ಹುಲಿ ಹಿಡಿಯಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಬೋನಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು!
ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹುಲಿ ಸೆರೆಗೆ ಬೋನು ಇಟ್ಟಿತ್ತಾದರೂ, ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತ ಸುಳಿದಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.;
ಅರಣ್ಯ ಇಲಾಖೆಯ ಸಿಬಂದಿಗಳನ್ನು ಕೂಡಿಹಾಕಿದ ರೈತರು
ಹುಲಿಯನ್ನು ಸೆರೆ ಹಿಡಿಯಲು ನಿಮ್ಮಿಂದಾಗದಿದ್ದರೆ, ನೀವೇ ಬೋನಿನೊಳಗೆ ಕುಳಿತುಕೊಳ್ಳಿ!" - ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡಿದ ಖಡಕ್ ಎಚ್ಚರಿಕೆ. ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಓಡಾಡುತ್ತಾ, ಜಾನುವಾರುಗಳನ್ನು ಬಲಿ ಪಡೆಯುತ್ತಾ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಗ್ರಾಮಸ್ಥರು ಇಬ್ಬರು ಅರಣ್ಯ ಸಿಬ್ಬಂದಿಯನ್ನೇ ಹುಲಿಗಾಗಿ ಇಟ್ಟಿದ್ದ ಬೋನಿನಲ್ಲಿ ಕೂಡಿಹಾಕಿ ತಮ್ಮ ಆಕ್ರೋಶವನ್ನು ವಿನೂತನ ರೀತಿಯಲ್ಲಿ ಹೊರಹಾಕಿದ್ದಾರೆ.
ಕಳೆದ ಒಂದು ತಿಂಗಳಿಂದ ಬೊಮ್ಮಲಾಪುರ ಮತ್ತು ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿಯ ಹಾವಳಿ ಹೆಚ್ಚಾಗಿತ್ತು. ಜಮೀನುಗಳಿಗೆ ಹೋಗಲು, ರಾತ್ರಿ ವೇಳೆ ಮನೆಯಿಂದ ಹೊರಬರಲು ಜನ ಹೆದರುವಂತಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮಸ್ಥರ ತೀವ್ರ ಒತ್ತಡಕ್ಕೆ ಮಣಿದು, ಇಲಾಖೆಯು ಹುಲಿ ಸೆರೆಗೆ ಬೋನು ಇಟ್ಟಿತ್ತಾದರೂ, ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತ ಸುಳಿದಿರಲಿಲ್ಲ.
ಇದರಿಂದ ಸಹನೆ ಕಳೆದುಕೊಂಡ ಗ್ರಾಮಸ್ಥರು, ಮಂಗಳವಾರ ಗ್ರಾಮಕ್ಕೆ ಬಂದ ಅರಣ್ಯ ಸಿಬ್ಬಂದಿಯನ್ನು ತಡೆದು, "ನೀವು ಹುಲಿ ಹಿಡಿಯುವುದಿಲ್ಲ, ಬರೀ ಭರವಸೆ ಕೊಡುತ್ತೀರಿ" ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ, ಹುಲಿಗಾಗಿ ಇಟ್ಟಿದ್ದ ಬೋನಿನೊಳಗೆ ಸಿಬ್ಬಂದಿಯನ್ನು ಕೂಡಿಹಾಕಿ, ಮೇಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗುಂಡ್ಲುಪೇಟೆ ವಲಯದ ಎಸಿಎಫ್ ಸುರೇಶ್ ಮತ್ತು ಬಂಡೀಪುರ ವಲಯದ ಎಸಿಎಫ್ ನವೀನ್ ಕುಮಾರ್ ಅವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಈ ವೇಳೆ, ಅಧಿಕಾರಿಗಳು ಮತ್ತು ರೈತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. "ಕಾಡುಪ್ರಾಣಿಗಳ ಭಯದಲ್ಲಿ ನಾವು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದೇವೆ, ಆದರೆ ನೀವು ನಿರ್ಲಕ್ಷ್ಯ ತೋರುತ್ತಿದ್ದೀರಿ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ, ಕೂಡಲೇ ಸಾಕಾನೆಗಳನ್ನು ಬಳಸಿ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿದ ನಂತರ, ಗ್ರಾಮಸ್ಥರು ಸಿಬ್ಬಂದಿಯನ್ನು ಬೋನಿನಿಂದ ಹೊರಬಿಟ್ಟರು.