ ಎನ್ನುವ ಅವರ ಆತಂಕವೂ ಅರ್ಥಪೂರ್ಣ.

ನಿಸ್ಸಹಾಯಕ ಛೇಂಬರ್‌

ದರ್ಶನ್‌ ಅವರ ದುರ್ನಡತೆಯ ದಾಷ್ಟೀಕತೆಯ ಹಿನ್ನೆಲೆಯಲ್ಲಿ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು, ಅವರ ಚಿತ್ರಗಳ ಮೇಲೆ ಹೂಡಿರುವ ಬಂಡವಾಳದ ಭವಿಷ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce KFCC)) ಕೂಡ ನಿಸ್ಸಹಾಯಕವಾಗಿದೆ ಎಂಬುದು ಮತ್ತೆ ಮತ್ತೆ ರುಜುವಾತಾಯಿತು.

ಈಗ ಒಂದು ತಿಂಗಳ ನಂತರ ಚರ್ಚೆಯಾಗುತ್ತಿರುವ ಸಂಗತಿಯೆಂದರೆ, ದರ್ಶನ್‌ ಅವರ ಚಿತ್ರಗಳ ಮೇಲೆ ಬಂಡವಾಳ ಹೂಡಿದವರ ಮುಂದಿನ ದಾರಿಯಾವುದಯ್ಯ? ಆ ಚಿತ್ರಗಳ ಭವಿಷ್ಟವೇನು? ಒಪ್ಪಿಕೊಂಡಿರುವ ಚಿತ್ರಗಳ ಗತಿಯೇನು? ಎಂಬ ಪ್ರಶ್ನೆ ಕನ್ನಡ ಚಿತ್ರರಂಗದ ಮುಂದಿರುವುದಂತೂ ನಿಜ.

ಹದಿನಾಲ್ಕು ಚಿತ್ರ

ಕನ್ನಡ ಚಿತ್ರರಂಗದ ಮೂಲಗಳ ಪ್ರಕಾರ, ಶೂಟಿಂಗ್‌ ನಡೆಯುತ್ತಿದ್ದ ಮಿಲನ ಪ್ರಕಾಶ್‌ ನಿರ್ದೇಶನದ ʻಡೆವಿಲ್‌ʼ ಸೇರಿದಂತೆ ದರ್ಶನ್‌ ಒಪ್ಪಿಕೊಂಡಿರುವ ಒಟ್ಟು ಚಿತ್ರಗಳ ಸಂಖ್ಯೆ ಹದಿನಾಲ್ಕು. ಈ ಪೈಕಿ ಕೆಲವು ಚಿತ್ರಗಳ ಕಥೆಯನ್ನು ಕೇಳಿ ಅಂತಿಮಗೊಳಿಸಿದ್ದರೆನ್ನಲಾಗಿದೆ. ಹೆಸರು ಬಹಿರಂಗ ಪಡಿಸಲು ಬಯಸದ ಹಲವರು ಈಗಾಗಲೇ ದರ್ಶನ್‌ ಅವರಿಗೆ ಮುಂಗಡ ಹಣ ಕೊಟ್ಟು ಕೈ ಮುಗಿದು ಬಂದಿದ್ದರೆನ್ನಲಾಗಿದೆ. “ಆ ನಿರ್ಮಾಪಕರಲ್ಲಿ ಬಹಳಷ್ಟು ಮಂದಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು KFCCಯ ಪದಾಧಿಕಾರಿಯೊಬ್ಬರು ಕನಿಕರದಿಂದ ಹೇಳುತ್ತಾರೆ. ಅವರೀಗ ತಾವು ಹಣ ಕೊಟ್ಟಿರುವುದಾಗಿ ಯಾರೆದುರಿಗೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ.

