ತಿರುಪತಿ ಯಾತ್ರೆ ಮುಗಿಸಿ ಬರುತ್ತಿದ್ದವರ ಕಾರು ಅಪಘಾತ, ಬೆಂಗಳೂರಿನ ಐವರ ದುರ್ಮರಣ
ಎರ್ಟಿಗಾ ಕಾರಿನಲ್ಲಿ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.;
ಸಾಂದರ್ಭಿಕ ಚಿತ್ರ
ಆಂಧ್ರಪ್ರದೇಶದ ಕಾಣಿಪಾಕಂ ಸಮೀಪ ಸೋಮವಾರ (ಏಪ್ರಿಲ್ 28) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿರುಪತಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಎರ್ಟಿಗಾ ಕಾರು ಮುಂದಿನಿಂದ ಸಾಗುತ್ತಿದ್ದ ಕ್ಯಾಂಟರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಾಯಗೊಂಡ ಇಬ್ಬರಿಗೆ ಸ್ಥಳೀಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಿರುಪತಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಒಟ್ಟು ಏಳು ಜನರಿದ್ದರು. ಕಾಣಿಪಾಕಂ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪ್ಪಳಿಸಿದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಬ್ಬ ಮಗು ಸೇರಿದೆ.
ಪೊಲೀಸರ ಪ್ರಕಾರ, ಮೃತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಅವರು ತಿರುಪತಿಯ ದರ್ಶನಕ್ಕೆ ತೆರಳಿ ವಾಪಸ್ ಬರುತ್ತಿದ್ದರು. ಮೃತರ ಹೆಸರು ಮತ್ತು ವಿವರಗಳನ್ನು ಇನ್ನೂ ಸಂಪೂರ್ಣವಾಗಿ ದೃಢಪಡಿಸಲಾಗಿಲ್ಲ, ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ, ಇವರು ಒಂದೇ ಕುಟುಂಬ ಅಥವಾ ಸಂಬಂಧಿಕರ ಗುಂಪಾಗಿರಬಹುದು.