The Federal Interview| ರಂಗಕರ್ಮಿ ಪ್ರಸನ್ನ ಹೆಗ್ಗೋಡು ʼಡಿಜಿಟಲ್ ಕುಂಚʼʼದಲ್ಲಿ ಮೂಡಿದ ಚಿತ್ತಾರ
ಚಿತ್ರಕಲೆ ಪ್ರದರ್ಶನ ಕುರಿತು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿಕೊಂಡಿದ್ದಾರೆ.
ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖರ ಸಾಲಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ಸಹ ಸೇರುತ್ತಾರೆ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ ಪದವಿ ಪಡೆದರೂ ಅವರಿಗೆ ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು.ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ನಾಟಕಗಳನ್ನು ನಿರ್ದೇಶಿಸಿದ್ದರು. ರಂಗಭೂಮಿ ಅಧ್ಯಯನಕ್ಕಾಗಿ ರಷ್ಯಾ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು.
ರಂಗಭೂಮಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಪ್ರಸನ್ನ ಹೆಗ್ಗೋಡು ಅವರು ಸದ್ದಿಲ್ಲದೆ ಪೇಂಟಿಂಗ್‌ನಲ್ಲಿಯೂ ಪ್ರಾವೀಣ್ಯತೆ ಮೆರೆದಿದ್ದಾರೆ. ಕಲಾವಿದನ ಕೈಚಳಕ ನೋಡಿ ಕಲಾ ಪ್ರೇಮಿಗಳು ಬೆರಗಾಗುವಂತೆ ಅವರ ಕುಂಚದಲ್ಲಿ ಮೂಡಿಬಂದಿವೆ. ರಂಗಕರ್ಮಿ, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಪ್ರಸನ್ನ ಹೆಗ್ಗೋಡು ಅವರು ಚಿತ್ರಕಲೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಇದೇ ತಿಂಗಳು ಅಂತ್ಯದಲ್ಲಿ ಪ್ರಸನ್ನ ಹೆಗ್ಗೋಡು ಅವರ ಕುಂಚದಲ್ಲಿ ಮೂಡಿಬಂದ ಚಿತ್ರಕಲೆಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇದೇ 30ರಂದು ಉದ್ಘಾಟನೆಯಾಗಲಿದೆ. ಅ.31, ನ.1 ಮತ್ತು 2ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪ್ರಸನ್ನ ಹೆಗ್ಗೋಡು ಅವರು ಬಿಡಿಸಿರುವ ಕಪ್ಪು-ಬಿಳುಪಿನ ವಿಭಿನ್ನ ಚಿತ್ರಗಳನ್ನು ಚಿತ್ರಕಲೆ ಪ್ರೇಮಿಗಳು ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರಸನ್ನ ಹೆಗ್ಗೋಡು ಅವರು ತಮ್ಮ ಚಿತ್ರಕಲೆಗಳಿಗೆ ಡಿಜಿಟಲ್ ಟಚ್ ನೀಡಿದ್ದು, ಐಪ್ಯಾಂಡ್‌ಗಳಲ್ಲಿ ಬಿಡಿಸಿರುವ ಚಿತ್ರಗಳನ್ನು ಡಿಜಿಟಲ್ ಪ್ರಿಂಟ್ ತೆಗೆದು ಪ್ರದರ್ಶನ ಮಾಡಲಾಗುತ್ತಿದೆ. ಪ್ರತಿ ಚಿತ್ರಕಲೆಯು ರಂಗಭೂಮಿ ಮತ್ತು ದೃಶ್ಯಕಲೆಯ ನಿಕಟ ಸಂಬಂಧವನ್ನು ಹೊಂದಿವೆ. ಚಿತ್ರಕಲೆ ಪ್ರದರ್ಶನದಲ್ಲಿ ಮಾರಾಟವಾಗುವ ಪ್ರತಿಯೊಂದು ಚಿತ್ರಕಲೆಯ ಹಣವು ಮೈಸೂರಿನಲ್ಲಿರುವ ಭಾರತೀಯ ರಂಗಭೂಮಿ ಶೈಕ್ಷಣಿಕ ಸಂಸ್ಥೆಯ ಏಳ್ಗೆಗಾಗಿ ಬಳಕೆ ಮಾಡಲಾಗುತ್ತದೆ. ಬಿಡುಗಾಸು ಸಹ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. ಭಾರತೀಯ ರಂಗಭೂಮಿ ಶೈಕ್ಷಣಿಕ ಸಂಸ್ಥೆಯು ರಂಗಭೂಮಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂವಹನ ಕೌಶಲ್ಯ ಮತ್ತು ಸಾಂಸ್ಕೃತಿಕ ಅರಿವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಹೀಗಾಗಿ ಸಂಗ್ರಹವಾಗುವ ಹಣವನ್ನು ಸಂಸ್ಥೆಗೆ ನೀಡುವ ಉದ್ದೇಶ ಪ್ರಸನ್ನ ಹೆಗ್ಗೋಡು ಅವರದ್ದಾಗಿದೆ.