ಮಂಡಳಿಯ ಮೂಲಗಳ ಪ್ರಕಾರ; ಮುಂದಿನ ದಿನಗಳಲ್ಲಿ ದರ್ಶನ್‌ ಅವರ ಒಟ್ಟು 14 ಚಿತ್ರಗಳು ನಿರ್ಮಾಣವಾಗುವ ಬಗ್ಗೆ ಮಾಹಿತಿ ಇತ್ತು. ಪ್ರತಿ ಚಿತ್ರಕ್ಕೂ ದರ್ಶನ್‌ ಎರಡರಿಂದ ಮೂರು ಕೋಟಿ ರೂಪಾಯಿಗಳಷ್ಟು ಮುಂಗಡ ಪಡೆದಿದ್ದರೂ, ಅದು 30 ಕೋಟಿ ದಾಟುವ ಸಾಧ್ಯತೆ ಇತ್ತು. . ಇದುವರೆಗೆ ʻಡೆವಿಲ್‌ʼ ಚಿತ್ರಕ್ಕೆ ಮಾಡಿರುವ ಖರ್ಚು ಲೆಕ್ಕಹಾಕಿದರೆ, ಈಗಾಗಲೇ ದರ್ಶನ್‌ ಅವರ ಚಿತ್ರಗಳ ಮೇಲೆ ಇರುವ ತಕ್ಷಣದ ಬಂಡವಾಳ 50 ಕೋಟಿ ರೂಪಾಯಿ ದಾಟಬಹುದು ಎನ್ನಲಾಗುತ್ತಿದೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಗಳ ಪ್ರಕಾರ; ದರ್ಶನ್‌ ಅವರು ಕಥೆ ಕೇಳಿ ಅಂತಿಮಗೋಳಿಸಿದ್ದ ಚಿತ್ರಗಳ ಪೈಕಿ ತೆಲುಗಿನ ಪ್ರಸಾದ್‌ ಬಾಬು ನಿರ್ಮಾಣದ ಶ್ರೀಕಾಂತ್‌ ಅಡ್ಡಾಲ ಅವರು ನಿರ್ದೇಶನದ ಚಿತ್ರವೂ ಒಂದು. ʻಕೊತ್ತ ಬಂಗಾರು ಲೋಕಂʼ ʻಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚೆಟ್ಲುʼ, ʻಮುಕುಂದʼ ʻಬ್ರಹ್ಮೋತ್ಸವಂʼ ʻನಾರಪ್ಪʼ ಚಿತ್ರಗಳನ್ನು ನಿರ್ದೇಶಿಸಿ ಹೆಸರುಗಳಿಸಿರುವ ಶ್ರೀಕಾಂತ ಅಡ್ಡಾಲ ಅವರಿಂದ ದರ್ಶನ ಚಿತ್ರ ಮಾಡಿಸುವ ಉಮೇದು ಇದ್ದದ್ದು, ತೆಲುಗಿನ ಪ್ರಸಾದ್‌ ಬಾಬುಗೆ. ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಅರಂಭಗೊಂಡು, ಡಿಸೆಂಬರ್‌ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇತ್ತು. ಸದ್ಯಕ್ಕಂತೂ ಈ ಚಿತ್ರ, ಚಿತ್ರಕಥೆಯ ಹಂತದಲ್ಲಿಯೇ ನಿಲುವಂತಿದೆ.

ದರ್ಶನ್‌ ಬಂಧನದಿಂದ ಕೈಕಟ್ಟಿ ಕುಳಿತಿರುವ ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು. ಇವರ ನಿರ್ಮಾಣದ ಸುದೀಪ್‌ ನಟಿಸಿದ್ದ ʻಕೋಟಿಗೊಬ್ಬʼ ಚಿತ್ರ ಗಲ್ಲಾಪೆಟ್ಟಿಗೆಯನ್ನು ಸೂರೆ ಮಾಡಿದ್ದು ಈಗ ಇತಿಹಾಸ. ಈ ಸೂರಪ್ಪ ಬಾಬು ಅವರಿಗೂ ದರ್ಶನ್‌ ಕಥೆಯೊಂದನ್ನು ಒಪ್ಪಿಕೊಂಡು ಚಿತ್ರ ಮಾಡಲು ಸಜ್ಜಾಗಿದ್ದರೆನ್ನಲಾಗಿದೆ. ಬಹುಭಾಷಾ ನಿರ್ದೇಶಕರೊಬ್ಬರಿಂದ ಸೂರಪ್ಪ ಬಾಬು ಅವರು ದರ್ಶನ್‌ ಅವರಿಗೆ ಕಥೆ ಕೇಳಿಸಿದ್ದರಂತೆ. “ನನ್ನ ಚಿತ್ರದ ಒಂದು ಸಾಲಿನ ಕಥೆಯನ್ನು ಕೇಳಿ ಉಲ್ಲಾಸಿತರಾಗಿದ್ದ ದರ್ಶನ್‌, ತಾವು ಬ್ಯಾಂಕಾಕ್‌ ಗೆ ತೆರಳುತ್ತಿದ್ದು, ಅಲ್ಲಿಂದ ಹಿಂದಿರುಗಿದ ನಂತರ, ಉಳಿದ ಮಾತುಕತೆ ನಡೆಸೋಣ” ಎಂದಿದ್ದರು ಸ್ವತಃ ಸೂರಪ್ಪ ಬಾಬು ಮಾಧ್ಯಮದವರ ಮುಂದೆ ಹೇಳಿದ್ದಾರೆ.

ವೀರ ಸಿಂಧೂರ ಲಕ್ಷ್ಮಣ ಚಿತ್ರ

ಶೈಲಜಾ ನಾಗ್‌ ಹಾಗೂ ಬಿ. ಸುರೇಶ್‌ ನಿರ್ಮಾಣದ ತರುಣ್‌ ಸುಧೀರ್‌ ನಿರ್ದೇಶನದ ಚಿತ್ರಕಥೆಯನ್ನು ಕೂಡ ದರ್ಶನ್‌ ಒಪ್ಪಿಕೊಂಡಿದ್ದರು. ಐತಿಹಾಸಿಕ ಕ್ರಾಂತಿಕಾರಿ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರವದು. ಈ ಚಿತ್ರದ ಜಾಹಿರಾತುಗಳು ಆಗಲೇ ಜಗಜ್ಜಾಹೀರಾಗಿತ್ತು. “ನಾವು D59 ಹೆಸರಿನಲ್ಲಿ ದರ್ಶನ್‌ ಅವರ ಜತೆಗೆ ಸಿನಿಮಾ ಘೋಷಣೆ ಮಾಡಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಅದು ವೀರ ಸಿಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಅದು.

