ಸಿಎಂ ಪಟ್ಟಕ್ಕಾಗಿ ಬದಲಾಯಿತೇ ʼಟ್ರಬಲ್ ಶೂಟರ್ʼ ಡಿಕೆಶಿ ರಾಜಕೀಯ ತಂತ್ರ?
ಶಾಸಕರಿಗೆ ಖುದ್ದು ದೂರವಾಣಿ ಕರೆ ಮಾತನಾಡುತ್ತಿದ್ದು, ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನ್ನೊಂದಿಗೆ ಹಂಚಿಕೊಳ್ಳಿ, ಬಗೆಹರಿಸುತ್ತೇನೆ ಎಂದು ಭರವಸೆ ನೀಡುತ್ತಿರುವುದು ಹಲವರ ಹುಬ್ಬೇರಿಸಿದೆ.
ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜಕೀಯ ತಂತ್ರಗಾರಿಕೆ ಬದಲಿಸಿಕೊಂಡಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಬಳಗವನ್ನು ನೇರಾ ನೇರ ಎದುರು ಹಾಕಿಕೊಳ್ಳುವ ಬದಲು ಸಂಯಮದ ನಡೆಯ ಮೂಲಕ ಸಿಎಂ ಸ್ಥಾನಕ್ಕೆ ಚೆಕ್‌ಮೆಟ್ ನೀಡಲು ತಯಾರಿ ನಡೆಸಿದ್ದಾರೆ. 'ನವೆಂಬರ್ ಕ್ರಾಂತಿ'ಯ ಹೇಳಿಕೆಯ ಸಮಯದಲ್ಲೇ ತಾಳ್ಮೆ, ಮೃದು ಧೋರಣೆಗಳ ಮೊರೆ ಹೋಗಿರುವುದು ತೀವ್ರ ಕುತೂಹಲ ಕೆರಳಿಸಿದೆ. ಡಿಕೆಶಿಯ ದಿಢೀರ್ ಬದಲಾವಣೆ ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೆ ಎಡೆ ಮಾಡಿಕೊಟ್ಟಿದೆ.
ಸಚಿವರು, ಶಾಸಕರಿಗೆ ಗಾಳ
ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಕಳೆದ ಜೂನ್ 31ರಿಂದ ಜುಲೈ 2 ರವರೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ್ದ ಪ್ರತ್ಯೇಕ ಸಭೆಯಲ್ಲಿ ಡಿಕೆಶಿ ಪರ ಶಾಸಕರ ಬಲ ಇಲ್ಲದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಈಗ ರಾಜಕೀಯ ತಂತ್ರ, ಮಾತಿನ ವರಸೆ ಬದಲಾಯಿಸಿಕೊಂಡಿದ್ದಾರೆ.
ಶಾಸಕರು ಹಾಗೂ ಸಚಿವರ ಸಮಸ್ಯೆ ಆಲಿಸುವ ನೆಪದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ಶಾಸಕರಿಗೆ ಖುದ್ದು ದೂರವಾಣಿ ಕರೆ ಮಾತನಾಡುತ್ತಿದ್ದು, ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನ್ನೊಂದಿಗೆ ಹಂಚಿಕೊಳ್ಳಿ, ಬಗೆಹರಿಸುತ್ತೇನೆ ಎಂದು ಭರವಸೆ ನೀಡುತ್ತಿರುವುದು ಹಲವರ ಹುಬ್ಬೇರಿಸಿದೆ. ಇದು ಸಿಎಂ ಉತ್ತರಾಧಿಕಾರಿ ತಾನೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವೂ ಆಗಿದೆ ಎನ್ನಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಶಾಸಕರು ಹಾಗೂ ಸಚಿವರನ್ನು ತಮ್ಮ ನಿವಾಸ ಇಲ್ಲವೇ ಪ್ರತ್ಯೇಕ ಸ್ಥಳಗಳಲ್ಲಿ ಖುದ್ದು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪ್ತರ ಮೂಲಕ ಸಿಎಂ ಸ್ಥಾನದ ಚರ್ಚೆಗೆ ಜೀವ
ಸಿಎಂ ಸ್ಥಾನದ ವಿಚಾರದಲ್ಲಿ ಬಹಿರಂಗ ಗುದ್ದಾಟಕ್ಕೆ ಇಳಿಯದೇ ಬೆಂಬಲಿಗರ ಮೂಲಕವೇ ವಿವಾದವನ್ನು ಜೀವಂತವಾಗಿ ಇರುವಂತೆ ಡಿ.ಕೆ. ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಆಪ್ತರಾದ ಎಚ್.ಸಿ.ಬಾಲಕೃಷ್ಣ, ಡಾ.ರಂಗನಾಥ್, ಇಕ್ಬಾಲ್ ಹುಸೇನ್, ಗಾಣಿಗ ರವಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಹಲವರ ಮೂಲಕ ಸಿಎಂ ಸ್ಥಾನಕ್ಕೆ ಒತ್ತಾಯಿಸುವ ಮಾತುಗಳನ್ನು ಆಡಿಸುತ್ತಿದ್ದಾರೆ.
