ಮೈಸೂರಿನಲ್ಲಿ 'ಇಂದಿರಾ ಗಾಂಧಿ ಕಾಂಗ್ರೆಸ್ ಭವನ'ಕ್ಕೆ ಶಂಕುಸ್ಥಾಪನೆ: ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ
ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.;
ನಗರದ ಗ್ರಾಮೀಣ ಮತ್ತು ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಸುಸಜ್ಜಿತ ಕಚೇರಿ ಒದಗಿಸುವ ಬಹುಕಾಲದ ಕನಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು. ನಗರದಲ್ಲಿ ನಿರ್ಮಾಣವಾಗಲಿರುವ 'ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ'ಕ್ಕೆ ಭೂಮಿಪೂಜೆ ನೆರವೇರಿಸಿದ ಅವರು, ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭೂಮಿಪೂಜೆ ನೆರವೇರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಮೈಸೂರಿನ ಗ್ರಾಮೀಣ ಮತ್ತು ನಗರ ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ದೇವರಾಜ ಅರಸು ಅವರ ಕಾಲದಲ್ಲಿ ಈ ಜಾಗವನ್ನು ಮಂಜೂರು ಮಾಡಲಾಗಿತ್ತು. ತಿವಾರಿಯವರು ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಇಂದು ಈ ಐತಿಹಾಸಿಕ ಜಾಗದಲ್ಲಿ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ ನೆರವೇರುತ್ತಿರುವುದು ಸಂತಸದ ವಿಷಯ," ಎಂದು ಹರ್ಷ ವ್ಯಕ್ತಪಡಿಸಿದರು.
"ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಘಟಕ ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತಹ ಭವ್ಯವಾದ ಕಟ್ಟಡ ಇದಾಗಲಿದೆ. ಇದರ ನಿರ್ಮಾಣಕ್ಕಾಗಿ ಪಕ್ಷದ ಎಲ್ಲರೂ ತಮ್ಮ ಶಕ್ತಿ ಮೀರಿ ವಂತಿಗೆ ನೀಡಬೇಕು," ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಮನವಿ ಮಾಡಿದರು.