ಇನ್ನು ಮುಂದೆ ಸರ್ಕಾರದಿಂದಲೇ 108 ಅಂಬ್ಯುಲೆನ್ಸ್ಗಳ ನಿರ್ವಹಣೆ
108 ಅಂಬ್ಯುಲೆನ್ಸ್ಗಳನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ, ಆರೋಗ್ಯ ಇಲಾಖೆಯಿಂದ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.;
ರಾಜ್ಯದಲ್ಲಿ 108 ಅಂಬ್ಯುಲೆನ್ಸ್ಗಳನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ, ಆರೋಗ್ಯ ಇಲಾಖೆಯಿಂದ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ 108 ಆರೋಗ್ಯ ಕವಚ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ಭರವಸೆ ಮೂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿ ರೂಪಾಯಿಯಷ್ಟು ಉಳಿತಾಯವಾಗಲಿದೆ.
ಖಾಸಗಿ ಹಿಡಿತದಲ್ಲಿದ್ದ ವೇಳೆ 108 ಅಂಬ್ಯುಲೆನ್ಸ್ ಚಾಲಕರಿಗೆ ಸರಿಯಾದ ವೇತನ ನೀಡದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪದೇ ಪದೇ ಚಾಲಕರು ಮತ್ತು ಸಿಬ್ಬಂದಿ ಮುಷ್ಕರ ಮಾಡುತ್ತಿದ್ದರು. ಇದರಿಂದ ಆರೋಗ್ಯ ಸೇವೆಯಲ್ಲಿ ಸಾಕಾಷ್ಟು ವ್ಯತ್ಯಯ ಉಂಟಾಗಿ ಸರ್ಕಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಮುಜುಗರಕ್ಕೀಡಾಗುತ್ತಿತ್ತು. 108 ಅಂಬ್ಯುಲೆನ್ಸ್ ಖಾಸಗಿ ಕಪಿಪುಷ್ಠಿಯಲ್ಲಿದ್ದ ಕಾರಣ ಚಾಲಕರ ಮತ್ತು ಸರ್ಕಾರದ ನಡುವೆ ತಿಕ್ಕಾಟ ಉಂಟಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಇದೀಗ 108 ಅಂಬ್ಯುಲೆನ್ಸ್ ಸೇವೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಈ ಸಂಬಂಧ ಸಭೆ ನಡೆಸಿದ್ದರು. ಈ ವೇಳೆ ಸರ್ಕಾರದ ಹಿಡಿತಕ್ಕೆ 108 ಅಂಬ್ಯುಲೆನ್ಸ್ ಸೇವೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು. ನಂತರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆರೋಗ್ಯ ಇಲಾಖೆ ಸಲ್ಲಿಕೆ ಮಾಡಿದ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ 108 ಅಂಬ್ಯುಲೆನ್ಸ್ ಸಿಬ್ಬಂದಿಯ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗುವುದರ ಜತೆಗೆ ಖಾಸಗಿ ಕಪಿಮುಷ್ಠಿಗೆ ಇತಿಶ್ರೀ ಹಾಡಿದಂತಾಗಿದೆ.
108 ಅಧೀನದಲ್ಲಿರುವ ಒಟ್ಟು 715 ಅಂಬ್ಯುಲೆನ್ಸ್ ನಿರ್ವಹಣೆಗಾಗಿ ರಾಜ್ಯ ಮಟ್ಟದಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ತೆರೆಯಲಾಗುವುದು. ಇದಕ್ಕಾಗಿ ೧೧೨ ಎನ್ಜಿ-ಇಆರ್ಎಸ್ಎಸ್ ತಂತ್ರಾಂಶ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿಯೂ 108 ಕಂಟ್ರೋಲ್ ಸೆಂಟರ್ ಗಳು ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅಂಬ್ಯುಲೆನ್ಸ್ ಗಳಿಗೆ ಚಾಲಕರು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲಿಯೇ ಹೊರಗುತ್ತಿಗೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆರಂಭದಲ್ಲಿ ಚಾಮರಾಜ ನಗರ ಜಿಲ್ಲೆಯಲ್ಲಿ ನಿರ್ವಹಣೆ ಪ್ರಾರಂಭಿಸಲಾಗುತ್ತಿದೆ. ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿರ್ವಹಣೆ ಕಾರ್ಯ ಆರಂಭವಾಗಲಿದೆ. ಅಲ್ಲದೇ 108 ಹೊರತಾಗಿ ರಾಜ್ಯದಲ್ಲಿರುವ 1000 ಕ್ಕೂ ಹೆಚ್ಚು ಸ್ಟೇಟ್ ಅಂಬ್ಯುಲೆನ್ಸ್ ಗಳನ್ನು ಕೂಡಾ 108 ಕಮಾಂಡ್ ಸೆಂಟರ್ ಅಧೀನಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದೆ.