ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗೆ ಎಳ್ಳು ನೀರು ಬಿಟ್ಟ ರಾಜ್ಯ ಸರ್ಕಾರ
ಹಿಂದುಳಿದ ತಾಲ್ಲೂಕಿನಲ್ಲಿ ಮೈಕ್ರೋಗ್ರಿಡ್ ವ್ಯವಸ್ಥೆಯ ಸೌರ ಘಟಕ ಸ್ಥಾಪನೆಯ ಯೋಜನೆಯನ್ನು ಹಣಕಾಸಿನ ಕೊರತೆಯ ಕಾರಣಕ್ಕೆ ನಿಲ್ಲಿಸಿಲು ಸರ್ಕಾರ ತಿರ್ಮಾನಿಸಿದೆ.;
ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿರುವ ಹಿನ್ನೆಲೆ ಯಾವುದೇ ಅನುದಾನವಿಲ್ಲದೇ ಹೊಸ ಯೋಜನೆಗಳಿಗೆ ಎಳ್ಳು ನೀರು ಬಿಡುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.
ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಆಯವ್ಯಯದಲ್ಲಿ ಘೋಷಣೆ ಮಾಡಿದ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿದೆ. ಹಿಂದುಳಿದ ತಾಲ್ಲೂಕಿನಲ್ಲಿ ಮೈಕ್ರೋಗ್ರಿಡ್ ವ್ಯವಸ್ಥೆಯ ಸೌರ ಘಟಕ ಸ್ಥಾಪನೆಯ ಯೋಜನೆಯನ್ನು ನಿಲ್ಲಿಸಿಲು ಸರ್ಕಾರ ತಿರ್ಮಾನಿಸಿದೆ. ಹಣಕಾಸಿನ ಕೊರತೆಯ ಕಾರಣಕ್ಕೆ ಯೋಜನೆ ಕೈಬಿಡಲು ಸರ್ಕಾರದಿಂದ ತಿರ್ಮಾನ ಮಾಡಲಾಗಿದೆ. ಈ ಮೂಲಕ ಬಜೆಟ್ ನಲ್ಲಿ ಘೋಷಿಸಿ ಮೆಚ್ಚುಗೆ ಪಡೆದಿದ್ದ ಯೋಜನೆಗಳು ಇದೀಗ ಮೂಲೆಗುಂಪು ಆಗಿದಂತಾಗಿದೆ.
ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದ ಯೋಜನೆ ಅನುಷ್ಠಾನ ಮಾಡಲು ಹಿಂದೇಟು ಹಾಕಲಾಗಿದೆ. ಹಿಂದುಳಿದ ತಾಲೂಕಿನಲ್ಲಿ ಮೈಕ್ರೋಗ್ರಿಡ್ ವ್ಯವಸ್ಥೆಯ ಸೌರ ಘಟಕ ಸ್ಥಾಪನೆಯ ಯೋಜನೆಯನ್ನು ಸಿದ್ದರಾಮಯ್ಯ ಪ್ರಕಟಿಸಿದ್ದರು. ಕಳೆದ ಬಜೆಟ್ ನಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಮೈಕ್ರೋಗ್ರಿಡ್ ವ್ಯವಸ್ಥೆಯ ಸೌರ ಘಟಕ ಸ್ಥಾಪನೆ ಮಾಡಲು ಸಿದ್ದರಾಮಯ್ಯ ಅವರು ಘೋಷಣೆಯನ್ನು ಮಾಡಿದ್ದು ಅದನ್ನು ಈಗ ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ.
ಆರ್ಥಿಕ ಇಲಾಖೆಯಿಂದ ಪ್ರಸ್ತಾವನೆ ಕೈಬಿಡಲು ಸಹಮತ ಸಿಕ್ಕಿರುವುದರಿಂದ ಯೋಜನೆಯೇ ಬೇಡ ಎಂಬ ತಿರ್ಮಾನಕ್ಕೆ ಬರಲಾಗಿದೆ. ಕ್ರೆಡೆಲ್ ನಿಂದ ಯೋಜನೆ ಕೈಬಿಡಲು ಕೋರಿಕೆ ಬಂದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಮಾಡದಿರಲು ಇಂಧನ ಇಲಾಖೆ ತೀರ್ಮಾನಿಸಿದೆ.
ಏನಿದು ಮೈಕ್ರೋಗ್ರಿಡ್ ಸೌರ ಘಟಕ?
ಹಿಂದುಳಿದ ಗ್ರಾಮಗಳಲ್ಲಿ ಮೈಕ್ರೋಗ್ರಿಡ್ ಮೂಲಕ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕ ಸ್ಥಾಪನೆಯನ್ನು ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಣೆ ಮಾಡಿತ್ತು.
ಸೌರ ಘಟಕ ಸ್ಥಾಪನೆ ಮೂಲಕ ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡುವ ಪ್ರಸ್ತಾಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿ ಎಸ್ಕಾಂ ವ್ಯಾಪ್ತಿಯ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲು ಉದ್ದೇಶಿಸಿದ್ದರು.
ಮೈಕ್ರೋಗ್ರಿಡ್ ವ್ಯವಸ್ಥೆಯ ಬ್ಯಾಟರಿ ಶೇಖರಣೆಯನ್ನು ಹೊಂದಿದ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕವಾಗಿದ್ದು, ಪ್ರತಿ ಘಟಕವನ್ನು 7.94 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆಯಾಗಿದೆ.
5 ಹಿಂದುಳಿದ ಗ್ರಾಮಗಳಲ್ಲಿ ಯೋಜನೆ ಅರಂಭಿಸಲು ತೀರ್ಮಾನಿಸಿ ಬಜೆಟ್ ನಲ್ಲಿ ಒಟ್ಟು ರೂ. 39.7 ಕೋಟಿ ರೂ ಅನುದಾನ ಮೀಸಲಿರಿಸಿದ್ದರು.
25 ವರ್ಷಗಳ ಕಾಲ ಈ ಘಟಕದಿಂದ ವಿದ್ಯುತ್ ಖರೀದಿ ಮಾಡುವ ಯೋಜನೆ ರೂಪಿಸಲಾಗಿತ್ತು.
ಯಾವ ಜಿಲ್ಲೆಯಲ್ಲಿ ಉದ್ದೇಶಿತ ಯೋಜನೆಗೆ ನಿರ್ಧರಿಸಲಾಗಿತ್ತು
ತುಮಕೂರು ಜಿಲ್ಲೆ - ಕಾಟೇನಹಳ್ಳಿ.
ಕೊಡಗು ಜಿಲ್ಲೆ - ಅರ್ಜಿ.
ಚಿಕ್ಕಮಗಳೂರು - ಲಿಂಗಾಪುರ.
ಉತ್ತರಕನ್ನಡ - ಜಗಳಪೇಟೆ.
ಕಲಬುರ್ಗಿ - ಅಂತಾವರಂ.
ಯೋಜನೆ ಕೈಬಿಡಲು ಕ್ರೆಡಲ್ ನಿಂದ ಪ್ರಸ್ತಾಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದ ಯೋಜನೆಯನ್ನು ಕೈಬಿಡಲು ಕರ್ನಾಟಕ ನವೀಕರಿಸಿದ ಇಂಧನಗಳ ಅಭಿವೃದ್ಧಿ ನಿಗಮದ( ಕ್ರೆಡೆಲ್) ವ್ಯವಸ್ಥಾಪಕರಿಂದ ಕೋರಿಕೆ ಸಲ್ಲಿಸಲಾಗಿತ್ತು. ಕೆಲ ಕಾರಣಗಳನ್ನು ಮುಂದಿಟ್ಟು ಕ್ರೆಡೆಲ್ ವ್ಯವಸ್ಥಾಪಕರು ಕೋರಿಕೆ ಸಲ್ಲಿಸಿದ್ದರು.
ಯೋಜನೆಯ ಸಾರ್ಮರ್ಥ್ಯವು ಸಣ್ಣ ಗಾತ್ರವಾಗಿರುವುದರಿಂದ ಯೋಜನೆ ಅನುಷ್ಠಾನಕ್ಕೆ ವೆಚ್ಚ ಹೆಚ್ಚಾಗಲಿದೆ.
ಪ್ರತಿ ಯೂನಿಟ್ ವಿದ್ಯುತ್ ಖರೀದಿಯೂ ದುಬಾರಿಯಾಗಲಿದೆ.25 ವರ್ಷಗಳ ಕಾಲ ವಿದ್ಯುತ್ ಖರೀದಿ ಎಸ್ಕಾಂಗಳಿಗೆ ಹೊರೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು.
ಕ್ರೆಡೆಲ್ ಕೋರಿಕೆ ಪರಿಶೀಲಿಸಿದ ಆರ್ಥಿಕ ಇಲಾಖೆ..
ಕ್ರೆಡೆಲ್ ನೀಡಿರುವ ವಿವರಗಳನ್ನು ಪರಿಶೀಲನೆ ನಡೆಸಿದ ನಂತರ ಈ ಯೋಜನೆ ಕೈಬಿಡಲು ಆರ್ಥಿಕ ಇಲಾಖೆಯಿಂದ ಸಹಮತಿ ನೀಡಲಾಗಿದೆ. ನಂತರ ಆರ್ಥಿಕ ಇಲಾಖೆಯ ಅನುಮತಿ ಪಡೆದು ಇಂಧನ ಇಲಾಖೆ ಆದೇಶ ಹೊರಡಿಸಿದೆ.
ಸೌರಘಟಕ ಸ್ಥಾಪನೆಯಿಂದ ಗ್ರಾಮಗಳನ್ನು ಸ್ವಾವಲಂಬಿ ಗ್ರಾಮ ಮಾಡುವ ಘೋಷಣೆ ಕೈಬಿಡುವ ಅಂತಿಮ ತೀರ್ಮಾನ ಮಾಡಲಾಗಿದೆ.
ರಾಜ್ಯ ಸರ್ಕಾರ ತಮ್ಮ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ ಅನುದಾನದ ಕೊರತೆಯಿಂದ ಹಲವು ಹೊಸ ಯೋಜನೆಗಳನ್ನು ಈವರೆಗೂ ಆರಂಭಿಸದಿರುವುದು ಕಂಡುಬಂದಿದೆ. ಈ ಮಧ್ಯೆ ಹಣಕಾಸಿನ ಕೊರತೆಯಿಂದಲೇ ಬಜೆಟ್ ಘೋಷಣೆಯನ್ನು ಕೈಬಿಟ್ಟಿರುವುದು ಟೀಕೆಗೆ ಗುರಿಯಾಗಿದೆ.