ಪರಪ್ಪನ ಅಗ್ರಹಾರ ಜೈಲು ಸೇರಿದ ಪ್ರಜ್ವಲ್ ರೇವಣ್ಣ; ಕೈದಿ ಸಂಖ್ಯೆ 15528, ನಿತ್ಯ ಎಂಟು ತಾಸು ಕೆಲಸ
ಜೈಲಿನಲ್ಲಿ ಪ್ರಮುಖವಾಗಿ ಬೇಕರಿ, ಗಾರ್ಡನ್, ಹೈನುಗಾರಿಕೆ, ಕರಕುಶಲ ವಸ್ತುಗಳ ಕೆತ್ತನೆ ಸೇರಿ ಯಾವುದರೂ ಒಂದು ಕೆಲಸ ಮಾಡಬಹುದಾಗಿದೆ. ಜೈಲುಗಳಲ್ಲಿ ಕೌಶಲ್ಯರಹಿತ ಕೈದಿಗಳು ದಿನಕ್ಕೆ 524 ರೂ. ಸಂಬಳ ನಿಗದಿ ಮಾಡಲಾಗಿದೆ.;
ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಪಾಲಾಗಿದ್ದಾರೆ. ಜೈಲು ನಿಯಮಾವಳಿ ಅನುಸಾರ ಜೈಲಿನ ಸೂಪರಿಂಟೆಂಡೆಂಟ್ ನೀಡುವ ಕೆಲಸವನ್ನು ಮಾಡಬೇಕಾಗಿದೆ. ಕೈದಿಗಳು ಕಡ್ಡಾಯ 8 ಗಂಟೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಪ್ರಜ್ವಲ್ ಕೂಡ ಎಂಟು ತಾಸು ಕೆಲಸ ಮಾಡಬೇಕಿದ್ದು, ದಿನಕ್ಕೆ 524 ರೂ. ಸಂಬಳ ಪಡೆಯಲಿದ್ದಾರೆ.
ಜೈಲಿನಲ್ಲಿ ಪ್ರಮುಖವಾಗಿ ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಮರಗೆಲಸ, ಕರಕುಶಲ ವಸ್ತುಗಳ ಕೆತ್ತನೆ ಸೇರಿ ಯಾವುದರೂ ಒಂದು ಕೆಲಸ ಮಾಡಬಹುದಾಗಿದ್ದು, ಕರ್ನಾಟಕ ಜೈಲುಗಳಲ್ಲಿ ಕೌಶಲ್ಯರಹಿತ ಕೈದಿಗಳು ದಿನಕ್ಕೆ 524 ರೂ. ಸಂಬಳ ನಿಗದಿ ಮಾಡಲಾಗಿದೆ. ಇದರಲ್ಲಿ 175 ರೂ. ವೇತನ, 100 ರೂ. ಬಟ್ಟೆಗೆ ಮತ್ತು 75 ರೂ. ನಗದು ಸೇರಿದೆ.
ಒಂದು ವರ್ಷದ ನಂತರ ಅವರು ನುರಿತ ಕೆಲಸಗಾರರಾಗುತ್ತಾರೆ. ಆ ಬಳಿಕ ದಿನಕ್ಕೆ 548 ರೂ. ಸಂಬಳ ಪಡೆಯಲಿದ್ದಾರೆ. 3 ವರ್ಷಗಳ ನಂತರ ಅವರನ್ನು ಹೆಚ್ಚು ನುರಿತ ಅಥವಾ ತರಬೇತಿ ಕೆಲಸಗಾರರು ಎಂದು ಪರಿಗಣಿಸಿ ದಿನಕ್ಕೆ 663 ರೂ. ಸಂಬಳ ನೀಡಲಾಗುತ್ತದೆ.
ಈ ನಡುವೆ ಪ್ರಜ್ವಲ್ ರೇವಣ್ಣ ಪರ ವಕೀಲರು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ. ಒಂದು ವೇಳೆ ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿದರೆ ಕೆಲಸ ನಿಷೇಧವಾಗಲಿದೆ. ಆಗ ಅವರು ನ್ಯಾಯಾಂಗ ಬಂಧನದಲ್ಲಿರುವ ಕೈದಿಯಾಗಲಿದ್ದಾರೆ.
ಈಗಾಗಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಜಾ ಕೈದಿ ಸಂಖ್ಯೆ 15528 ನೀಡಲಾಗಿದ್ದು, ಇಷ್ಟು ದಿನ ವಿಚಾರಣಾಧೀನ ಕೈದಿಯಾಗಿದ್ದ ಅವರು, ಇದೀಗ ಸಜಾ ಬಂಧಿಯಾಗಿದ್ದಾರೆ.
ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(k) (ಮಹಿಳೆಯ ಮೇಲೆ ನಿಯಂತ್ರಣ ಅಥವಾ ಪ್ರಾಬಲ್ಯದ ಸ್ಥಾನದಲ್ಲಿದ್ದು ಅತ್ಯಾಚಾರ ಎಸಗುವುದು) ಮತ್ತು ಸೆಕ್ಷನ್ 376(2)(n) (ಒಬ್ಬನೇ ವ್ಯಕ್ತಿ ಅದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು) ಅಡಿಯಲ್ಲಿನ ಆರೋಪಗಳು ಸಾಬೀತಾಗಿವೆ. ಈ ಕಾರಣದಿಂದಾಗಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿತ್ತು.
ನ್ಯಾಯಾಲಯದ ತೀರ್ಪಿನ ಪ್ರಕಾರ, ಜೀವಾವಧಿ ಶಿಕ್ಷೆ ಮತ್ತು ದಂಡದ ಜೊತೆಗೆ ಸಂತ್ರಸ್ತೆಗೆ ಏಳು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಶುಕ್ರವಾರ ಪ್ರಜ್ವಲ್ ರೇವಣ್ಣನನ್ನು ದೋಷಿ ಎಂದು ತೀರ್ಪು ಪ್ರಕಟಿಸಿ, ಶಿಕ್ಷೆಯ ಪ್ರಮಾಣವನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು.
ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ಅವರು ವಾದ ಮಂಡಿಸಿದರೆ, ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲೆ ನಳಿನಿ ಮಾಯಗೌಡ ವಾದ ಮಂಡಿಸಿದ್ದರು.
1.2 ಲಕ್ಷ ರೂ.ಗಳಿಂದ 524 ರೂ.ಗಳಿಗೆ ಬಂದ ವೇತನ
ಪ್ರಜ್ವಲ್ ರೇವಣ್ಣ ಏಪ್ರಿಲ್ 2024 ರಲ್ಲಿ ಸಂಸದರಾಗಿ ಅನರ್ಹಗೊಳ್ಳುವವರೆಗೂ ತಿಂಗಳಿಗೆ 1.2 ಲಕ್ಷ ರೂ. ಮೂಲ ವೇತನ ಮತ್ತು ವಿವಿಧ ಭತ್ಯೆಗಳನ್ನು ಪಡೆಯುತ್ತಿದ್ದರು. ಆದರೆ, ಇಂದು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಕೈದಿಯಾಗಿ ಅವರ ಗಳಿಕೆಯು ದಿನಕ್ಕೆ 540 ರೂ. ಮೀರುವುದಿಲ್ಲ, ಇದು ಎಂಟು ಗಂಟೆಗಳ ಪಾಳಿ ಮತ್ತು ವಾರದಲ್ಲಿ ಆರು ದಿನ ಕೆಲಸ ಮಾಡುವ ಅಪರಾಧಿಗಳಿಗೆ ನಿಗದಿಪಡಿಸಿದ ಪ್ರಮಾಣಿತ ವೇತನವಾಗಿದೆ.
ಜೈಲು ಜೀವನ ಹೇಗಿರಲಿದೆ?
ಆರೋಗ್ಯ ಸಮಸ್ಯೆಗಳಿಗೆ ಸಿಗುವ ವಿನಾಯಿತಿ ಹೊರತುಪಡಿಸಿ ಅಪರಾಧಿಗಳು ಬೆಳಿಗ್ಗೆ 6.30 ಕ್ಕೆ ದಿನಚರಿ ಆರಂಭಿಸಬೇಕು. ಭಾನುವಾರ ತರಕಾರಿ ಪುಲಾವ್, ಸೋಮವಾರ ಟೊಮೆಟೊ ಬಾತ್, ಮಂಗಳವಾರ ಚಿತ್ರಾನ್ನ, ಬುಧವಾರ ಪೋಹಾ, ಗುರುವಾರ ಪುಳಿಯೋಗರೆ, ಶುಕ್ರವಾರ ಉಪ್ಮಾ ಮತ್ತು ಶನಿವಾರ ವಾಂಗಿಬಾತ್ ನೀಡಲಾಗುತ್ತದೆ.
ಬೆಳಿಗ್ಗೆ 11.30 ರಿಂದ ಮಧ್ಯಾಹ್ನದವರೆಗೆ ಊಟ ನೀಡಲಾಗುತ್ತದೆ. ಎಲ್ಲಾ ಕೈದಿಗಳು ಸಂಜೆ 6.30 ರೊಳಗೆ ತಮ್ಮ ಬ್ಯಾರಕ್‌ಗಳಿಗೆ ಹಿಂತಿರುಗಬೇಕು. ಮಧ್ಯಾಹ್ನ ಮತ್ತು ರಾತ್ರಿ ಊಟ ಎರಡೂ ಚಪಾತಿ, ರಾಗಿಮುದ್ದೆ ಸಾಂಬಾರ್, ಬಿಳಿ ಅನ್ನ ಮತ್ತು ಮಜ್ಜಿಗೆ ನೀಡಲಾಗುತ್ತದೆ.
ಮಂಗಳವಾರ ಅಪರಾಧಿಗಳಿಗೆ ಮೊಟ್ಟೆ ನೀಡಲಾಗುತ್ತದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಮಟನ್ ನೀಡಲಾಗುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಕೋಳಿ ಮಾಂಸ ನೀಡಲಾಗುತ್ತದೆ. ವಾರಕ್ಕೆ ಎರಡು ಫೋನ್ ಕರೆ ಮಾಡಲು ಅನುಮತಿಸಲಾಗುವುದು.ಗರಿಷ್ಠ 10 ನಿಮಿಷಗಳವರೆಗೆ ಮಾತ್ರ ಮಾತನಾಡಬಹುದು. ವಾರಕ್ಕೊಮ್ಮೆ ಕುಟುಂಬ ಅಥವಾ ಸ್ನೇಹಿತರನ್ನು ಭೇಟಿ ಮಾಡಬಹುದು.