ಬಿಪಿಎಲ್‌ ಕಾರ್ಡ್‌, ಗೃಹಲಕ್ಷ್ಮಿ ಸ್ಥಗಿತ ಭೀತಿ| ಸಮೀಕ್ಷೆಗೆ ಮಾಹಿತಿ ನೀಡಲು ಹಳ್ಳಿಗರು ಮುಂದೆ, ನಗರ ಜನ ಹಿಂದೆ

ಶುಕ್ರವಾರ (ಅ.3) ಅಂತ್ಯಕ್ಕೆ ಗ್ರೇಟರ್‌ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 9,35,044 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಒಟ್ಟು ಮನೆಗಳ ಸಮೀಕ್ಷೆಯ ಪ್ರಗತಿ 90,61,880 ಕ್ಕೆ ಏರಿಕೆಯಾಗಿದೆ.

Update: 2025-10-05 04:30 GMT

ಸಾಂದರ್ಭಿಕ ಚಿತ್ರ

Click the Play button to listen to article

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ, ಆದರೆ ಅಷ್ಟೇ ವಿವಾದಾತ್ಮಕವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯು (ಜಾತಿ ಗಣತಿ) ಗೊಂದಲ, ಆತಂಕ ಮತ್ತು ರಾಜಕೀಯ ಕೆಸರೆರಚಾಟದ ನಡುವೆಯೂ ಸದ್ದಿಲ್ಲದೆ ಮುನ್ನಡೆಯುತ್ತಿದೆ. ಗ್ರಾಮೀಣ ಭಾಗದ ಜನರು ಈ ಐತಿಹಾಸಿಕ ಸಮೀಕ್ಷೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮಾಹಿತಿ ನೀಡುತ್ತಿದ್ದರೆ, 'ಸಿಲಿಕಾನ್ ಸಿಟಿ' ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಜನತೆ ಮಾತ್ರ ಗಣತಿದಾರರನ್ನು ಕಂಡರೆ ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದು, ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಸೆಪ್ಟೆಂಬರ್ 22ರಂದು ಆರಂಭವಾದ ಈ ಬೃಹತ್ ಸಮೀಕ್ಷೆಯು, ದಸರಾ ರಜೆ, ಸಾಲು ಸಾಲು ಹಬ್ಬಗಳು ಮತ್ತು ತಾಂತ್ರಿಕ ಸಮಸ್ಯೆಗಳ ನಡುವೆಯೂ, ಶುಕ್ರವಾರದ (ಅ.3) ಅಂತ್ಯಕ್ಕೆ ಶೇ.63.03ರಷ್ಟು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಗ್ರೇಟರ್ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಇದುವರೆಗೆ 90.6 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಒಟ್ಟು 3.42 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಮಾಹಿತಿ ನೀಡಿದೆ. ನವೆಂಬರ್ 7ರೊಳಗೆ ಶೇ.100ರಷ್ಟು ಪ್ರಗತಿ ಸಾಧಿಸುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

ನಗರದಲ್ಲಿ ಹಿಂದೇಟು, ಹಳ್ಳಿಯಲ್ಲಿ ಸಹಕಾರ: ಕಾರಣವೇನು?

ನಗರ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಗಣತಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ, "ಈ ಸಮೀಕ್ಷೆಯಲ್ಲಿ ನಮ್ಮ ಕುಟುಂಬದ ಆದಾಯ, ಆಸ್ತಿ, ಬ್ಯಾಂಕ್ ಖಾತೆ, ಸಾಲದಂತಹ ಖಾಸಗಿ ವಿವರಗಳನ್ನು ನೀಡಿದರೆ, ಸರ್ಕಾರದಿಂದ ಸಿಗುತ್ತಿರುವ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ, ಬಿಪಿಎಲ್ ಕಾರ್ಡ್‌ನಂತಹ ಸೌಲಭ್ಯಗಳು ರದ್ದಾಗಬಹುದು," ಎಂಬ ಭೀತಿ ಅನೇಕರನ್ನು ಕಾಡುತ್ತಿದೆ. "ಸರ್ಕಾರ ನಮ್ಮ ಆರ್ಥಿಕ ಸ್ಥಿತಿಯನ್ನು ತಿಳಿದುಕೊಂಡು, ನಮ್ಮನ್ನು ಸೌಲಭ್ಯಗಳಿಂದ ವಂಚಿತರನ್ನಾಗಿಸಬಹುದು" ಎಂಬ ಆತಂಕ ನಗರವಾಸಿಗಳಲ್ಲಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ಅವರನ್ನು ಅನುಮಾನದಿಂದ ನೋಡುವುದು, ಪ್ರಶ್ನೆಗಳಿಗೆ ಉತ್ತರಿಸದೆ ಸಾಗಹಾಕುವುದು, "ಈಗ ಸಮಯವಿಲ್ಲ, ನಾಳೆ ಬನ್ನಿ" ಎಂದು ಹೇಳಿ ಕಳುಹಿಸುವುದು ಸಾಮಾನ್ಯ ದೃಶ್ಯವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಳ್ಳಿಗಳಲ್ಲೂ ಬಿಪಿಎಲ್ ಕಾರ್ಡ್ ರದ್ದಾಗುವ ಬಗ್ಗೆ ಗೊಂದಲಗಳು ಮತ್ತು ಆತಂಕಗಳು ಇದ್ದರೂ, ಗಣತಿದಾರರು ತಾಳ್ಮೆಯಿಂದ ಸಮೀಕ್ಷೆಯ ನೈಜ ಉದ್ದೇಶ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿ ಹೇಳಿದಾಗ, ಜನರು ಸಹಕರಿಸುತ್ತಿದ್ದಾರೆ. "ಈ ಗಣತಿಯು ನಮ್ಮ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಸರ್ಕಾರದ ಗಮನಕ್ಕೆ ತರಲು ಒಂದು ಅವಕಾಶ. ಇದರಿಂದ ನಮ್ಮ ಮಕ್ಕಳಿಗೆ ಉತ್ತಮ ಮೀಸಲಾತಿ ಮತ್ತು ಸೌಲಭ್ಯಗಳು ಸಿಗಬಹುದು" ಎಂಬ ಆಶಾಭಾವನೆ ಗ್ರಾಮೀಣರಲ್ಲಿ ಹೆಚ್ಚಾಗಿದೆ. "ಬಹುತೇಕ ಮನೆಗಳಲ್ಲಿ ಜನರು ಸರಿಯಾದ ಮಾಹಿತಿ ನೀಡಿ, ಪ್ರೀತಿಯಿಂದ ಉಪಚರಿಸಿ ಕಳುಹಿಸುತ್ತಾರೆ," ಎಂದು ಚಿಕ್ಕೋಡಿಯ ಗಣತಿದಾರರಾದ ದೇವರಾಜು ಪಿ.ಎನ್. 'ದ ಫೆಡರಲ್ ಕರ್ನಾಟಕ'ದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಾಹಿತಿ ಸೋರಿಕೆ ಆತಂಕ, ರಾಜಕೀಯ ಹೇಳಿಕೆಗಳ ಪ್ರಭಾವ