ಸಿಎಂ ಆಪ್ತ ವಲಯದ ನಾಯಕರು ಮೇಲಿಂದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಪ್ರಸ್ತಾಪ ಮುಂದಿಡುತ್ತಿದ್ದರೂ ಅತಿರೇಕದ, ಹುಂಬತನ ಹೇಳಿಕೆ ನೀಡದೇ ಹೈಕಮಾಂಡ್ ನತ್ತ ಬೊಟ್ಟು ಮಾಡುತ್ತಾ ಜಾಣ್ಮೆ ನಡೆ ಇಡುತ್ತಿದ್ದಾರೆ. ಈ ಮಧ್ಯೆ, ಇಲಾಖೆ ಕೆಲಸ, ಜಲ ವಿವಾದಗಳ ನೆಪದಲ್ಲಿ ಪದೇ ಪದೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿರುವುದು ಚರ್ಚೆಗಳಿಗೆ ಕಾರಣವಾಗಿದೆ.
ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಸ್ಥಾನದ ಬಗ್ಗೆ ಬಹಿರಂಗ ಹೇಳಿಕೆ ನೀಡುವವರಿಗೆ ಬೇರೆ ಬೇರೆ ರೂಪದಲ್ಲಿ ಹೈಕಮಾಂಡ್ ಮೂಲಕವೇ ಛಡಿಯೇಟು ಕೊಡಿಸುತ್ತಿದ್ದಾರೆ. ಕೆ.ಎನ್. ರಾಜಣ್ಣ ಪ್ರಕರಣವೂ ಇದರಲ್ಲಿ ಒಂದು. ತಮ್ಮ ಪ್ರತಿ ಹೇಳಿಕೆಯನ್ನು ವಿವಾದವಾಗಿ ಬಿಂಬಿಸುವ ಮಾಧ್ಯಮಗಳಿಗೂ ಖಡಕ್ ವಾರ್ನಿಂಗ್ ನೀಡುತ್ತಿದ್ದಾರೆ. ಒಮ್ಮೊಮ್ಮೆ ಅಂತರ ಕಾಯ್ದುಕೊಳ್ಳುವ ಮೂಲಕ ಆಂತರಿಕ ವಿಚಾರಗಳು ಸೋರಿಕೆಯಾಗದಂತೆ ನಿಗಾ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ವಪಕ್ಷಿಯ ನಾಯಕರು ಹಾಗೂ ವಿರೋಧ ಪಕ್ಷಗಳು ತೀರಾ ವೈಯಕ್ತಿಕವಾಗಿ ಗುರಿ ಮಾಡಿ ಮಾತನಾಡಿದ ಸಂದರ್ಭದಲ್ಲೂ ರಾಮಾಯಣ ಹಾಗೂ ಮಹಾಭಾರತದ ಕಥಾ ಪ್ರಸಂಗ ವಿವರಿಸಿ ತಿರುಗೇಟು ನೀಡುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಪಕ್ಷ ಸಂಘಟನೆ ಮೂಲಕವೂ ವಿಶ್ವಾಸ ವೃದ್ಧಿ
ಪಕ್ಷದ ಕಾರ್ಯಕರ್ತರಿಗೆ ಸಂಘಟನಾತ್ಮಕವಾಗಿ ಉನ್ನತ ಹುದ್ದೆ ನೀಡುವ ಮೂಲಕ ಆಂತರಿಕವಾಗಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದಾರೆ. 2023 ರ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಸಾಮರ್ಥ್ಯದಿಂದಲೇ ಸರ್ಕಾರ ರಚನೆಯಾಗಿದೆ ಎಂಬುದು ಹೈಕಮಾಂಡ್ ತಿಳಿದಿರುವ ಸತ್ಯ. ಆ ಸತ್ಯವನ್ನು ಕಾರ್ಯಕರ್ತರಿಗೂ ತಿಳಿಸುವ ಪ್ರಯತ್ನವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಂಡೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಪಕ್ಷದ ಸಂಘಟನೆ ಬಲಿಷ್ಠಗೊಳಿಸುತ್ತಿರುವ ಕಾರಣಕ್ಕಾಗಿಯೇ ಹೈಕಮಾಂಡ್ ಕೂಡ ಕೆಪಿಸಿಸಿ ಸ್ಥಾನದ ಚರ್ಚೆಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ.