ಚಿತ್ರಕಲೆ ಪ್ರದರ್ಶನ ಕುರಿತು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ್ದು, ರಂಗಭೂಮಿಯ ಪ್ರಸ್ತುತ ಪರಿಸ್ಥಿತಿ, ಚಿತ್ರಕಲೆ ಪ್ರದರ್ಶನ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿಕೊಂಡಿದ್ದಾರೆ. ರಂಗಭೂಮಿ ಎನ್ನುವುದು ದೃಶ್ಯ, ಶ್ರವ್ಯ ಮಾಧ್ಯಮವಾಗಿದ್ದು, ಎರಡು ಸಂವೇದನೆ ಮೂಲಕ ಒಂದು ಕಲೆ ಸೃಷ್ಟಿಯಾಗುತ್ತದೆ. ದೃಶ್ಯಕಲೆಯಲ್ಲಿ ಕೇವಲ ನೋಡುತ್ತೇವೆ. ನಾಟಕ ನಿರ್ದೇಶನ ಮಾಡುವ ವೇಳೆ ಅಲ್ಲಿನ ಕೆಲವು ಅಂಶಗಳನ್ನು ಗಮನಿಸಿ ಚಿತ್ರಕಲೆ ಮೂಲಕ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಮೊದಲಿನಿಂದಲೂ ಚಿತ್ರಬರೆಯಲು ಕಣ್ಣಿನ ಗ್ರಹಿಕೆ ಇದೆ. ಚಿತ್ರಕಲೆಗಳನ್ನು ಮಾ ಡುವುದು ಹೊಸದೇನಲ್ಲ, ಆದರೆ, ಅವುಗಳ ಪ್ರದರ್ಶನ ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ರಂಗಭೂಮಿ, ದೃಶ್ಯಕಲೆ ಸಂಬಂಧ ಚಿತ್ರಕಲೆ ಸ್ಪರ್ಶ
ವೃತ್ತಿಯ ವೇಳೆ ಹಲವು ರೀತಿಯ ಚಿತ್ರಗಳನ್ನು ಬಿಡಿಸುತ್ತೇನೆ. ಅಲ್ಲದೇ, ಪ್ರೊಡೆಕ್ಷನ್ ಸಮಯದಲ್ಲಿಯೂ ಹಲವು ಚಿತ್ರಗಳು ಹೊರಹೊಮ್ಮಿವೆ. ಚರಕ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೆಗಲ ಮೇಲೆ ಇದ್ದ ಸಂದರ್ಭದಲ್ಲಿ ಅಲ್ಲಿಗೆ ಬೇಕಾದ ಚಿತ್ರಗಳನ್ನು ಬಿಡಿಸಲಾಗಿದೆ. ಇತ್ತೀಚಿನ ವರ್ಷದಲ್ಲಿ ಪ್ರಯಾಣಿಸುವಾಗಲೂ ಚಿತ್ರ ಬಿಡಿಸಲು ಹೈಪ್ಯಾಂಡ್ ಬಳಕೆ ಮಾಡಲಾರಂಭಿಸಿದ್ದೇನೆ. ಎಲೆಕ್ಟ್ರಾನ್ ಪೆನ್ ಬಳಸಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಹೀಗೆ ನೂರಾರು ಚಿತ್ರಗಳನ್ನು ರಚಿಸಲಾಗಿದೆ. ಡಿಜಿಟಲ್ ಆಶ್ರಯದ ಮೂಲಕ ಚಿತ್ರಕಲೆ ಹೊರಹೊಮ್ಮುತ್ತಿದೆ. ಡಿಜಿಟಲ್‌ನಲ್ಲಿ ರೂಪುಗೊಂಡ ಎಲ್ಲಾ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿ ಚಿತ್ರದಲ್ಲಿಯೂ ರಂಗಭೂಮಿ, ದೃಶ್ಯಕಲೆಯ ನಿಕಟ ಸಂಬಂಧ ಇದ್ದು, ಅವುಗಳನ್ನು ಪ್ರದರ್ಶನದಲ್ಲಿ ಗಮನಿಸಬಹುದು ಎಂದು ನುಡಿದಿದ್ದಾರೆ.
