ಬಳ್ಳಾರಿ ಬಾಣಂತಿಯರ ಸಾವು | ಐವಿ ದ್ರಾವಣದಲ್ಲಿ ಫಂಗಸ್, ಬ್ಯಾಕ್ಟೀರಿಯಾ ಪತ್ತೆ!
ರಾಜ್ಯ ಸರ್ಕಾರ ಐವಿ ದ್ರಾವಣದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿತ್ತು. ಅಲ್ಲದೇ ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಡ್ರಗ್ಸ್ ಕಂಟ್ರೋಲರ್ ಉಮೇಶ್ ಎಂಬುವರನ್ನು ಅಮಾನತು ಮಾಡಿತ್ತು.;
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ಕುರಿತಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಕಂಪನಿ ಪೂರೈಸಿದ 92 ಐವಿ ದ್ರಾವಣದ ಸ್ಯಾಂಪಲ್‌ಗಳ ವರದಿ ಬಂದಿದ್ದು, ದ್ರಾವಣದಲ್ಲಿ ಫಂಗಸ್ ಸೇರಿದಂತೆ ಹಲವು ಬ್ಯಾಕ್ಟೀರಿಯಾಗಳಿರುವುದು ಪತ್ತೆಯಾಗಿದೆ.
ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಪೂರೈಸುವ ಐವಿ ದ್ರಾವಣ ಬಳಸದಂತೆ ಆರು ತಿಂಗಳ ಹಿಂದೆಯೇ ಸರ್ಕಾರ ಸೂಚಿಸಿದ್ದರೂ ದ್ರಾವಣ ಬಳಸಿದ ಕಾರಣ ಬಾಣಂತಿಯರ ಸಾವಾಗಿದೆ ಎಂದು ತಜ್ಞರ ಸಮಿತಿ ಹೇಳಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐವಿ ದ್ರಾವಣದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿತ್ತು. ಅಲ್ಲದೇ ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಡ್ರಗ್ಸ್ ಕಂಟ್ರೋಲರ್ ಉಮೇಶ್ ಎಂಬುವರನ್ನು ಅಮಾನತು ಮಾಡಿತ್ತು.
ಐವಿ ದ್ರಾವಣವು ಅಸುರಕ್ಷಿತ ಎಂದು ರಾಜ್ಯದ ಪ್ರಯೋಗಾಲಯ ವರದಿ ನೀಡಿದೆ. ಐವಿ ದ್ರಾವಣದಲ್ಲಿ ಫಂಗಸ್ ಸೇರಿದಂತೆ ವಿವಿಧ ಬ್ಯಾಕ್ಟೀರಿಯಾಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ವಿವರಣೆ ಕೋರಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಕೇಂದ್ರದ ಡ್ರಗ್ ಕಂಟ್ರೋಲ್ ಇಲಾಖೆಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಬಳಕೆಗೆ ನಿರ್ಬಂಧ ಹೇರಿದ್ದ 22 ಬ್ಯಾಚ್‌ಗಳ ಐವಿ ದ್ರಾವಣವನ್ನು ರೋಗಿಗಳಿಗೆ ನೀಡಬಹುದು ಎಂದು ಕೇಂದ್ರದ ಡ್ರಗ್ ಲ್ಯಾಬೊರೇಟರಿ ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಕಂಪನಿಯು 192 ಬ್ಯಾಚ್‌ಗಳಲ್ಲಿ ಐವಿ ದ್ರಾವಣ ರಿಂಗರ್ ಲ್ಯಾಕ್ಟೇಟ್ ಕಳುಹಿಸಿತ್ತು. ಈ ಪೈಕಿ 22 ಬ್ಯಾಚ್‌ಗಳ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಈ ಐವಿ ದ್ರಾವಣ ಬಳಸದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು. 22 ಬ್ಯಾಚ್‌ಗಳ ಐವಿ ದ್ರಾವಣವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಕೇಂದ್ರದ ಡ್ರಗ್ ಲ್ಯಾಬೊರೇಟರಿಯು 22 ಬ್ಯಾಚ್‌ಗಳು ಬಳಕೆಗೆ ಯೋಗ್ಯವಾಗಿವೆ ಎಂದು ತಿಳಿಸಿತ್ತು. ಇದೇ ವರದಿಯನ್ನು ಕಂಪನಿಯು ರಾಜ್ಯದ ಔಷಧ ನಿಗಮದ ಮುಂದಿಟ್ಟು, ಟೆಂಡರ್ ನಿಯಮಗಳ ಪ್ರಕಾರ ಐವಿ ದ್ರಾವಣದ ಬಳಕೆಗೆ ನಿರ್ಬಂಧ ಹೇರುವಂತಿಲ್ಲ ಎಂದು ತಿಳಿಸಿತ್ತು.
ಕಂಪನಿಯನ್ನು ಕರ್ನಾಟಕ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿರುವ ಹಿನ್ನೆಲೆಯಲ್ಲಿ ಐವಿ ದ್ರಾವಣದ ಸ್ಯಾಂಪಲ್‌ನ್ನು ಕೇಂದ್ರದ ಡ್ರಗ್ ಲ್ಯಾಬರೋಟರಿಗೆ ಕಳುಹಿಸಲಾಗಿದೆ. ಡಿ. 9 ರಂದು ಪ್ರಯೋಗಾಲಯದಿಂದ ಪರೀಕ್ಷಾ ವರದಿ ಬರಲಿದೆ.
ಔಷಧ ನಿಯಂತ್ರಣ ಇಲಾಖೆಗೆ ಮುಖ್ಯಸ್ಥರ ನೇಮಕ
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರು ಸಾವಿನ ಪ್ರಕರಣದ ನಂತರ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಇಷ್ಟು ದಿನ ಇಲಾಖೆಯ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಡ್ರಗ್ ಕಂಟ್ರೋಲರ್ ಅಮಾನತು ಬಳಿಕ ಆಹಾರ ಇಲಾಖೆ ಆಯುಕ್ತರಾದ ಐಎಎಸ್ ಅಧಿಕಾರಿ ಕೆ.ಶ್ರೀನಿವಾಸ ಅವರನ್ನು ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.