ಕೃಷ್ಣಾ ನದಿ ಪ್ರವಾಹ: 22 ಸೇತುವೆ ಮುಳುಗಡೆ, ಸಂಪರ್ಕ ಕಳೆದುಕೊಂಡ 40 ಗ್ರಾಮ

Update: 2024-07-24 13:30 GMT

ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಮಹಾಮಳೆ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳಾದ ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಕೃಷ್ಣಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಸಪ್ತ ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಅನೇಕ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 22 ಸೇತುವೆಗಳು ಮುಳುಗಡೆಯಾಗಿದ್ದು, ಬರೋಬ್ಬರಿ 40 ಗ್ರಾಮಗಳು ಸಂಪರ್ಕ ಕಳೆದುಕೊಂಡು ನಡುಗಡ್ಡೆಯಂತಾಗಿವೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ್ ಮತ್ತು ಹುಕ್ಕೇರಿ ತಾಲೂಕಿನ ಹಲವು ಸೇತುವೆಗಳು‌ ಮುಳುಗಡೆಯಾಗಿವೆ. ಈವರೆಗೆ ಜಿಲ್ಲೆಯಲ್ಲಿ 160 ಮನೆಗಳು ಭಾಗಶಃ ಕುಸಿತಗೊಂಡಿವೆ. ನಿಪ್ಪಾಣಿಯಲ್ಲಿ ಮನೆ ಕುಸಿದು ಓರ್ವ ಮೃತಪಟ್ಟಿದ್ದಾನೆ. ಹುಕ್ಕೇರಿ ಪಟ್ಟಣದಲ್ಲಿ ಮನೆ ಕುಸಿದು ಓರ್ವ ಮಹಿಳೆ ಗಾಯಗೊಂಡಿದ್ಧಾರೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಜಲಾವೃತಗೊಂಡಿದೆ.

ಘಟಪ್ರಭಾ ಜಲಾಶಯದಿಂದ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿರುವುದರಿಂದ ಬೆಳಗಾವಿ ತಾಲೂಕಿನ ಬಸವನ ಕುಡಚಿ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ, ಮತ್ತು ಕೆಎಲ್ಇ ವೆಲ್‌ನೆಸ್ ಸೆಂಟರ್‌ಗೆ ನೀರು ನುಗ್ಗಿದೆ. ಕೃಷ್ಣಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಹಲವು ಗ್ರಾಮಗಳಿಗೆ ಕೃಷ್ಣಾ, ದೂದಗಂಗಾ ನದಿ ನೀರು ನುಗ್ಗುವ ಸಾಧ್ಯತೆ ಇದೆ.

ಮಳೆಗೆ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಲಕ್ಷ್ಮೀನಾರಾಯಣ ದೇಗುಲ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಸದ್ಯ 1.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂದಗಂಗಾ ನದಿಗೆ 32,730 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ನದಿ ದಡದಲ್ಲಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ದೇವಸ್ಥಾನಕ್ಕೆ ಜನರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ವಂಟಮೂರಿ ಬಳಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಮುಳುಗಡೆಯಾಗಿದೆ. ನದಿಗೆ ಅಡ್ಡಲಾಗಿ ಕಟ್ಟಿದ ನೀರು ಶುದ್ಧೀಕರಣ ಘಟಕ ಕೂಡ ಮುಳುಗಡೆಯಾಗಿದೆ.

ಹಲವು ವರ್ಷಗಳಿಂದ ನೆರೆ ಸಂತ್ರಸ್ತರಿಗೆ ಸರ್ಕಾರಗಳು ಪುನರ್ವಸತಿ ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ನಾವು ಹೊರಗೆ ಬರುವುದಿಲ್ಲ, ನೆರೆ ಬಂದಾಗ ಮಾತ್ರ ನೀವು ನಮ್ಮ ಮನೆಗೆ ಬರುತ್ತೀರಿ. ಯಾವುದೇ ಕಾರಣಕ್ಕೂ ನಾವು ಹೊರಗಡೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ನದಿ ತೀರದ ಹಲವು ಗ್ರಾಮಗಳಿಗೆ ಪುನರ್ವಸತಿ ಇಲ್ಲದೇ ಇರುವುದರಿಂದ ಪ್ರತಿಬಾರಿಯೂ ನೆರೆ ಬಂದಾಗ ಸಂತ್ರಸ್ತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದೇನು?

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ʻʻಜಲ ಸಂಪನ್ಮೂಲ ಹಾಗೂ ಕಂದಾಯ ಇಬ್ಬರು ಅಧಿಕಾರಿಗಳು ಕೋಯ್ನಾ ಜಲಾಶಯದಲ್ಲಿ ಇರುತ್ತಾರೆ. ಜತ್ರಾಟ್ ಬ್ಯಾರೇಜ್‌ನಲ್ಲಿಯೂ ರಾಜ್ಯದ ಒಬ್ಬ ಅಧಿಕಾರಿ ಇರುತ್ತಾರೆ. ಕೊಲ್ಹಾಪುರದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆʼʼ ಎಂದು ತಿಳಿಸಿದರು.

ʻʻಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ನಿಗಾ ವಹಿಸಲಾಗಿದೆ. ರಾಜಾಪುರದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿಯಿಂದ 1.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ ಪ್ರತಿದಿನ ಮೂರು ಟಿಎಂಸಿ ನೀರು ಸಂಗ್ರಹ ಆಗುತ್ತಿದೆ. ಇಂದು ಸಂಜೆಯಿಂದ ಘಟಪ್ರಭಾ ನದಿಯಿಂದ ನೀರು ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ. ಲೋಳಸೂರು ಬ್ರಿಡ್ಜ್ ಬಳಿ 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ. ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಇಂದು ಸಭೆ ಮಾಡಿದ್ದೇವೆ. ಕೃಷ್ಣ ನದಿ ವ್ಯಾಪ್ತಿಯಲ್ಲಿ ಯಾವುದೇ ತೊಂದರೆ ಇಲ್ಲ. ಒಂದೆರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಹಶಿಲ್ದಾರ್​ಗಳಿಗೆ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆʼʼ ಎಂದು ತಿಳಿಸಿದರು.

ʻʻಕಾಗವಾಡ ತಾಲೂಕಿನ ಎರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಘಟಪ್ರಭಾ ನದಿ ವ್ಯಾಪ್ತಿಯ ಹುಕ್ಕೇರಿ, ಗೋಕಾಕ್, ಮೂಡಲಗಿ ತಾಲೂಕು ಬರುತ್ತದೆ‌. ಸಂಕೇಶ್ವರದಲ್ಲಿ ಸಹ ನೀರು ಬರುವ ಬಗ್ಗೆ ಎಚ್ಚರ ವಹಿಸಲಾಗಿದೆ. ಬಳ್ಳಾರಿ ನಾಲಾದಿಂದ ಕುಂದರಗಿ, ಪಾಶ್ಚಾಪುರ ಗ್ರಾಮದ ತೋಟಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ರೈತರಿಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆʼʼ ಎಂದು ಹೇಳಿದರು.

ʻʻಗೋಕಾಕ್ ನಗರದಲ್ಲಿ ಯಾವುದೇ ತೊಂದರೆ ಇಲ್ಲ. ಅಂಕಲಗಿ ಗ್ರಾಮದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕುಂದರಗಿ ಅಡವಿ ಸಿದ್ದೇಶ್ವರ ಮಠದ ಎಲ್ಲರನ್ನೂ ಅಂಕಲಗಿಯ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. ಮೂಡಲಗಿಯ ಹಲವು ಗ್ರಾಮಗಳಲ್ಲಿ ಎಚ್ಚರ ವಹಿಸಲಾಗಿದೆʼʼ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ʻʻಖಾನಾಪುರ ತಾಲೂಕಿನಲ್ಲಿ ಸತತವಾಗಿ ಮಳೆ ಆಗುತ್ತಿದೆ. ಮಾಚೋಳಿ, ಸಾಥೋಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಾಲಿನ ಪುಡಿ ಸೇರಿ ಅಗತ್ಯ ಸಾಮಗ್ರಿ ಒದಗಿಸಲಾಗಿದೆ‌. ಹಾಲಾತ್ರಿ ಹಳ್ಳ ಪ್ರವಾಹದಿಂದ ಮಂತುರ್ಗಾ ಸೇತುವೆ ಮುಳುಗಡೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಎನ್‌ಡಿಆರ್‌ಎಫ್ ತಂಡ ಇಂದಿನಿಂದ ಖಾನಾಪುರದಲ್ಲಿ ಇರಲಿದೆ. ಹಾಗಾಗಿ, ಜಿಲ್ಲೆಯಲ್ಲಿ ಸದ್ಯಕ್ಕೆ ತೊಂದರೆ ಇಲ್ಲ. ಸಿಎಂ, ಸಚಿವರು, ಅಧಿಕಾರಿಗಳು ಸ್ವತಃ ಬೆಳಗಾವಿ ಜಿಲ್ಲೆಯ ಮಾಹಿತಿಯನ್ನು ಕೇಳುತ್ತಿದ್ದಾರೆʼʼ ಎಂದರು.

ಖಾನಾಪುರ ತಾಲೂಕಿನ ಅಮಗಾಂವ್‌ನಲ್ಲಿ ಮಹಿಳೆಗೆ ತೀವ್ರ ಅನಾರೋಗ್ಯ ಹಿನ್ನೆಲೆ ಕಟ್ಟಿಗೆ ಸ್ಟ್ರೇಚರ್ ಮೇಲೆ ಹೊತ್ತೊಯ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ʻʻಅರಣ್ಯ ಪ್ರದೇಶದಲ್ಲಿನ ಜನರಿಗೆ ಔಷಧ ನೀಡಲು ಸೂಚನೆ ನೀಡಲಾಗಿದೆ. ಮಳೆ ಕಡಿಮೆಯಾದ ಮೇಲೆ ಕಾಡಂಚಿನ ಜನರಿಗೆ ಪುನರ್ವಸತಿ ಒದಗಿಸಲು ಕ್ರಮ ವಹಿಸಲಾಗುವುದುʼʼ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

"ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹದ ಹಿನ್ನೆಲೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ಎಲ್ಲಾ ತಹಶೀಲ್ದಾರರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆʼʼ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

Tags:    

Similar News