ಇದೇ 30ರಂದು ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದ್ದು, ಅ.31, ನ.1 ಮತ್ತು 2ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಚಿತ್ರಕಲಾ ಪರಿಷತ್‌ನ ನಾಲ್ಕನೆ ಗ್ಯಾಲರಿಯಲ್ಲಿ ಚಿತ್ರಕಲೆ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಚಿತ್ರಕಲೆ ಪ್ರದರ್ಶನದ ಉದ್ದೇಶವು ಮಾರಾಟವಾಗುವ ಪ್ರತಿ ಚಿತ್ರಕಲೆಯ ಹಣವು ಮೈಸೂರಿನಲ್ಲಿ ಆರಂಭಿಸಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಗೆ ಬಳಕೆ ಮಾಡಲಾಗುತ್ತದೆ. ಚಿತ್ರಕಲಾ ರಸಿಕರು ಚಿತ್ರಕಲೆಯನ್ನು ಖರೀದಿಸಲು ನೀಡುವ ಹಣವನ್ನು ಡೋನೇಷನ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ, 80ಜಿ ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ. ಮಕ್ಕಳಿಗೆ ಸಂಬಂಧ ಶಿಕ್ಷಣಕ್ಕಾಗಿ ಭಾರತದಲ್ಲಿಯೇ ಮೊಟ್ಟಮೊದಲ ಸಂಸ್ಥೆ ಇದಾಗಿದೆ. ಚಿತ್ರಕಲೆಯನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರ ನೆರವು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಕಪ್ಪು-ಬಿಳಿಪಿನ ಚಿತ್ರಗಳು
ನನ್ನ ಚಿತ್ರಕಲೆಗೆ ತುಂಬಾ ಮಂದಿ ಪ್ರೇರಕರಾಗಿದ್ದು, ಮೊದಲಿಗೆ ನನ್ನ ಗುರುಗಳು ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿದ್ದ ಇಬ್ರಾಹಿಂ ಅಲ್ಕಾಜಿ ಅವರು ಗಾಢವಾಗಿ ಚಿತ್ರಕಲೆಯಲ್ಲಿ ಸಂಬಂಧ ಹೊಂದಿದ್ದರು. ಅವರ ಮೂಲಕವೇ ಖ್ಯಾತ ಚಿತ್ರಕಲೆ ಕಲಾವಿದ ಎಂ.ಎಫ್.ಹುಸೇನ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದೆ. ನಂತರ ಕೆ.ಜಿ.ಸುಬ್ರಹ್ಮಣ್ಯ, ರಾಮ್‌ಕುಮಾರ್ ಸೇರಿದಂತೆ ಹಲವು ಕಲಾವಿದರ ಪರಿಚಯವಾಯಿತು. ಇನ್ನು, ನನ್ನ ನಂತರ ಕರ್ನಾಟಕದಲ್ಲಿ ಬಂದ ತುಂಬಾ ಒಳ್ಳೆಯ ಕಲಾವಿದರೊಂದಿಗೆ ಉತ್ತಮ ಒಡನಾಟ ಇದ್ದು, ಅವರಿಗೆ ನಾಟಕದಲ್ಲಿ ಆಸಕ್ತಿ ಇದ್ದರೆ, ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಹೀಗಾಗಿ ಕಲಾವಿದರಾದ ಶೀಲಾಗೌಡ, ಮೈಸೂರಿನ ಹರ್ಷ ಸೇರಿ ಇತರರು ಸಹ ನನ್ನ ಒಡನಾಡಿಯಾಗಿದ್ದರು ಎಂದಿದ್ದಾರೆ.
