Milk Price Hike | ಇಂದಿನಿಂದ ಹಾಲಿನ ದರ 4ರೂ.ಹೆಚ್ಚಳ ; 50ಎಂಎಲ್ ಹೆಚ್ಚುವರಿ ಹಾಲು ಹಿಂಪಡೆದ ಕೆಎಂಎಫ್

ಹೊಸ ದರ ಹೆಚ್ಚಳದ ಹಿನ್ನೆಲೆ 50 ಎಂಎಲ್‌ ಹಾಲು ಹಾಗೂ ಹೆಚ್ಚಳ ಮಾಡಿದ್ದ 2 ರೂ.ಗಳನ್ನು ಹಿಂಪಡೆದು ಈ ಹಿಂದಿನಂತೆ ಒಂದು ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲಾಗಿದೆ.;

Update: 2025-04-01 02:57 GMT

ನಂದಿನಿ ಹಾಲಿನ ದರ ಇಂದಿನಿಂದ ಲೀಟರ್ ಗೆ 4 ರೂ. ಹೆಚ್ಚಳವಾಗಿದೆ. 2024 ಜೂನ್ ತಿಂಗಳಲ್ಲಿ  ಹೆಚ್ಚುವರಿ ಹಾಲಿನೊಂದಿಗೆ  2 ರೂ ಏರಿಸಲಾಗಿದ್ದ ದರವನ್ನು  ಹಿಂಪಡೆಯುವ ಮೂಲಕ ಹೊಸ ದರ ಪರಿಷ್ಕರಣೆ ಮಾಡಲಾಗಿದೆ.

ಅಂದರೆ 44 ರೂ ಗಳಿಗೆ ಮಾರಾಟವಾಗುತ್ತಿದ್ದ ಲೀಟರ್ ಹಾಲಿನ ಬೆಲೆ 42 ರೂ. ಗಳಿಗೆ ಇಳಿಕೆಯಾಗಿ ಹೊಸ ದರ ಅನ್ವಯದೊಂದಿಗೆ 46 ರೂ. ಆಗಿದೆ. 

ಹಾಲು ಒಕ್ಕೂಟಗಳು ಹಾಗೂ ರೈತರು ಹಾಲಿನ ದರ ಹೆಚ್ಚಳಕ್ಕೆ ಬೇಡಿಕೆ  ಸಲ್ಲಿಸಿದ ಹಿನ್ನೆಲೆ ಪ್ರತಿ ಲೀಟರ್‌ ಹಾಲು ಹಾಗೂ  ಮೊಸರಿನ ದರವನ್ನು 4ರೂ. ಹೆಚ್ಚಳ ಮಾಡಲು ಸಚಿವಸಂಪುಟ ಅನುಮೋದನೆ ನೀಡಿತ್ತು. 

ಪ್ಯಾಕೆಟ್ ನಲ್ಲಿನ ಹೆಚ್ಚುವರಿ ಹಾಲು ಇರಲ್ಲ

2024 ಜೂನ್ ತಿಂಗಳಿಂದ ಪೂರೈಸುತ್ತಿದ್ದ 50 ಮಿಲಿ ಹೆಚ್ಚುವರಿ ಹಾಲನ್ನು ವಾಪಸ್ ಪಡೆಯಲಾಗಿದೆ. 

ಹೊಸ ದರ ಹೆಚ್ಚಳದ ಹಿನ್ನೆಲೆ 50 ಎಂಎಲ್‌ ಹಾಲು ಹಾಗೂ ಹೆಚ್ಚಳ ಮಾಡಿದ್ದ 2 ರೂ.ಗಳನ್ನು ಹಿಂಪಡೆದು ಈ ಹಿಂದಿನಂತೆ ಒಂದು ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲಾಗಿದೆ. ಹಾಲಿನ ದರ ದುಬಾರಿ ಎಂದು ಬೊಬ್ಬೆ ಹೊಡೆಯುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಸರ್ಕಾರ, ಈ ಹಿಂದಿನ 2 ರೂ ಹೆಚ್ಚಳ ಹಿಂಪಡೆದಿರುವುದರಿಂದ ಹಾಲಿನ ದರವನ್ನು 2 ರೂ ಮಾತ್ರ ಹೆಚ್ಚಿಸಿದಂತಾಗಿದೆ ಎಂದು ರಾಜ್ಯ ಸರ್ಕಾರ ಹಾಗೂ ಕೆ ಎಂ ಎಫ್ ವಾದವಾಗಿದೆ.

