ಸಚಿವ ಕೆ.ಎಚ್. ಮುನಿಯಪ್ಪ ಮುಖ್ಯಮಂತ್ರಿಯಾದರೆ ಸಂತೋಷ: ಜಿ. ಪರಮೇಶ್ವರ್
ದಲಿತ ಸಿಎಂ ಸ್ಥಾನದ ಬಗ್ಗೆ ಪಕ್ಷದಲ್ಲಿ ತೀರ್ಮಾನ ಮಾಡುತ್ತಾರೆ. ನಾವು ಇಲ್ಲಿ ಕುಳಿತುಕೊಂಡು ನಾಲ್ಕು ಜನ ಹೇಳಿದರೆ ಆಗುವುದಿಲ್ಲ. ಹೈಕಮಾಂಡ್‌ನವರು ವಿಶ್ಲೇಷಣೆ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಡಾ.ಜಿ. ಪರಮೇಶ್ವರ್
ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆಯ ಬಗ್ಗೆ ಉಹಾಪೋಹಗಳ ನಡುವೆಯೇ ಇಲ್ಲಿಯವರೆಗೂ ತೆರೆಮರೆಯಲ್ಲಿದ್ದ ದಲಿತ ಸಿಎಂ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಕೆ.ಎಚ್. ಮುನಿಯಪ್ಪ ಸಿಎಂ ಆಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಿವಮೊಗ್ಗದಲ್ಲಿ ಘೋಷಣೆ ಕೂಗಿರುವುದು ರಾಜ್ಯದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಎದ್ದಿದೆ.
ಈ ಕುರಿತು ಸದಾಶಿವನಗರದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಕೆ.ಹೆಚ್.ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿದ್ದವರು. ಇದು ಸಾಮಾನ್ಯವಲ್ಲ. ಪಕ್ಷದಲ್ಲಿ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದರು. ಈಗ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಅವರು ಸಮರ್ಥರಿದ್ದು, ಅರ್ಹತೆಯೂ ಇದೆ. ಮುನಿಯಪ್ಪನವರು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ. ನಾವೆಲ್ಲ ಒಂದು ವರ್ಗಕ್ಕೆ ಸೇರಿದ್ದೇವೆ. ನಮಗೆ ಅವಕಾಶ ಸಿಕ್ಕಿತಲ್ಲ ಎಂಬ ಸಂತೋಷ ಆಗುತ್ತದೆ. ಯಾವ ವರ್ಗವು ತುಳಿತಕ್ಕೆ ಒಳಗಾಗಿತ್ತು, ಆ ವರ್ಗಕ್ಕೆ ಆಡಳಿತ ಸಿಗಲಿದೆ ಎಂದಾದರೆ ಸಂತೋಷಪಡಬೇಕಲ್ಲವೇ ಎಂದು ಹೇಳಿದ್ದಾರೆ.
ಸಂಪುಟ ಪುನಾರಚನೆ ಹೈಕಮಾಂಡ್ ತೀರ್ಮಾನ
ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ನಾವು ಏನನ್ನೂ ಹೇಳಲು ಬರುವುದಿಲ್ಲ. ವರಿಷ್ಠರು ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡಬೇಕು. ನಾವು ದಿನನಿತ್ಯ ಮಾಧ್ಯಮದಲ್ಲಿ ಹೇಳಿಕೆ ಕೊಡಬಹುದು ಅಷ್ಟೇ. ಇಲ್ಲಿವರೆಗೆ ಹೈಕಮಾಂಡ್‌ನವರು ಏನಾದರೂ ಹೇಳಿದ್ದಾರೆಯೇ?, ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಮಾಡುತ್ತೇವೆ ಎಂಬುದರ ಬಗ್ಗೆ ಹೈಕಮಾಂಡ್ ಯಾವುದೇ ಮಾಹಿತಿ ನೀಡಿಲ್ಲ. ಏನಾದರೂ ಹೈಕಮಾಂಡ್‌ನಿಂದ ಸೂಚನೆ ಬಂದಿದ್ದರೆ ನಾವು ಪ್ರತಿಕ್ರಿಯಿಸಬಹುದು. ಹೈಕಮಾಂಡ್ ತಿಳಿಸುವವರೆಗೂ ಯಾವುದಕ್ಕೂ ಮಹತ್ವ ಇರುವುದಿಲ್ಲ ಎಂದು ತಿಳಿಸಿದರು.