ಕೌಶಲ್ಯ ಮೂಲವೇ ಕಲೆಗಳು. ಕಲೆ ಎನ್ನುವುದು ಕೌಶಲ್ಯದಿಂದ ಬಂದಂತಹದು. ಬಳಿಕ ಸೃಜನಶೀಲತೆ ಬರುತ್ತದೆ. ಕೌಶಲ್ಯ ಸಿದ್ದಿಸಿದ ನಂತರವೇ ಆತ್ಮ ವೃದ್ಧಿಸುತ್ತದೆ. ನಂತರ ಸೃಜನಶೀಲತೆಯತ್ತ ಸಾಗುತ್ತಾರೆ. ನನಗಿದ್ದ ಸಮಸ್ಯೆಯೂ ಸಹ ಕಲೆಯ ಕೌಶಲ್ಯವನ್ನು ರೂಢಿಸಿಕೊಳ್ಳುವುದಾಗಿದೆ. ಅದನ್ನು ನಿರಂತರ ಮಾಡುತ್ತಾ ಬಂದೆ. ಚಿತ್ರದಲ್ಲಿ ಸದ್ಯಕ್ಕೆ ಬಣ್ಣ ಬೇಡ ಎಂದು ದೂರ ಇಟ್ಟಿದ್ದೇನೆ. ಪ್ರದರ್ಶನದಲ್ಲಿ ಕಪ್ಪು-ಬಿಳಿಪಿನ ಚಿತ್ರಗಳಿರುತ್ತವೆ. ಅದರಲ್ಲಿ ರೇಖೆಗಳು ಮತ್ತು ಆಕಾರಗಳಿವೆಯೇ ಹೊರತು ಬಣ್ಣಗಳಿಲ್ಲ. ಬಣ್ಣ ಎನ್ನುವುದು ಸಾಗರವಿದ್ದಂತೆ. ಅದರೊಳಗೆ ಎಷ್ಟು ಅಳಕ್ಕೆ ಹೋದರೂ ಕಲಿಯುವಂತಹದಿರುತ್ತದೆ. ಪ್ರಸ್ತುತ ಬಣ್ಣವನ್ನು ಹೊರಗಿಟ್ಟು ಮಾಡಿದ್ದು, ಮುಂದಿನ ದಿನದಲ್ಲಿ ಅದು ನನ್ನ ಹಿಡಿತದಲ್ಲಿದೆ ಎಂಬ ಭಾವನೆ ಬಂದಾಗ ಬಣ್ಣವನ್ನು ಬಳಸುತ್ತೇನೆ ಎಂದು ಹೇಳಿದ್ದಾರೆ.
ಚಿತ್ರಕಲೆಯಲ್ಲಿ ಸಮಾಜಕ್ಕೆ ಸಂದೇಶ
ಪ್ರಸನ್ನ ಹೆಗ್ಗೋಡು ಅವರ ಕೈಯಲ್ಲಿ ಮೂಡಿರುವ ಪ್ರತಿ ಚಿತ್ರದಲ್ಲಿಯೂ ಸಮಾಜಕ್ಕೆ ಸಂದೇಶವನ್ನು ಸಾರುವ ಚಾಕಚಕ್ಯತೆ ಅಡಗಿದೆ. ಪ್ರತಿ ಪಾತ್ರಗಳು ಹಿಂಸೆಗೆ ಪ್ರತಿಯಾಗಿ ಅಹಿಂಸೆಯ ವಿಶ್ಲೇಷಣೆಯನ್ನು ಹೊಂದಿದೆ. ಮನುಷ್ಯ ಯಾವ ಕಾರಣಕ್ಕಾಗಿ ಹಿಂಸಾತ್ಮಕನಾಗುತ್ತಾನೆ ಎಂಬುದರ ವಿಶ್ಲೇಷಣೆಯೂ ಇದೆ. ನಾವು ಮಾಡಿಕೊಂಡಿರುವ ವ್ಯವಸ್ಥೆಯೇ ಹಿಂಸೆಗೆ ಕಾರಣವಾಗಿರುತ್ತದೆ. ಇತ್ತೀಚಿಗಿನ ದಿನದಲ್ಲಿ ಜೀವನ ಯಾಂತ್ರೀಕೃತವಾಗಿದೆ. ಇದಕ್ಕೆ ಅವಸರವೇ ಕಾರಣ ಎಂಬುದು ನನ್ನ ಅಭಿಪ್ರಾಯ. ತಾಳ್ಮೆ ಇರದೆ ಅವಸರದಲ್ಲಿ ಬೆಳೆಯಬೇಕು ಎಂಬ ಹಂಬಲ. ಯಾವುದೇ ಕ್ಷೇತ್ರವನ್ನು ಗಮನಿಸಿ, ಅಲ್ಲಿ ಅವಸರದಲ್ಲಿ ಬೆಳೆಯಬೇಕು ಎಂಬ ಹಪಿಹಪಿ. ರಾಜಕಾರಣ, ಉದ್ಯಮಿ, ಸ್ವಾಮೀಜಿಗಳು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಇದನ್ನು ಗಮನಿಸಬಹುದು. ಅತಿಯಾದ ಅವಸರದ ಪ್ರವೃತಿಯಿಂದ ಹಿಂಸೆ ಉಂಟಾಗುತ್ತದೆ. ಸ್ಥಾವರ ಕಟ್ಟಬೇಕು ಎಂಬ ಉದ್ದೇಶದಲ್ಲಿ ಜಂಗಮವನ್ನು ಬದಿಗೊತ್ತಲಾಗುತ್ತದೆ. ಇದೇ ಚಿತ್ರಕಲೆಯ ಕೇಂದ್ರಬಿಂದುವಾಗಿದೆ.
ಸಭ್ಯತೆಗೆ ಪೆಟ್ಟು ನೀಡಿರುವ ಕೃತಕ ಬುದ್ಧಿಮತ್ತೆ(ಎಐ):
ಕೃತಕ ಬುದ್ಧಿಮತ್ತೆ (ಎಐ) ಉದ್ಯಮಿಗಳಾದ ಟಾಟಾ ಬಿರ್ಲಾ, ಅಂಬಾನಿ, ಅದಾನಿ ಅವರಂತಹವರಿಗೆ ಒಳ್ಳೆಯದು. ಅವರಿಗಾಗಿಯೇ ಇಂತಹ ಸವಲತ್ತುಗಳನ್ನು ಮಾಡಲಾಗಿದೆ. ಎಐ ಇರಲಿ, ಕಂಪ್ಯೂಟರ್ ಇರಲಿ ಯಾವುದೇ ತಂತ್ರಜ್ಞಾನ ಬಂದಿದ್ದು ಮೂಲತಃ ಮಾರುಕಟ್ಟೆಗಾಗಿಯೇ ಹೊರತು ಬೇರಾವುದೇ ಉದ್ದೇಶವಲ್ಲ. ನಮ್ಮನ್ನು ನಾವು ಉಳಿಸಬೇಕಾದ ಅನಿವಾರ್ಯತೆ ಇದೆ. ಸ್ವಂತಿಕೆಗಳು ಉಳಿದಾಗ ಮಾತ್ರ ಅಹಿಂಸಕನಾಗಿ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಸಮಾಜ ನಮ್ಮನ್ನು ಹಿಡಿದಿಡುವ ಸಾಧ್ಯತೆ ಇದ್ದು, ಸಂಸ್ಕೃತಿ ನಮಗೆ ಮಾರ್ಗದರ್ಶನ ನೀಡಲಿದೆ. ಈಗ ಅದೆಲ್ಲವೂ ಕುಸಿದಿದೆ. ಇವತ್ತಿನ ಕಾಲಕ್ಕೆ ಅಂಬಾನಿ, ಅದಾನಿ ಮಾತ್ರವಲ್ಲ ನಾವುಗಳು ಮಾರುಕಟ್ಟೆಯ ಚಾಲಕರಾಗಿದ್ದೇವೆ. ಎಐ ಸಭ್ಯತೆಗೆ ಪೆಟ್ಟು ನೀಡುತ್ತಿದೆ. ಸಭ್ಯತೆ ಪೆಟ್ಟು ನೀಡಿದಾಗ ಪ್ರತಿಯೊಂದು ಸಂಪರ್ಕಕ್ಕೆ ಪೆಟ್ಟು ನೀಡಿದಂತಾಗುತ್ತದೆ. ಇದು ಒಂದು ರೀತಿಯ ಸಭ್ಯತೆಯ ನಾಶದ ಕಾಲ ಇದಾಗಿದೆ. ಇದನ್ನೆಲ್ಲಾ ಗಮನಿಸಿಕೊಂಡು ಚಿತ್ರಕಲೆಯನ್ನು ಮಾಡಿದ್ದು, ಪ್ರೇಕ್ಷಕ ವರ್ಗದಿಂದ ಚಿತ್ರಕಲೆಯಲ್ಲೊಂದು ಆಶಾಭಾವನೆ, ಸಂತೋಷವನ್ನು ಮೂಡಬಹುದು ಎಂಬ ನಿರೀಕ್ಷೆ ಇದೆ. ಅಲ್ಲದೇ, ಮಕ್ಕಳ ಶೈಕ್ಷಣಿಕದ ಉದ್ದೇಶದಿಂದಾಗಿ ಪ್ರದರ್ಶನ ಮಾಡಲಾಗುತ್ತಿದೆ. ಮಕ್ಕಳು ತಮ್ಮದೇ ಸ್ವಂತಿಕೆಯಲ್ಲಿ ಹಾಡು, ನಾಟಕವಾಡಿದರೆ ಮನಸ್ಸು ಅರಳುತ್ತದೆ. ಬೇರೆ ಕೆಲಸದಲ್ಲಿಯೂ ಉಲ್ಲಾಸದಿಂದ ತೊಡಗಿಸಿಕೊಳ್ಳಲು ಸಾಧ್ಯ. ಮಕ್ಕಳು ಸಿನಿಮಾ ನಟ/ನಟಿಯರು ಆಗಬೇಕಿಲ್ಲ, ನಾಟಕದ ನಿರ್ದೇಶಕರಾಗಬೇಕಿಲ್ಲ. ಪ್ರತಿ ಮಗುವು ತಾನೇ ಕೊಂಚ ಹಾಡುವ, ನಟಿಸುವ, ತನ್ನ ಬಾಯಲ್ಲಿ ವಚನ, ದಾಸರ ಪದಗಳನ್ನು ಹೇಳುವ ಶಕ್ತಿ ಬೇಕು. ನಾವೆಲ್ಲಾ ಅದನ್ನು ತಪ್ಪಿಸುತ್ತಿದ್ದೇವೆ. ಬದಲಿಗೆ ಮೊಬೈಲ್ ಮೂಲಕ ನೀಡುತ್ತಿದ್ದೇವೆ. ಇದು ಸಮಾನಕ್ಕೆ ಎಂದಿಗೂ ಒಳಿತಾಗುವುದಿಲ್ಲ. ದೊಡ್ಡ ವಿನಾಶದ ಪರಿಸ್ಥಿತಿ ಇದೆ ಎನಿಸುತ್ತಿದೆ ಎಂಬುದು ಪ್ರಸನ್ನ ಹೆಗ್ಗೋಡು ಅಭಿಮತವಾಗಿದೆ.
ಗ್ರಾಮೀಣ ಭಾಗದಿಂದಲೂ ಚರಕ ಸಂಸ್ಥೆಗೆ ಬರುತ್ತಿರುತ್ತಾರೆ. ಡಿಪ್ಲೋಮಾ ತರಗತಿ ಪಡೆದಿದ್ದರೂ ಬಹಳಷ್ಟು ಮಂದಿ ನಾಟಕಗಳನ್ನು ನೋಡಿಲ್ಲ, ವಚನಗಳನ್ನು ಕೇಳಿರುವುದಿಲ್ಲ. ಕಾರಣ ಕೇಳಿದರೆ ರೀಲ್ಸ್ ನೋಡುತ್ತಿರುವ ಬಗ್ಗೆ ಹೇಳುತ್ತಾರೆ. ಅದು ಅವರ ತಪ್ಪಲ್ಲ, ಅದೆಲ್ಲವೂ ನಮ್ಮದೇ ತಪ್ಪು. ರೀಲ್ಸ್ ನೋಡಿ ಮಕ್ಕಳು ಸಂತೋಷಪಟ್ಟರೆ ನಾವು ಸಂಭ್ರಮಿಸುತ್ತೇವೆ. ಇಂತಹದ್ದನ್ನು ತಪ್ಪಿಸಬೇಕಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಕೇವಲ ಓದು ಮಾತ್ರವಲ್ಲದೇ, ಇತರೆ ಚಟುವಟಿಕೆಗಳಲ್ಲಿಯೂ ತೊಡಗಿಸಬೇಕಾಗಿದೆ.
ಹಿಂದೂ ಮತಗಳಿಗಾಗಿ ಹಿಂದೂ ಧರ್ಮದ ದುರ್ಬಳಕೆ
ಇತ್ತೀಚೆಗಿನ ವರ್ಷದಲ್ಲಿ ಚಿತ್ರಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆಯ ಮತ್ತೊಂದು ಭಾಗ. ಮಾರುಕಟ್ಟೆ ಅನಿವಾರ್ಯ. ಆದರೆ, ಅತಿಯಾದ ಮಾರುಕಟ್ಟೆ ಒಳ್ಳೆಯದಲ್ಲ. ಮಾರುಕಟ್ಟೆಯಲ್ಲದ ಚಿತ್ರಕಲೆ, ಸಂಗೀತ ಸೇರಿ ಇತರೆ ಕಲೆಯೂ ಬೇಕು. ಹೀಗಾಗಿ ಮಾರುಕಟ್ಟೆ, ಮಾರುಕಟ್ಟೆಯಲ್ಲದ ಮಧ್ಯದಲ್ಲಿ ಇರಬೇಕಾಗಿದೆ. ಚಿತ್ರಸಂತೆಯೂ ಸಹ ಅತಿಯಾದ ಮಾರುಕಟ್ಟೆಯಾಗಬಾರದು. ನಮ್ಮ ಪರಂಪರೆಯು ಸಹ ಮಧ್ಯಮದಲ್ಲಿರುವಂತೆ ಹೇಳಿದೆ. ಅತಿಯಾದ ಎಡ, ಬಲವೂ ತಪ್ಪು. ಹಿಂದುತ್ವಕ್ಕೂ ಹಿಂದೂಧರ್ಮಕ್ಕೂ ಏನು ಸಂಬಂಧ. ಹಿಂದುಗಳ ಮತಗಳನ್ನು ಪಡೆಯಲು ಮುಸ್ಲಿಂನಂತಹ ಪಾಕಿಸ್ತಾನದಲ್ಲಿಯೂ ಬುಡಬುಡಿಕೆ ಮಾಡುತ್ತಾರೆ. ಅಂತೆಯೇ ದೇಶದಲ್ಲಿಯೂ ಸಹ ನಡೆಯುತ್ತಿದೆ. ಈ ಮೊದಲು ದೇಶದಲ್ಲಿ ಇರಲಿಲ್ಲ, ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ಮತಗಳನ್ನು ಸಂಗ್ರಹಿಸಲು ಹಿಂದೂಧರ್ಮದ ದುರ್ಬಳಕೆಯಾಗುತ್ತಿದೆ. ರಾಮನ, ಕೃಷ್ಣನ ದುರ್ಬಳಕೆಯಾಗುತ್ತಿದೆ. ಇದು ತಪ್ಪು. ಹಿಂದೂ ಧರ್ಮ ಕಟ್ಟುತ್ತಾರಾ? ನಾನು ಹೋಗುತ್ತೇನೆ. ಆದರೆ, ಹಿಂದೂಧರ್ಮವನ್ನು ಮುಸ್ಲಿಂ ಧರ್ಮದ ವಿರುದ್ಧ ಕಟ್ಟಲು ಬರುವುದಿಲ್ಲ ಎಂದು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ವ್ಯಾಪಾರೀಕರಣಗೊಂಡ ಚಿತ್ರಕಲೆ
ಚಿತ್ರಕಲೆ ಕ್ಷೇತ್ರದಲ್ಲಿ ಬಹಳ ಒಳ್ಳೆಯ ಕೆಲಸಗಳಾಗಿವೆ. ಆದರೆ, ಮೊದಲು ವ್ಯಾಪಾರೀಕರಣಗೊಂಡಿದ್ದೇ ಈ ಚಿತ್ರಕಲೆ. ಯಾಕಂದರೆ ಜಾಹೀರಾತಿಗೆ ಚಿತ್ರಕಲೆ ಬೇಕು, ಪ್ರಚಾರಕ್ಕೆ ಚಿತ್ರಕಲೆ ಬೇಕು. ಹೀಗಾಗಿ ಕಲಾವಿದ ಜನರಿಂದ ವಿಮುಖನಾಗಿ ಜರ್ಮನಿಯ ಗ್ಯಾಲರಿಯಲ್ಲಿ ಪ್ರದರ್ಶಿಸಿ ಹಣ ಗಳಿಸಿಕೊಳ್ಳುತ್ತಾನೆ. ಚಿತ್ರಕಲಾವಿದನಿಗೂ, ಆ ಊರಿನವರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇತ್ತೀಚೆಗೆ ಎಲ್ಲ ಕ್ಷೇತ್ರವೂ ವ್ಯಾಪಾರೀಕರಣವಾಗಿದೆ. ಚಿತ್ರಕಲೆ 10 ವರ್ಷದ ಹಿಂದೆಯೇ ಆಗಿದೆ. ಇನ್ನು, ರಂಗಭೂಮಿಯು ಸಹ ಮೊದಲಿನಂತೆ ಇಲ್ಲ. ನನ್ನ ಮಾತನ್ನು ಸಿನಿಮಾ ಹೋಗಿರುವವರು, ಹೋಗುವವರು ಕೇಳುತ್ತಾರೆ. ಅವರಿಗೆ ಆಸಕ್ತಿ ಇರುತ್ತದೆ. ಆದರೆ, ಬೇರೆಯವರಿಗೆ ಎರಡೊಪ್ಪತ್ತಿನ ಊಟ ಗಿಟ್ಟಿಸಿಕೊಂಡರೆ ಸಾಕಾಗಿದೆ. ಬದುಕು ಸಾಗಿಸಿದರೆ ಸಾಕಾಗಿರುತ್ತದೆ. ರಂಗಭೂಮಿಯ ಸ್ಥಳಗಳು ಕಡಿಮೆಯಾಗುತ್ತಿವೆ. ಯಾರು ಬಂದು ನಾಟಕ ನೋಡುತ್ತಾರೆ ಎಂದರೆ ಮೇಲ್ವರ್ಗದ ಮಧ್ಯಮ ವರ್ಗ, ಶ್ರೀಮಂತ ವರ್ಗ ನೋಡಬಹುದು. ಬಡವರು ಬರಲು ಸಾಧ್ಯವೇ? ಅವರಿಗೆ ಜೀವನ ಸಾಗಿಸಬೇಕಾಗಿದೆ. ೫೦ ವರ್ಷದ ಹಿಂದೆ ಬಡವರು ನಾಟಕ ಮಾಡಲು ಬರುತ್ತಿದ್ದರು. ಅವರ ನಾಟಕಗಳನ್ನು ಉನ್ನತ ಜಾತಿಯವರು ಬಂದು ನೋಡುತ್ತಿದ್ದರು. ಅಲ್ಲದೇ, ಜಾತಿಯತೆ ಇದ್ದರೂ, ರಂಗಭೂಮಿ ವಿಚಾರದಲ್ಲಿ ಜಾತಿಯತೆ ನೋಡದೆ ಬಂದು ವೀಕ್ಷಿಸುತ್ತಿದ್ದರು ಎಂದಿದ್ದಾರೆ.
ಕಮಂಗಿ ನಟರ ನಡುವೆ ನರೇಂದ್ರ ಮೋದಿ, ರಾಹುಲ್‌ಗಾಂಧಿ ಇದ್ದಾರೆ
ಇತ್ತೀಚೆಗೆ ಪ್ರತಿಯೊಂದು ಮಾರುಕಟ್ಟೆಯ ಕೈಯಲ್ಲಿ ಇದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಲಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿಯಾಗಲಿ ಮುಖ್ಯವಲ್ಲ. ಮಾರುಕಟ್ಟೆಯೇ ಮುಖ್ಯ. ನಮ್ಮನ್ನೆಲ್ಲವನ್ನೂ ಮಾರುಕಟ್ಟೆ ಕುಣಿಸುತ್ತಿದೆ. ನಾವೆಲ್ಲಾ ಕುಣಿಯುತ್ತಿದ್ದೇವೆ. ಕುಣಿಯುತ್ತಿರುವ ಕಮಂಗಿ ನಟರ ನಡುವೆ ನರೇಂದ್ರ ಮೋದಿ, ರಾಹುಲ್‌ಗಾಂಧಿ ಇದ್ದಾರೆ. ಅವರ ಜತೆಗೆ ನಾವುಗಳು ಇದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದ್ದಾರೆ.
ಪ್ರಸನ್ನ ಹೆಗ್ಗೊಡು ಅವರ ಸಂದರ್ಶನದ ಪೂರ್ಣ ವಿವರಕ್ಕಾಗಿ ಈ ಕೆಳಗೆ ಕ್ಲಿಕ್ ಮಾಡಿ.