ವಂಚನೆ ಪ್ರಕರಣ | ಪ್ರಲ್ಹಾದ ಜೋಶಿ ಅಣ್ಣನ ಬಂಧನ; ಹುಬ್ಬಳ್ಳಿ ನಿವಾಸದಲ್ಲಿ ಪೊಲೀಸರ ಶೋಧ
ಎಸಿಪಿ ಚಂದನ್ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ ಗೋಪಾಲ್ ಜೋಶಿಯನ್ನು ಹುಬ್ಬಳ್ಳಿಯ ಇಂದಿರಾ ಕಾಲೊನಿಯ ಅವರ ನಿವಾಸದಿಂದ ಬಂಧಿಸಲಾಗಿದೆ.;
ಲೋಕಸಭೆ ಚುನಾವಣೆಯ ಟಿಕೆಟ್ ಆಮಿಷವೊಡ್ಡಿ 2 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ ಗೋಪಾಲ್ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರನಗರ ಠಾಣೆ ಎಸಿಪಿ ಚಂದನ್ ನೇತೃತ್ವದ ಪೊಲೀಸರ ತಂಡ ಹುಬ್ಬಳ್ಳಿಯಲ್ಲಿ ಶನಿವಾರ ಗೋಪಾಲ್ ಜೋಶಿಯನ್ನು ಬಂಧಿಸಿದೆ.
ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಫೂಲ್ ಸಿಂಗ್ ಚವ್ಹಾಣ್ ಅವರಿಗೆ ಬಿಜೆಪಿಯ ಟಿಕೆಟ್ ಆಮಿಷವೊಡ್ಡಿ ಅವರಿಂದ 2 ಕೋಟಿ ರೂ. ಪಡೆದು ವಂಚಿಸಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ದೇವಾನಂದ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೂರಿನನ್ವಯ ಗೋಪಾಲ್ ಜೋಶಿ ಪುತ್ರ ಅಜಯ್ ಜೋಶಿ, ಸೋದರಿ ವಿಜಯಲಕ್ಷ್ಮಿಯನ್ನು ಬಂಧಿಸಿದ್ದರು.
ನಾಪತ್ತೆಯಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಗೋಪಾಲ್ ಜೋಶಿ ಹುಬ್ಬಳ್ಳಿಯ ನಿವಾಸದಲ್ಲಿರುವ ಖಚಿತ ಮಾಹಿತಿ ಆಧರಿಸಿ ಶನಿವಾರ ಬಂಧಿಸಲಾಯಿತು.
ಎಸಿಪಿ ಚಂದನ್ ನೇತೃತ್ವದಲ್ಲಿ ಹುಬ್ಬಳ್ಳಿಯ ಇಂದಿರಾ ಕಾಲೊನಿಯಲ್ಲಿರುವ ಗೋಪಾಲ ಜೋಶಿ ನಿವಾಸದಲ್ಲಿ ಪೊಲೀಸರು ಶೋಧ ನಡೆಸಿದರು. ಪ್ರಕರಣದ ದೂರುದಾರರಾದ ಸುನಿತಾ ಚವ್ಹಾಣ್ ಅವರನ್ನು ಕರೆತಂದು ಪಂಚನಾಮೆ ಕೂಡ ನಡೆಸಿದರು.
ಗೋಪಾಲ್ ಜೋಶಿ ವಿಚಾರಣೆ
ಬಂಧಿತ ಆರೋಪಿಯಾದ ಗೋಪಾಲ್ ಜೋಶಿಯನ್ನು ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆತಂದು ಎಸಿಪಿ ಚಂದನ್ ನೇತೃತ್ವದಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು.
ಇಂದಿರಾ ಕಾಲೊನಿ ಮನೆಯಿಂದ ನೇರವಾಗಿ ಠಾಣೆಗೆ ಕರೆತಂದು ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಮನೆಯಲ್ಲಿ ಯಾವುದೇ ತಪಾಸಣೆ ನಡೆಸಿಲ್ಲ. ವಿಚಾರಣೆ ಮುಗಿಸಿ ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದರು ಎಂದು ಹುಬ್ಬಳ್ಳಿ ಪೊಲೀಸರು ತಿಳಿಸಿದ್ದಾರೆ.