Flyovers Closed | ವೀಲಿಂಗ್ ಪಿಡುಗು: ಬೆಂಗಳೂರಿನ ಫ್ಲೈಓವರ್‌ಗಳಲ್ಲಿ ರಾತ್ರಿ ಸಂಚಾರ ನಿಷೇಧ

ಬೆಂಗಳೂರಿನಲ್ಲಿ ವೀಲಿಂಗ್ ಪುಂಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಹೊಸ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರು ನಗರಾದ್ಯಂತ ಮೇಲ್ಸೇತುವೆಗಳಲ್ಲಿ ರಾತ್ರಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಯುವಕರ ವೀಲಿಂಗ್ ಪುಂಡಾಟವನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಮೇಲ್ಸೇತುವೆ(ಫ್ಲೈಓವರ್)ಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಕೆ ಆರ್ ಮಾರುಕಟ್ಟೆ, ಶಾಂತಿನಗರ ಡಬಲ್ ರೋಡ್ ಫ್ಲೈಓವರ್ ಸೇರಿದಂತೆ ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ರಾತ್ರಿ 11ರ ನಂತರ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರ ತಡೆಯಲಾಗುತ್ತಿದೆ.
ಯುವಕರು ವೀಲಿಂಗ್ ಮಾಡುವುದು, ಮಾರಕಾಸ್ತ್ರ ಹಿಡಿದುಕೊಂಡು ವೀಲಿಂಗ್ ಮಾಡಿ ಸಾರ್ವಜನಿಕರ ಜೀವ, ಆಸ್ತಿಪಾಸ್ತಿಗೆ ಹಾನಿ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಂಗಳೂರು ಪೊಲೀಸರಿಗೆ ಈ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಮಾರಕಾಸ್ತ್ರ ಹಿಡಿದು ಯುವಕರು ವೀಲಿಂಗ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೇ ಆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ ಪೊಲೀಸರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದರು.
ಪಬ್ಲಿಕ್ ಐ ಬದಲು ಅಸ್ತ್ರಂ ಬಳಸಿ
ಸಂಚಾರ ನಿಯಮ ಉಲ್ಲಂಘನೆ ದಾಖಲು ಮಾಡಲು ಸಾರ್ವಜನಿಕರು ಈ ಹಿಂದೆ ಬಳಸುತ್ತಿದ್ದ ಪಬ್ಲಿಕ್ ಐ (PublicEye) ಆ್ಯಪ್ ಸದ್ಯ ಬಳಕೆಗೆ ಲಭ್ಯವಿಲ್ಲ. ಆ ಹಿನ್ನೆಲೆಯಲ್ಲಿ ಅದಕ್ಕೆ ಬದಲಾಗಿ ʼಅಸ್ತ್ರಂʼ ಆ್ಯಪ್ ಬಳಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪಬ್ಲಿಕ್ ಐ ಆ್ಯಪ್ನ ಮೇಲ್ವಿಚಾರಣೆಯನ್ನು ಬೆಂಗಳೂರು ಸಂಚಾರ ವಿಭಾಗವು ಈಗ ನಿರ್ವಹಿಸುತ್ತಿಲ್ಲ. ಆದ್ದರಿಂದ, ಈ ಅಪ್ಲಿಕೇಶನ್ ಬಳಕೆಯನ್ನು ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡುವ ಸಲುವಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ BTP-ASTraM ಬಳಸಬಹುದಾಗಿದೆ. ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಲು, ನೈಜ-ಸಮಯದ ಟ್ರಾಫಿಕ್ ಅಪ್ಡೇಟ್ ಹಾಗೂ ದಂಡ ಪಾವತಿ ಆಯ್ಕೆಗಳನ್ನು ಪಡೆಯಲು, ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿರುವ BTP ASTraM ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಂಡು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಬಹುದಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.