ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ | ಶಕ್ತಿ ಯೋಜನೆ ಮರು ಪರಿಶೀಲನೆಗೆ ಚಿಂತನೆ- ಡಿಸಿಎಂ ಡಿ.ಕೆ.ಶಿವಕುಮಾರ್‌

ಅನೇಕ ಮಹಿಳಾ ಪ್ರಯಾಣಿಕರು ತಮ್ಮ ಟಿಕೆಟ್‌ಗಳಿಗೆ ಹಣ ಪಾವತಿಸಲು ಬಯಸಿರುವ ಕುರಿತು ಸಾಮಾಜಿಕ ಮಾಧ್ಯಮ ಮತ್ತು ಇ-ಮೇಲ್‌ ಮೂಲಕ ನಮ್ಮ ಜೊತೆ ಸಂವಹನ ನಡೆಸಿದ್ದಾರೆ. ಹಾಗಾಗಿ ಶಕ್ತಿ ಯೋಜನೆಯನ್ನು ಮರುಪರಿಶೀಲಿಸುವ ಸಂಬಂಧ ಚರ್ಚಿಸಲಾಗುವುದು ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.;

Update: 2024-10-31 03:39 GMT

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಗ್ಯಾರಂಂಟಿ ಯೋಜನೆಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸಾಕಷ್ಟು ಮಹಿಳೆಯರು ತಾವು ಪಡೆಯುವ ಟಿಕೆಟ್‌ಗೆ ಹಣ ಪಾವತಿಸಲು ಇಚ್ಛಿಸುತ್ತಿರುವ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಕುರಿತು ಮರು ಪರಿಶೀಲಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳ ಸಂಚಾರಕ್ಕೆ ಹಸಿರುನಿಶಾನೆ ತೋರಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಅನೇಕ ಮಹಿಳಾ ಪ್ರಯಾಣಿಕರು ತಮ್ಮ ಟಿಕೆಟ್‌ಗಳಿಗೆ ಹಣ ಪಾವತಿಸಲು ಬಯಸಿರುವ ಕುರಿತು ಸಾಮಾಜಿಕ ಮಾಧ್ಯಮ ಮತ್ತು ಇ-ಮೇಲ್‌ ಮೂಲಕ ನಮ್ಮ ಜೊತೆ ಸಂವಹನ ನಡೆಸಿದ್ದಾರೆ. ಹಾಗಾಗಿ ಶಕ್ತಿ ಯೋಜನೆಯನ್ನು ಮರುಪರಿಶೀಲಿಸುವ ಸಂಬಂಧ ಚರ್ಚಿಸಲಾಗುವುದು ಎಂದು ಹೇಳಿದರು.

ಶಕ್ತಿ ಯೋಜನೆಯು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ರಾಜ್ಯಾದ್ಯಂತ ಐಷಾರಾಮಿ ಬಸ್‌ ಹೊರತುಪಡಿಸಿ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ರಾಜ್ಯ ಸರ್ಕಾರ 2023 ಜೂನ್‌ 11 ರಂದು ಯೋಜನೆಗೆ ಚಾಲನೆ ನೀಡಿತ್ತು.

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಶೇ 5 ರಿಂದ 10 ರಷ್ಟು ಮಹಿಳೆಯರು ಟಿಕೆಟ್‌ಗಾಗಿ ಹಣ ಪಡೆಯುವಂತೆ ನಿರ್ವಾಹಕರನ್ನು ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಶೀಘ್ರದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಸಾಧನೆಯನ್ನು ಶ್ಲಾಘಿಸಿದ ಡಿ.ಕೆ. ಶಿವಕುಮಾರ್‌ ಅವರು, ಕೆಎಸ್‌ಆರ್‌ಟಿಸಿ ಆರಂಭವಾದಾಗ 120 ಬಸ್‌ಗಳಿದ್ದವು. ಇಂದು 24,282 ಬಸ್‌ಗಳನ್ನು ಹೊಂದಿದೆ. ನಾವು ಅಧಿಕಾರಕ್ಕೆ ಬಂದ ನಂತರ 6,200 ಬಸ್‌ಗಳನ್ನು ಖರೀದಿಸುವ ಯೋಜನೆ ಘೋಷಿಸಿದ್ದೆವು. ಅದರಂತೆ ಇಲ್ಲಿಯವರೆಗೆ 3,400 ಬಸ್‌ಗಳನ್ನು ಖರೀದಿಸಿದ್ದೇವೆ. 9,000 ಚಾಲಕರು ಮತ್ತು ನಿರ್ವಾಹಕರ ನೇಮಕಾತಿ ಪ್ರಾರಂಭಿಸಿದ್ದೇವೆ. ಸುಮಾರು 1,000 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಅಪಘಾತದಲ್ಲಿ ಸಾವನ್ನಪ್ಪುವ ನೌಕರರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ನಾವು ಇಡೀ ದೇಶದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿದ್ದೇವೆ. ಜನರ ಸೇವೆಗಾಗಿ ಇರುವ ಕೆಎಸ್‌ಆರ್‌ಟಿಸಿ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿದೆ. ಖಾಸಗಿ ಕಂಪನಿಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕೆಎಸ್‌ಆರ್‌ಟಿಸಿಗೆ ಇಂಧನ ನೀಡಲು ಮುಂದೆ ಬಂದಿವೆ. ನಾವು ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ತಿಳಿಸಿದರು.

Tags:    

Similar News