ಬಂಧನವಾಗುವ ಮೊದಲು ನಿರ್ದೇಶಕ ಎಂ ಡಿ ಶ್ರೀಧರ್‌ ಅವರು, ದರ್ಶನ್‌ ಅವರಿಗೆ ಎರಡು ಕಥೆ ಹೇಳಿದ್ದರಂತೆ . “ಈ ಕಥೆಯನ್ನು ʻಡೆವಿಲ್‌ʼ ಚಿತ್ರೀಕರಣದ ಸಂದರ್ಭದಲ್ಲಿ ಹೇಳಿದ್ದು, ಎರಡೂ ಕಥೆಯನ್ನು ಒಪ್ಪಿದ್ದ ದರ್ಶನ್‌ ಅವರು ʼಚೆನ್ನಾಗಿದೆʼ ಮಾಡೋಣ, ಶೀಘ್ರದಲ್ಲಿ ವಿವರವಾಗಿ ಚರ್ಚಿಸೋಣʼ ಎಂದು ದರ್ಶನ್‌ ಹೇಳಿದ್ದರು. ಈ ಚಿತ್ರಕ್ಕಾಗಿ ಬಹಳ ಹಿಂದೆ ದೊಡ್ಡ ಮಟ್ಟದ ಮುಂಗಡ ಹಣವನ್ನು ಕೂಡ ಮಂಗಳೂರು ಮೂಲದ ನಿರ್ಮಾಪಕರೊಬ್ಬರಿಂದ ಕೊಡಿಸಿದ್ದೇನೆ”, ಎನ್ನುತ್ತಾರೆ ಶ್ರೀಧರ್.‌

ರಾಘವೇಂದ್ರ ಹೆಗ್ಡೆ ಅವರು; “ನಾನು ದರ್ಶನ್‌ ಅವರ ಜೊತೆಗೆ ಸಿನಿಮಾ ಮಾಡಲು ಸಜ್ಜಾಗಿದ್ದೇನೆ. ಪೌರಾಣಿಕ ಚಿತ್ರವದು. ಡಿಸೆಂಬರ್‌ ತಿಂಗಳಲ್ಲಿ ಚಿತ್ರೀಕರಣ ನಡೆಸಲು ಯೋಚಿಸಲಾಗಿದೆ”, ಎಂದು ದರ್ಶನ ಅವರ ಬಂಧನದ ಕೆಲವು ದಿನಗಳು ಮುನ್ನ ಹೇಳಿದ ನೆನಪಾಗುತ್ತಿದೆ.

ಇವಿಷ್ಟೇ ಅಲ್ಲದೆ, ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಗಳ ಪ್ರಕಾರ; ಜೋಗಿ ಪ್ರೇಮ್‌ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಚಿತ್ರ, ಪೀಪಲ್ಸ್‌ ಮೀಡಿಯಾ ಫ್ಯಾಕ್ಟ್ರಿ, ರಘುನಾಥ ಸೋಗಿ, ಮೋಹನ್‌ ನಟರಾಜನ್‌ ಮುಂತಾದವರು ದರ್ಶನ್ ಗೆ ಚಿತ್ರಮಾಡುವ ಬಗ್ಗೆ ಮಾತುಕತೆಯಾಗಿತ್ತು. ಮುಂಗಡ ಹಣ ಕೂಡ ನೀಡಲಾಗಿತ್ತು. ಎನ್ನುತ್ತಾರೆ. ಇವುಗಳ ಸತ್ಯಾಸತ್ಯತೆಯನ್ನು ಖಚಿತ ಪಡಿಸುವುದು ಮಂಡಳಿಗೂ ಕಷ್ಟ.

ಒಟ್ಟಾರೆಯಾಗಿ ತಾರಾ ನಟರೊಬ್ಬರ ಅವಘಡಗಳು ಯಾವ ರೀತಿ ಚಿತ್ರರಂಗವನ್ನು ಕಾಣುತ್ತವೆ ಎಂಬುದಕ್ಕೆ ದರ್ಶನ್‌ ಪ್ರಕರಣ ಒಂದು ಅತ್ಯುತ್ತಮ ನಿದರ್ಶನ. ಈ ಹೊಡೆತದಿಂದ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಲು ಕೆಲವು ಕಾಲ ಬೇಕೇ ಬೇಕು? ಅದರೆ ಈ ಪ್ರಕರಣದಿಂದ ಕನ್ನಡ ಚಿತ್ರರಂಗಕ್ಕೆ ಅಂಟಿರುವ ಮಸಿ , ಎಷ್ಟು ಕಾವೇರಿ ನೀರು ಬಳಸಿ ತೊಳೆದರೂ ಹೋಗಲಾರದೆಂಬದು ಎಲ್ಲರಿಗೂ ಗೊತ್ತಿರುವ ಸಾರ್ವತ್ರಿಕ ಸತ್ಯ.

Tags:    

Similar News