ಆಡಳಿತಕ್ಕೆ ಚುರುಕು ಅನಿವಾರ್ಯ
ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ನಡೆದಿತ್ತು. ಈಗ ಸಂಪುಟ ಪುನಾರಚನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದಿನನಿತ್ಯ ಈ ರೀತಿ ಗೊಂದಲಗಳಾಗುತ್ತಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ?, ಆಡಳಿತ ಚೆನ್ನಾಗಿ ಆಗಬೇಕಾದರೆ ಇದೆಲ್ಲ ನಿಲ್ಲಬೇಕು. ನೆರೆ ಹಾವಳಿ, ರಸ್ತೆ ಗುಂಡಿ ಬಿದ್ದಿದೆ ಎಂಬ ದೂರು ನಿಲ್ಲಿಸಲು ಆಡಳಿತವನ್ನು ಚುರುಕುಗೊಳಿಸಬೇಕು ಎಂದಿದ್ದಾರೆ.
ಸಂಪುಟ ಪುನಾರಚನೆ ಮುನ್ಸೂಚನೆ ಇಲ್ಲ
ನ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತೋಷ ಕೂಟ ಏರ್ಪಡಿಸಿರುವುದಕ್ಕೆ ದೊಡ್ಡ ರಾಜಕೀಯ ಬೆಳವಣಿಗೆ ಎಂದು ವಿಶ್ಲೇಷಣೆ ಮಾಡಬೇಕಿಲ್ಲ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್‌ನವರು ಈವರೆಗೆ ಯಾರು ಹೇಳಿಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ ಎಂದು ಹೇಳಿದ್ದಾರೆ.
ದಲಿತ ಸಿಎಂ, ಹೈಕಮಾಂಡ್ ನಿರ್ಧಾರ
ದಲಿತ ಸಿಎಂ ಸ್ಥಾನದ ಬಗ್ಗೆ ಪಕ್ಷದಲ್ಲಿ ತೀರ್ಮಾನ ಮಾಡುತ್ತಾರೆ. ನಾವು ಇಲ್ಲಿ ಕುಳಿತುಕೊಂಡು ನಾಲ್ಕು ಜನ ಹೇಳಿದರೆ ಆಗುವುದಿಲ್ಲ. ಹೈಕಮಾಂಡ್‌ನವರು ವಿಶ್ಲೇಷಣೆ ಮಾಡುತ್ತಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ. ತದನಂತರ ಇದಕ್ಕೆ ಅವಶ್ಯಕತೆ ಇದ್ದರೆ ಅವರೇ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಭೆ ಮಾಡದಂತೆ ಸೂಚಿಸಿದ್ಧ ಹೈಕಮಾಂಡ್
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ ಹಾಗೂ ಎಚ್.ಸಿ. ಮಹದೇವಪ್ಪ ಭೋಜನಕೂಟದ ಹೆಸರಲ್ಲಿ ಆಗಾಗ ಸಭೆ ಸೇರಿ ಹೈಕಮಾಂಡ್‌ಗೆ ಸಂದೇಶ ರವಾನಿಸುತ್ತಿದ್ದರು. ಆದರೆ ಈ ಎಲ್ಲಾ ಸಭೆಗಳಿಗೂ ಹೈಕಮಾಂಡ್‌ನಿಂದ ವಿರಾಮ ಹಾಕಿಸುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದರು.