ಅತ್ಯಾಚಾರ ಆರೋಪ: ಡಿ.ಜೆ. ಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಅಮಾನತು

ಕೆಲವು ದಿನಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂತ್ರಸ್ತ ಮಹಿಳೆಯು ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ) ಕಚೇರಿಗೆ ನೇರವಾಗಿ ದೂರು ಸಲ್ಲಿಸಿದ್ದರು.

Update: 2025-10-27 10:59 GMT

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಐ ಅಧಿಕಾರಿಯೊಬ್ಬರನ್ನೂ ಅಮಾನತು ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂತ್ರಸ್ತ ಮಹಿಳೆಯು ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ) ಕಚೇರಿಗೆ ನೇರವಾಗಿ ದೂರು ಸಲ್ಲಿಸಿದ್ದರು. "ಕಳೆದ ಒಂದು ವರ್ಷದಿಂದ ಇನ್ಸ್‌ಪೆಕ್ಟರ್ ಸುನೀಲ್ ಅವರು ನನ್ನನ್ನು ಮನೆ ಹಾಗೂ ಹೋಟೆಲ್‌ಗಳಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬ್ಯೂಟಿ ಪಾರ್ಲರ್ ತೆರೆದು ಕೊಡುವುದಾಗಿ ಮತ್ತು ವ್ಯಾಪಾರಕ್ಕೆ ಹಣ ನೀಡುವುದಾಗಿ ಆಮಿಷವೊಡ್ಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ" ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, "ತಮ್ಮ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಇನ್ಸ್‌ಪೆಕ್ಟರ್ ಸುನೀಲ್ ಅವರು ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ" ಎಂದೂ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದರು.

ಆಯುಕ್ತರಿಂದ ತಕ್ಷಣದ ಕ್ರಮ

ಮಹಿಳೆಯ ದೂರು ಸ್ವೀಕರಿಸಿದ ಕೂಡಲೇ, ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಕ್ಕೆ ಪುಷ್ಟಿ ಸಿಕ್ಕ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್ ಸುನೀಲ್ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಓರ್ವ ಎಎಸ್‌ಐ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

"ಇನ್ಸ್‌ಪೆಕ್ಟರ್ ಹಾಗೂ ಎಎಸ್‌ಐ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಲಾಖಾ ತನಿಖೆ ಮುಂದುವರಿದಿದೆ. ತನಿಖೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

Tags:    

Similar News