ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ನಿಧನ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ.ನಟ್ವರ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ.ನಟ್ವರ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 93 ವರ್ಷವಾಗಿತ್ತು.
ಅವರು ಕಳೆದ ಎರಡು ವಾರಗಳಿಂದ ದೆಹಲಿಯ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಕೆ.ನಟ್ವರ್ ಸಿಂಗ್ ಅವರು 1931 ರಲ್ಲಿ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಜನಿಸಿದ್ದು, ರಾಜತಾಂತ್ರಿಕರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯದಲ್ಲಿ ಅಪಾರ ಅನುಭವವನ್ನು ಇವರು ಹೊಂದಿದ್ದರು. ಅವರು ನೀಡಿದ ರಾಷ್ಟ್ರ ಸೇವೆಗಾಗಿ 1984 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌವರವಿಸಲಾಗಿತ್ತು.
ಯುಪಿಎ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ 2004 ರಿಂದ 2005ರ ವರೆಗೆ ಅವರು ಭಾರತದ ವಿದೇಶಾಂಗ ಸಚಿವರಾಗಿದ್ದರು. ಇದಕ್ಕೂ ಮೊದಲು ಪಾಕಿಸ್ತಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದರು.
ಸಿಂಗ್ ಅವರ ನಿಧನಕ್ಕೆ ಹಿರಿಯ ರಾಜಕಾರಣಿ ರಣದೀಪ್ ಸುರ್ಜೆವಾಲಾ ಅವರು ಸಂತಾಪ ವ್ಯಕ್ತಪಡಿಸಿದ್ದು, "ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಜಿ ಅವರ ನಿಧನದ ಸುದ್ದಿ ದುಃಖಕರವಾಗಿದೆ. ದೇವರು ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಂಗ್ ಅವರು 'ದಿ ಲೆಗಸಿ ಆಫ್ ನೆಹರು: ಎ ಮೆಮೋರಿಯಲ್ ಟ್ರಿಬ್ಯೂಟ್' ಮತ್ತು 'ಮೈ ಚೀನಾ ಡೈರಿ 1956-88' ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.