ಉತ್ತರಾಖಂಡ್​ ​ಟ್ರೆಕ್ಕಿಂಗ್​ಗೆ​ ತೆರಳಿದ ರಾಜ್ಯದ ನಾಲ್ವರು ಚಾರಣಿಗರ ಸಾವು

ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಕರ್ನಾಟಕದಿಂದ ತೆರಳಿದ್ದ ನಾಲ್ವರು ಸೇರಿ ಒಟ್ಟು 9 ಚಾರಣಿಗರು ಮೃತಪಟ್ಟಿದ್ದಾರೆ.;

Update: 2024-06-05 14:05 GMT
ಉತ್ತರಾಖಂಡ್​ನಲ್ಲಿ ​ಟ್ರೆಕ್ಕಿಂಗ್​ಗೆ​ ತೆರಳಿದ ನಾಲ್ವರು ಚಾರಣಿಗರು ಸಾವನ್ನಪ್ಪಿದ್ದಾರೆ.
Click the Play button to listen to article

ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಕರ್ನಾಟಕದ ನಾಲ್ವರು ಸೇರಿ ಒಟ್ಟು 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ.

ಮೇ 29 ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್‌ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಸಹಸ್ತ್ರ ತಾಲ್‌ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದರು. ಪ್ರತಿಕೂಲ ಹವಾಮಾನದಿಂದ ಆ ತಂಡ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರಿನ ಸುಜಾತ (52), ಪದ್ಮನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್‌ ಪ್ರಸಾದ್‌ (52), ಅನಿತಾ (61) ಆಶಾ ಸುಧಾಕರ್ (72)‌, ಪದ್ಮನಾಭನ್‌ ಕೆಪಿಎಸ್‌ (50), ವಿನಾಯಕ್‌ ಎಂದು ಗುರುತಿಸಲಾಗಿದೆ. ಇನ್ನು ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್‌, ಸ್ಮೃತಿ, ಸೀನಾ ಸೇರಿ ಹಲವರನ್ನು ರಕ್ಷಣೆ ಮಾಡಲಾಗಿದೆ.

ಈ ವೇಳೆ ಎರಡು ವಾಹನದಲ್ಲಿ 8 ಮಂದಿ ಬೇಸ್‌ ಕ್ಯಾಂಪ್‌ಗೆ ಮರಳಿದ್ದು, 13 ಮಂದಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ 9 ಮಂದಿ ಮೃತಪಟ್ಟಿದ್ದು, ಇನ್ನುಳಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕದ ಚಾರಣಿಗರ ತಂಡವೊಂದು ಉತ್ತರಾಖಂಡದಲ್ಲಿ ಪ್ರತಿಕೂಲ ವಾತಾವರಣದಲ್ಲಿ ಸಿಲುಕಿದೆ. ಪ್ರಸ್ತುತ ಕೆಲವರು ಈಗ ಕೊಹ್ಲಿ ಶಿಬಿರದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ನಾವು ಈಗಾಗಲೇ ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿದೆ. ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಚಿವ ಕೃಷ್ಣ ಬೈರೆಗೌಡ ಪ್ರತಿಕ್ರಿಯಿಸಿ, "ಉತ್ತರಾಖಂಡ್‌ನಲ್ಲಿ ರಾಜ್ಯದ ಟ್ರೆಕ್ಕಿಂಗ್ ಟೀಂ ಸಿಲುಕಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ರಕ್ಷಣೆ ಸಂಬಂಧ ಉತ್ತರಾಖಂಡ ಸರ್ಕಾರದ ಜೊತೆ ಮಾತನಾಡಲಾಗಿದೆ. ಖುದ್ದು ತೆರಳಿ ಕಾರ್ಯಚರಣೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಿಂದ ಡೆಹ್ರಾಡೂನ್‌ಗೆ ಹೊರಟಿದ್ದೇನೆ" ಎಂದು ತಿಳಿಸಿದ್ದಾರೆ.

“ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ರಕ್ಷಣೆಗಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಲಿದೆ. ಇದಲ್ಲದೆ, ಇಂದು ಬೆಳಿಗ್ಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ಬರಲು ಪ್ರಾರಂಭಿಸಿದೆ. ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಪ್ರಾರಂಭಿಸಿದೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸಿಕ್ಕಿಬಿದ್ದ ಇಬ್ಬರು ಚಾರಣಿಗರನ್ನು ಇದುವರೆಗೆ ರಕ್ಷಿಸಲಾಗಿದೆ. ಹೆಚ್ಚಿನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು ಉತ್ತರಾಖಂಡಕ್ಕೆ ಟ್ರೆಕ್ಕಿಂಗ್ ಹೋದ ತಂಡದ ರಕ್ಷಣಾ ಕಾರ್ಯಕ್ಕಾಗಿ ಐಎಎಸ್‌ ಅಧಿಕಾರಿ ವಿಪುಲ್ ಬನ್ಸಲ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಉತ್ತರಾಖಾಂಡ ಸರ್ಕಾರದ ಜೊತೆ ನಿರಂತರ ಸಂಪರ್ಕ ಬೆಳಸಲು ಸಮನ್ವಯ ಅಧಿಕಾರಿಯಾಗಿ ಇವರು ಕಾರ್ಯ ನಿರ್ವಹಿಸಲಿದ್ದಾರೆ.

Tags:    

Similar News