ಪರಿಷ್ಕರಣೆ ನಂತರ ಹೊಸ ದರಗಳ ವಿವರ

ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) - 46 ರೂ.

ಆರೇಂಜ್ ಪ್ಯಾಕೆಟ್ (ಫುಲ್ ಕ್ರೀಮ್ ಹಾಲು) - 58 ರೂ.

ಸಮೃದ್ಧಿ ಪ್ಯಾಕೆಟ್ (ಪ್ರಿಮಿಯಂ ಹಾಲು) - 58 ರೂ.

ಗ್ರೀನ್ ಸ್ಪೆಷಲ್ (ಶುಭಂ ಹಾಲು)- 56 ರೂ.

ನಾರ್ಮಲ್ ಗ್ರೀನ್ (ಸ್ಟ್ಯಾಂಡರ್ಡ್ ಹಾಲು) -54 ರೂ. ಆಗಿದೆ.

ಗ್ರಾಹಕರ ಮೇಲೆ ಹೆಚ್ಚಿದ ಹೊರೆ

ಹಾಲಿನ ದರ ಹೆಚ್ಚಳದಿಂದ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಿದೆ. ದಿನನಿತ್ಯ ಹಾಲು ಬಳಸುವ ಕುಟುಂಬಗಳಿಗೆ ತಿಂಗಳ ಖರ್ಚಿನ ಪಾವತಿ ಅಧಿಕವಾಗಲಿದೆ.

ಹೋಟೇಲ್, ಬೇಕರಿ ಮತ್ತು ಇತರ ವ್ಯಾಪಾರಸ್ಥರ ಮೇಲೂ ಬೆಲೆಏರಿಕೆ ಪರಿಣಾಮ ಬೀರಿದ್ದು, ಇದರಿಂದ ಹೋಟೇಲ್ ನಲ್ಲಿ ಟೀ, ಕಾಫಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. 

ಕ್ಷೀರ ಭಾಗ್ಯ ದಂತಹ ಸರ್ಕಾರಿ ಯೋಜನೆಗಳ ಮೇಲೆ ಹಾಲಿನ ದರ ಏರಿಕೆ ತೀವ್ರ ಪರಿಣಾಮ ಬಿರಲಿದೆ. ಇದರಿಂದ ಯೋಜನೆಯ ವ್ಯಯ ಹೆಚ್ಚಾಗುವ ನಿರೀಕ್ಷೆ ಇದೆ.

ಹಾಲಿನ ದರ ರೈತರಿಗೆ, ಮೊಸರಿನ ದರ ಯಾರಿಗೆ?

ಹಾಲಿನ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು, ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ' ಎಂದು ಟಾಂಗ್ ನೀಡಿದ್ದಾರೆ.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನವಾಗಿದೆ. ನೆಪ ರೈತರದು, ಲಾಭ ಮಾತ್ರ ಕೆಎಂಎಫ್ ಗೆ. ಹಾಲಿನ ದರವನ್ನು ನೇರವಾಗಿ ರೈತರಿಗೆ ಕೊಡುವುದು ಸರಿ. ಆದರೆ, ಮೊಸರಿನ ದರ ₹4 ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಒತ್ತಾಯ ಮಾಡಿದ್ದಾರೆ.

ಈ ಮಧ್ಯೆ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕೂಡ ನಾಳೆಯಿಂದ ಜನಕ್ರೋಶ ಯಾತ್ರೆ ಹಾಗೂ ಅಹೋರಾತ್ರಿ ಧರಣಿ ನಡೆಸಲಿದೆ. ಒಟ್ಟಾರೆ ಕೆ ಎಂ ಎಫ್ ದರ ಹೆಚ್ಚಳದ ಕ್ರಮಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Tags:    

Similar News