ಸರ್ಕಾರಿ ಯೋಜನೆಗಳಿಗೆ ಒಂದೇ ಬಾರಿ ಮರ ಕಡಿಯಲು ಕ್ರಮ | ಅಕ್ರಮ ಕಡಿತಲೆಗೆ ಮೌಲ್ಯಕ್ಕಿಂತ ಹೆಚ್ಚು ದಂಡ, ಜೈಲು ಶಿಕ್ಷೆ?

ವೃಕ್ಷ ಸಂರಕ್ಷಣಾ ಕಾಯಿದೆ 1976ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. "ಅನುಮತಿ ಇಲ್ಲದೆ ಯಾರೇ ಅಕ್ರಮವಾಗಿ ಮರ ಕಡಿದರೆ ಮರದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ

Update: 2024-06-08 09:05 GMT

ಅರಣ್ಯ ಪ್ರದೇಶಗಳಲ್ಲಿ ಯಾವುದೇ  ಹೊಸ ಸರ್ಕಾರಿ ಯೋಜನೆಗಳಿಗೆ ಬಿಡಿಯಾಗಿ (ಇಷ್ಟು ಕಿ.ಮೀ.ನಿಂದ ಇಂತಿಷ್ಟು ಕಿ.ಮೀ.ವರೆಗೆ) ಮರ ಕಡಿಯಲು ಅನುಮತಿ ನೀಡುವುದಕ್ಕೆ ಕಡಿವಾಣ ಹಾಕಿ, ಒಂದು ಯೋಜನೆಗೆ ಒಟ್ಟಾರೆ ಒಂದೇ ಬಾರಿ ಅನುಮತಿ ನೀಡಿ, ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ರಸ್ತೆ, ರೈಲು ಮಾರ್ಗ, ವಿದ್ಯುತ್ ಪ್ರಸರಣ ಮಾರ್ಗ, ಕೊಳವೆ ಮಾರ್ಗ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಯೋಜನೆ ಇರಲೀ ಅಥವಾ ಗಣಿಗಾರಿಕೆ, ಜಲಾಶಯ, ಬಡಾವಣೆ ನಿರ್ಮಾಣ, ಕೈಗಾರಿಕೆ ಸ್ಥಾಪನೆಯಂತಹ ಯಾವುದೇ ಯೋಜನೆ ಇರಲಿ, ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮದ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ ಎಂಬುದನ್ನು ಇಲಾಖೆ ಮನಗಂಡಿದೆ. ಈ ನಿಟ್ಟಿನಲ್ಲಿ ಯೋಜನೆಗಳಿಗೆ ಮರಗಳನ್ನು ಕಡಿಯುವ ಸಂದರ್ಭದಲ್ಲೇ ಪರ್ಯಾಯ ಅರಣ್ಯ ಬೆಳೆಸುವ ಅಗತ್ಯವೂ ಇದೆ ಎಂಬುದನ್ನು ಸರ್ಕಾರ ಮನಗಂಡಿದೆ.

ಜತೆಗೆ, ರಾಜ್ಯದ ಅರಣ್ಯ, ಗೋಮಾಳ, ಸರ್ಕಾರಿ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮರ-ಗಿಡಗಳನ್ನು ಉಳಿಸಲು ವೃಕ್ಷ ಸಂರಕ್ಷಣಾ ಕಾಯಿದೆ 1976ಕ್ಕೆ ತಿದ್ದುಪಡಿ ತರಲೂ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ಹಾಸನ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೂರಾರು ಮರ ಕಡಿತಲೆ ಮಾಡಿದ ದೂರುಗಳು ಬಂದಿದ್ದು ಪ್ರಾಣವಾಯು ನೀಡುವ, ತಾಪಮಾನ ಹೆಚ್ಚಾಗದಂತೆ ತಡೆಯುವ ಹಾಗೂ ಭೂಫಲವತ್ತತೆ ಕಾಪಾಡುವ ವೃಕ್ಷಗಳ ಸಂರಕ್ಷಣೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಲೆ ಬಾಳುವ ಮರಗಳ ಸಂರಕ್ಷಣೆಗಾಗಿ ಪಟ್ಟಾ ಭೂಮಿ, ಗೋಮಾಳ ಮತ್ತು ಸರ್ಕಾರಿ ಭೂಮಿಯಲ್ಲಿರುವ ಬೀಟೆ, ಶ್ರೀಗಂಧ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲೂ ಸರ್ಕಾರ ಸೂಚಿಸಿದೆ. ಇದರಿಂದ ಅಕ್ರಮವಾಗಿ ಮರ ಕಡಿಯುವುದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಅರಣ್ಯ ಇಲಾಖೆ ಸೂಕ್ತ ಕ್ರಮಗಳಿಗೆ  ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ವೃಕ್ಷ ಸಂರಕ್ಷಣಾ ಕಾಯಿದೆ 1976ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. "ಅನುಮತಿ ಇಲ್ಲದೆ ಯಾರೇ ನಿಯಮ ಬಾಹಿರ ಮತ್ತು ಅಕ್ರಮವಾಗಿ ಮರ ಕಡಿದರೆ ಮರದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ," ಎಂದರು.

Tags:    

Similar News