2028 ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟಿಸುವ ಕೆಲಸವನ್ನೂ ಈಗಾಗಲೇ ಡಿಕೆಶಿ ಆರಂಭಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ನ.20 ರೊಳಗೆ ಸ್ವಂತ ಕಚೇರಿ ಹೊಂದಲು ಗಡುವು ನೀಡಿದ್ದಾರೆ. ನ.20 ರಂದು ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ನೀಡಿರುವುದರಿಂದ ತ್ವರಿತವಾಗಿ ಪ್ರಕ್ರಿಯೆ ಮುಗಿಸಲು ಸೂಚನೆ ನೀಡಿದ್ದಾರೆ. ಆ ಮೂಲಕ ಹೈಕಮಾಂಡ್ ತಮ್ಮ ಸಾಮರ್ಥ್ಯ ಹಾಗೂ ಪ್ರಭಾವ ಮನವರಿಕೆ ಮಾಡಿಕೊಡಲು ಡಿಕೆಶಿ ಯೋಜಿಸಿದ್ದಾರೆ ಎನ್ನಲಾಗಿದೆ.
ಜಾತಿ ನೆಲೆಗಟ್ಟಿನಲ್ಲೂ ಸಂಘಟನೆ
ಸಿಎಂ ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗಗಳ ಬಲವಿದೆ. ಹಾಗಾಗಿ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿ ಆಗಿದ್ದಾರೆ. ಇದೀಗ ಡಿ.ಕೆ. ಶಿವಕುಮಾರ್ ಅವರು ಅದೇ ಮಾರ್ಗ ಅನುಸರಿಸಿದ್ದು, ರಾಜ್ಯದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯವನ್ನು ಒಟ್ಟಾಗಿ ಕರೆದೊಯ್ಯಲು ಕಾರ್ಯತಂತ್ರ ಹೆಣೆದಿದ್ದಾರೆ.
ಪಂಚಮ ಸಾಲಿ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ತಮ್ಮ ಆಪ್ತರಾದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಜಯಾನಂದ ಕಾಶಪ್ಪನವರ್ ಹೆಗಲಿಗೆ ಹಾಕಿದ್ದಾರೆ. ಎರಡೂ ಸಮುದಾಯಗಳು ಕ್ರಮವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿವೆ. ರೈತಾಪಿ ವರ್ಗವನ್ನು ಒಗ್ಗೂಡಿಸಿ, ಸಿಎಂ ಗಾದಿಗೆ ಜನಬೆಂಬಲ ಪಡೆಯುವುದು ಡಿಕೆಶಿ ತಂತ್ರ ಎಂದು ವಿಶ್ಲೇಷಿಸಲಾಗಿದೆ. ಜತೆಗೆ ದಲಿತ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಓಲೈಕೆಗೂ ಇಳಿದಿದ್ದಾರೆ.
ಮೃದು ಹಿಂದುತ್ವ ಧೋರಣೆ
ಹಿಂದುತ್ವದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಡ್ಡಿ ಮುರಿದಂತೆ ವಿರೋಧ ವ್ಯಕ್ತಪಡಿಸಿದರೆ, ಡಿ.ಕೆ. ಶಿವಕುಮಾರ್ ಅವರು ಮೃದು ಹಿಂದುತ್ವದ ಧೋರಣೆ ಅನುಸರಿಸುತ್ತಿದ್ದಾರೆ. ಹಿಂದೂ ಸಮುದಾಯಗಳನ್ನೂ ಪಕ್ಷದೊಟ್ಟಿಗೆ ಕರೆದೊಯ್ಯುವುದು ಡಿಕೆಶಿ ತಂತ್ರಗಾರಿಕೆ. ಹಾಗಾಗಿಯೇ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಯೋಜನೆಗೆ ವಿರೋಧ ವ್ಯಕ್ತವಾದರೂ ತಲೆ ಕೆಡಿಸಿಕೊಳ್ಳಲಿಲ್ಲ. ಮಾತೃಭೂಮೇ ಸದಾ ವತ್ಸಲೇ ಎಂದು ಹೇಳುವ ಮೂಲಕ ಹಿಂದೂ ಧರ್ಮಿಯರ ಮೆಚ್ಚುಗೆಗೂ ಪಾತ್ರರಾಗಿದ್ದರು. ಆದರೆ, ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಪಕ್ಷದಲ್ಲೇ ಅಪಸ್ವರ ಕೇಳಿ ಬಂದ ಬಳಿಕ ಕ್ಷಮೆ ಕೇಳಿದ್ದರು.
ಮೈಸೂರು ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲೂ ಆತುರದಲ್ಲಿ ಯಾವುದೇ ಹೇಳಿಕೆ ನೀಡಿರಲಿಲ್ಲ. ದಸರಾ ಉದ್ಘಾಟನೆಗೆ ಗೈರಾಗುವ ಮೂಲಕ ಮೃದು ಹಿಂದುತ್ವದ ಸಂದೇಶ ಸಾರಿದ್ದು ಡಿಕೆಶಿ ಚಾಣಾಕ್ಷ ನಡೆ ಎಂದೇ ಹೇಳಲಾಗುತ್ತಿದೆ.
ಪ್ರತಿ ಹಂತದಲ್ಲೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನೇರಾನೇರ ಸ್ಪರ್ಧೆಗೆ ಇಳಿಯದೇ ಕಾರ್ಯಕರ್ತರು, ಮುಖಂಡರಲ್ಲಿ ವಿಶ್ವಾಸ ವೃದ್ಧಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಾನೇ ಐದು ವರ್ಷ ಸಿಎಂ ಎಂದು ಹೇಳಿಕೊಂಡರೂ ಮರು ಮಾತನಾಡದೇ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದ್ದರು.
ಸಿದ್ಧರಾಮಯ್ಯ ವಿರುದ್ಧ ಸೌಮ್ಯ ತಂತ್ರ?
ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ಸರ್ಕಾರದ ಪ್ರಮುಖ ಧುರೀಣರು. ಇಬ್ಬರ ನಡುವೆ ಸ್ಪಷ್ಟ ಸಂಘರ್ಷವಿಲ್ಲದಿದ್ದರೂ, ಅಂತರಂಗದಲ್ಲಿ ನಾಯಕತ್ವಕ್ಕಾಗಿ ಕಾದಾಟ ನಡೆಯುತ್ತಿದೆ. ಆದಾಗ್ಯೂ ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಯಾವುದೇ ಹೋರಾಟ ಅಥವಾ ಟೀಕೆ ಮಾಡುತ್ತಿಲ್ಲ. ಬದಲಿಗೆ ಶಾಂತಿ ಮಾರ್ಗದಲ್ಲೇ ತಮ್ಮ ಸಿಎಂ ಕನಸು ನನಸಾಗಿಸಿಕೊಳ್ಳುವ ಮುಂದಾಗಿದ್ದಾರೆ. ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಚಾರಗಳಲ್ಲೂ ಹೆಚ್ಚು ಜಿದ್ದಿಗೆ ಬೀಳದೇ ಹೈಕಮಾಂಡ್ ವಿಶ್ವಾಸ ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪದೇ ಪದೇ ಹೈಕಮಾಂಡ್ ಭೇಟಿ
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಪದೇ ಪದೇ ಹೈಕಮಾಂಡ್ ಭೇಟಿಯಾಗಿ ಚರ್ಚಿಸುತ್ತಿರುವುದು ನವೆಂಬರ್ ಕ್ರಾಂತಿಯ ಊಹಾಪೋಹಗಳಿಗೆ ಕಾರಣವಾಗಿದೆ. ನ.20ಕ್ಕೆ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಜತೆಗೂ ನಿಷ್ಠೆಯಿಂದ ವರ್ತಿಸುತ್ತಿದ್ದಾರೆ. ಡಿಕೆಶಿ ಅವರ ಈ ತಂತ್ರಗಳು ಸ್ಪಷ್ಟವಾಗಿಲ್ಲದಿದ್ದರೂ ಅವರ ನಡವಳಿಕೆಗಳು ಮತ್ತು ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಕುರಿತು ಚರ್ಚಿಸಲು 2025ರ ಮೇ ತಿಂಗಳಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ದೆಹಲಿಗೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷರ ಹುದ್ದೆ ಕುರಿತು ಚರ್ಚೆ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿ ಮಾಡಿದ್ದರು. ಆಗ ಹೈಕಮಾಂಡ್ ಕೆಪಿಸಿಸಿ ಬದಲಾವಣೆ ಮಾತಿಗೆ ಪೂರ್ಣ ವಿರಾಮ ಹಾಕಿತ್ತು.
ಜೂನ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ನಾಯಕರೊಂದಿಗೆ ಸರ್ಕಾರದ ಸಾಧನೆ, ಸಂಪುಟ ಪುನಾರಚನೆ, ಜಾತಿ ಗಣತಿ ವರದಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಸಂಪುಟ ಪುನರಾಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿತ್ತು. ಆದರೆ, ಬಿಹಾರ ಚುನಾವಣೆ ಮುಗಿದ ನಂತರ ಪುನರಾಚನೆಗೆ ಒಲವು ತೋರಿತ್ತು.