ಸಮೀಕ್ಷೆಯ ಹಿನ್ನಡೆಗೆ ಜನರ ಆತಂಕಗಳಷ್ಟೇ ಅಲ್ಲ, ರಾಜಕೀಯ ಹೇಳಿಕೆಗಳೂ ಕಾರಣವಾಗಿವೆ. "ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ," ಎಂದು ಸರ್ಕಾರವೇ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವುದು ಜನರಿಗೆ ಮಾಹಿತಿ ನೀಡದಿರಲು ಒಂದು ಪ್ರಬಲ ಕಾರಣವಾಗಿದೆ. ಜೊತೆಗೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯರಂತಹ ಪ್ರಭಾವಿ ನಾಯಕರು, "ನಾವು ಈ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ," ಎಂದು ಬಹಿರಂಗ ಹೇಳಿಕೆ ನೀಡಿರುವುದು ಕೂಡ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. "ನಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾದರೆ ಯಾರು ಹೊಣೆ? ನಾವು 2026ರ ಜನವರಿಯಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿಯಲ್ಲೇ ನಮ್ಮ ಮಾಹಿತಿ ನೀಡುತ್ತೇವೆ," ಎಂದು ಯಲಹಂಕದ ನಿವಾಸಿ ಅನಂತರಾಜು ಅವರಂತಹ ಅನೇಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಗೊಂದಲಗಳ ನಡುವೆಯೂ ಮುಂದುವರಿದ ಸಮೀಕ್ಷೆ

ಇಷ್ಟೆಲ್ಲಾ ಗೊಂದಲ, ಆತಂಕಗಳ ನಡುವೆಯೂ ಸಮೀಕ್ಷಾ ಕಾರ್ಯ ಮುಂದುವರಿದಿದೆ. ಬೆಳಗಾವಿಯ ನಿಪ್ಪಾಣಿಯಂತಹ ಗಡಿಭಾಗಗಳಲ್ಲಿ ಮರಾಠಿ ಭಾಷಿಕರಿಂದಾಗಿ ಭಾಷಾ ಸಮಸ್ಯೆ ಎದುರಾಗುತ್ತಿದೆ. ಕೆಲವು ಕಡೆಗಳಲ್ಲಿ ಬೆಸ್ಕಾಂ ಸಿಬ್ಬಂದಿ ಪಾಳುಬಿದ್ದ ಮನೆ, ಅಂಗಡಿ, ಶೌಚಾಲಯಗಳಿಗೂ ಸ್ಟಿಕ್ಕರ್ ಅಂಟಿಸಿ ಗೊಂದಲ ಸೃಷ್ಟಿಸಿದ್ದಾರೆ. ಆದರೂ, ಗಣತಿದಾರರು ಈ ಎಲ್ಲಾ ಸವಾಲುಗಳನ್ನು ಎದುರಿಸಿ, ತಮ್ಮ ಗುರಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ, ದಶಕಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕ ಸಮೀಕ್ಷೆಯು, ಸಿದ್ದರಾಮಯ್ಯ ಸರ್ಕಾರದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದಲ್ಲದೆ, ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸುವ ಶಕ್ತಿ ಹೊಂದಿದೆ. ಈ 'ಮಹಾಸಮರ'ವು ಸರ್ಕಾರದ ನಿರೀಕ್ಷೆಯಂತೆ ಪೂರ್ಣಗೊಳ್ಳುವುದೇ ಅಥವಾ ನಗರವಾಸಿಗಳ ಅಸಹಕಾರದಿಂದ ಅಪೂರ್ಣವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. 

Tags:    

Similar News