ಶೂಟಿಂಗ್‌ ವೇಳೆ ಅವಘಡ: ಲೈಟ್‌ ಬಾಯ್‌ ಸಾವು, ನಿರ್ದೇಶಕ ಯೋಗರಾಜ್‌ ಭಟ್ ವಿರುದ್ಧ ಎಫ್‌ಐಆರ್

ಯೋಗರಾಜ್ ಭಟ್ ಅವರ 'ಮನದ ಕಡಲು' ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಮ್ಯಾನ್‌ ಒಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಚಿತ್ರತಂಡದ ಹಲವರ ಮೇಲೆ ಎಫ್‌ಐಆರ್ ದಾಖಲಾಗಿದೆ.

Update: 2024-09-06 07:25 GMT
ನಿರ್ದೇಶಕ ಯೋಗ್‌ರಾಜ್‌ ಭಟ್‌ ಮೇಲೆ ಎಫ್‌ ಐ ಆರ್‌ ದಾಖಲಾಗಿದೆ.
Click the Play button to listen to article

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಯೋಗರಾಜ್ ಭಟ್ ಅವರ 'ಮನದ ಕಡಲು' ಸಿನಿಮಾ ಚಿತ್ರೀಕರಣದ ವೇಳೆ ಸಿನಿಮಾಗೆ ಲೈಟ್ ಮ್ಯಾನ್‌ ಕೆಲಸ ಮಾಡುತ್ತಿದ್ದವರೊಬ್ಬರು 30 ಅಡಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಚಿತ್ರತಂಡದ ಹಲವರ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ʼಮನದ ಕಡಲುʼ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ನೆಲಮಂಗಲದ ಬಳಿ ಇರುವ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್‌ನಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿತ್ತು. ಮಂಗಳವಾರ ಸಂಜೆ ಲೈಟ್ ಮ್ಯಾನ್‌ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್, 30 ಅಡಿ ಎತ್ತರದಲ್ಲಿ ಕಟ್ಟಿದ್ದ ಲೈಟ್ ಬಿಚ್ಚುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಮೋಹನ್‌ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು, ತಕ್ಷಣವೇ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ʼಮನದ ಕಡಲುʼ ಸಿನಿಮಾದ ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೃಷ್ಣಪ್ಪ, ನಿರ್ದೇಶಕ ಯೋಗರಾಜ್ ಭಟ್, ಮ್ಯಾನೇಜರ್ ಸುರೇಶ್ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿದೆ.

Tags:    

Similar News