ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದು ರಾಜ್ಯಪಾಲರದ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.;

Update: 2025-01-26 10:36 GMT
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಸಂವಿಧಾನದ ಆಶಯಗಳನ್ನು ನೆಲೆಗೊಳಿಸಲು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿವೆ. ಕರ್ನಾಟಕ ಸರ್ಕಾರವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಒಕ್ಕೂಟ ಸಿದ್ಧಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೊಗಳಿದ್ದಾರೆ. ಈ ಮೂಲಕ ಅವರು ಗಣರಾಜ್ಯೋತ್ಸವ ಸಭೆಯಲ್ಲಿ ಸರ್ಕಾರದ ಯೋಜನೆಗಳನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.

76 ನೇ ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಯಡಿ ಆರ್ಥಿಕ ನೆರವು

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳಂತೆ 2023 ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.62 ಕೋಟಿ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,409 ಕೋಟಿ ರೂ.ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 9,051 ಕೋಟಿ ರೂ. ವಿನಿಯೋಗಿಸಲಾಗಿದೆ. ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು ಈವರೆಗೆ 1,24,176 ಅರ್ಹರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.

ಅನ್ನಭಾಗ್ಯ ಯೋಜನೆಯಡಿ 4,48,12,382 ಫಲಾನುಭವಿಗಳಿಗೆ 9,775 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ಆದಾಯ ಸಂಗ್ರಹದಲ್ಲಿ ಪ್ರಗತಿ

ರಾಜ್ಯದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಿರುವ ಆದಾಯ ಸಂಗ್ರಹದಲ್ಲಿ ಶೇ.13 ರಷ್ಟು ಪ್ರಗತಿ ಸಾಧಿಸಿದೆ‌. ಜಿಎಸ್‌ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು.

ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು,ಒಂದೂವರೆ ವರ್ಷದ ಅವಧಿಯಲ್ಲಿ13 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹಾಸನದಲ್ಲಿ 142 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಕಲಬುರ್ಗಿಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆ, ಕೆಕೆಆರ್‌ಡಿ‌ಬಿಯ 304 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಮೆಟ್ರೊ ಯೋಜನೆಯಲ್ಲಿ ಪ್ರಗತಿ

ಬೆಂಗಳೂರು ಮೆಟ್ರೊ ರೈಲು ಯೋಜನೆಯ ಹಂತ 2ಎ ದಲ್ಲಿ ಸಿಲ್ಕ್ ಬೋರ್ಡಿನಿಂದ ಕೃಷ್ಣರಾಜಪುರದವರೆಗೆ, ಹಂತ 2 ಬಿ ಯಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58 ಕಿ.ಮೀ.ಉದ್ದದ ಕಾಮಗಾರಿಯನ್ನು 14,788 ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ‌. ಹಂತ 3 ರಲ್ಲಿ 76 ಕಿ.ಮೀ.ಉದ್ದದ ಕಾಮಗಾರಿಯನ್ನು 15,611 ಕೋಟಿ ರೂ.ವೆಚ್ಚದಲ್ಲಿಕೈಗೊಳ್ಳಲಾಗಿದೆ ಎಂದು ವಿವರಿಸಿದರು.

2024-25 ನೇ ಸಾಲಿನಲ್ಲಿ ಸುಮಾರು ರೂ. 16,700 ಕೋಟಿಗೂ ಅಧಿಕ ಮೊತ್ತದ ಅಲ್ಪಾವಧಿ ಬೆಳೆ ಹಾಗೂ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲಗಳನ್ನು ವಿತರಿಸಲಾಗಿದೆ. ಹಾಲು ಉತ್ಪಾದಕರ ಪ್ರೋತ್ಸಾಹ ಯೋಜನೆಯಡಿ ರಾಜ್ಯದ ಸುಮಾರು 9 ಲಕ್ಷ ಹಾಲು ಉತ್ಪಾದಕರಿಗೆ 1124 ಕೋಟಿ ರೂ. ಪ್ರೋತ್ಸಾಹ ಧನ ವರ್ಗಾವಣೆ ಮಾಡಲಾಗಿದೆ ಎಂದರು‌.

ಸಾಂಸ್ಕೃತಿಕ ಕಾರ್ಯಕ್ರಮಗಳು

ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಗೋರ್ಖಾ ರೈಫಲ್ಸ್‌ನ ಖುಕ್ರಿ ನೃತ್ಯ, ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ರ ನೃತ್ಯ, ಹೇರೋಹಳ್ಳಿ ಸಂಯುಕ್ತ ಪ.ಪೂ‌‌.ಕಾಲೇಜಿನ 600 ಮಕ್ಕಳಿಂದ ಅರಿವೇ ಅಂಬೇಡ್ಕರ್ ನೃತ್ಯರೂಪಕ, ಮೈಸೂರು ಕೆಎಸ್‌ಆರ್‌ಪಿ ಮೌಂಟೆಡ್ ಪೊಲೀಸ್ ತಂಡದ ಟೆಂಟ್ ಪೆಗ್ಗಿಂಗ್, ಪೊಲೀಸ್ ಗರುಡ ಪಡೆಯಿಂದ ಭಯೋತ್ಪಾದಕರಿಂದ ಹೈಜಾಕ್ ಆದ ಬಸ್ ಪ್ರಯಾಣಿಕರ ರಕ್ಷಣೆ ಸೇರಿದಂತೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಅಂಶಗಳನ್ನು ಸಾರಿದವು. ವಿವಿಧ ತುಕಡಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. 

Tags:    

Similar News