ತಾಯಿಗೆ ನಿಂದಿಸಿದ್ದಕ್ಕೆ ಸಂಬಂಧಿಕನನ್ನೇ ಬೈಕ್ ರಾಡ್‌ನಿಂದ ಹೊಡೆದು ಕೊಂದ ಯುವಕ

ಬೆಳಗಿನ ಜಾವ ಕಾರ್ತಿಕ್, ಅವಿನಾಶ್‌ನನ್ನು ಬೈಕ್‌ನ ಕಬ್ಬಿಣದ ಕ್ರಾಸ್ ಗಾರ್ಡ್ ರಾಡ್‌ನಿಂದ ತಲೆ ಮತ್ತು ಬೆನ್ನಿಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವಿನಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Update: 2025-10-28 05:08 GMT

ಸಾಂದರ್ಭಿಕ ಚಿತ್ರ

Click the Play button to listen to article

ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ, ತನ್ನ ಸಂಬಂಧಿಕನನ್ನೇ ಬೈಕ್‌ನ ಕ್ರಾಸ್ ಗಾರ್ಡ್ ರಾಡ್‌ನಿಂದ ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಉಪನಗರದಲ್ಲಿ ನಡೆದಿದೆ.

ಉಳ್ಳಾಲ ಉಪನಗರದ ನಿವಾಸಿ ಅವಿನಾಶ್ (36) ಕೊಲೆಯಾದ ದುರ್ದೈವಿ. ಆರೋಪಿ ಕಾರ್ತಿಕ್, ಮೃತ ಅವಿನಾಶ್‌ನ ಸಂಬಂಧಿಯಾಗಿದ್ದು, ಈತನೇ ಕೃತ್ಯ ಎಸಗಿದ ನಂತರ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪೊಲೀಸರ ಪ್ರಕಾರ, ಮೃತ ಅವಿನಾಶ್ ಸ್ಕೂಲ್ ಬಸ್ ಚಾಲಕನಾಗಿದ್ದ. ಈತ ಈ ಹಿಂದೆ ಹೋಟೆಲ್ ನಡೆಸುತ್ತಿದ್ದ ಕಾರ್ತಿಕ್ ಕುಟುಂಬದ ಜೊತೆಯೇ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಕಾರ್ತಿಕ್ ಮನೆಗೆ ಬಂದ ಅವಿನಾಶ್, ಕಾರ್ತಿಕ್‌ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದ. ಈ ವೇಳೆ ಕಾರ್ತಿಕ್‌ನ ತಾಯಿ ಪೊಲೀಸರಿಗೆ ಕರೆ ಮಾಡಿದ್ದರು.

ತಾಯಿಗೆ ಬೈದಿದ್ದರಿಂದ ತೀವ್ರವಾಗಿ ಕೆರಳಿದ್ದ ಕಾರ್ತಿಕ್, ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಬೈಕ್‌ನ ಕ್ರಾಸ್ ಗಾರ್ಡ್ ರಾಡ್‌ನಿಂದ ಅವಿನಾಶ್‌ನ ತಲೆ ಮತ್ತು ಬೆನ್ನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವಿನಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಅವಿನಾಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಡಿತದ ಚಟದಿಂದಾಗಿ ಪತ್ನಿ ತವರು ಮನೆ ಸೇರಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರ್ತಿಕ್‌ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Tags:    

Similar News