ಬಿಬಿಎಂಪಿ ಹೊರತುಪಡಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ದಾಖಲೆಗಳಿಲ್ಲದ ನಿವೇಶನಗಳಿಗೆ ’ಬಿ’ ಖಾತಾ; ಸಿಎಂ ಆದೇಶ
ಒಂದು ಬಾರಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಿ, ಎಲ್ಲ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಅನಧಿಕೃತ ಬಡಾವಣೆ ತಲೆ ಎತ್ತದಂತೆ ನೋಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ.;
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ರಾಜ್ಯದ ಉಳಿದ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ದಾಖಲೆಗಳಿಲ್ಲದ ನಿವೇಶನಗಳಿಗೆ ’ಬಿ’ ಖಾತಾ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ.
ಒಂದು ಬಾರಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಿ, ಎಲ್ಲ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಅನಧಿಕೃತ ಬಡಾವಣೆ ತಲೆ ಎತ್ತದಂತೆ ನೋಡಿಕೊಳ್ಳಿ ಎಂದು ಮುಖ್ಯಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲೇ ಈ ಆದೇಶ ಮಾಡಿದ ಮುಖ್ಯಮಂತ್ರಿ ಅವರು, ಬರುವ ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲಾ ಅನಧಿಕೃತ ನಿವೇಶನಗಳಿಗೂ ದಾಖಲೆ ನೀಡಿ ಎಂದಿದ್ದಾರೆ.
ಬೆಂಗಳೂರು ನಗರ ಹೊರತುಪಡಿಸಿ ಮೈಸೂರು, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ನಗರಪಾಲಿಕೆಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ’ಬಿ’ ಖಾತಾ ನೀಡಿ. ಮೂರು ತಿಂಗಳ ಅವಧಿಯೊಳಗೆ ಸ್ಥಳೀಯ ಸಂಸ್ಥೆಗಳ ಆಸ್ತಿಗಳಿಗೆ ದಾಖಲೆ ನೀಡಿದ ನಂತರ ಪಂಚಾಯತ್ ವ್ಯಾಪ್ತಿಯಲ್ಲಿನ ನಿವೇಶನಗಳಿಗೂ ದಾಖಲೆ ನೀಡಿ ಎಂದು ಆದೇಶಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿದ್ದು, ಇವುಗಳಲ್ಲಿ 22 ನಿವೇಶನಗಳಿಗೆ ’ಇ’ ಖಾತಾ ಪಡೆದಿದ್ದಾರೆ. ಉಳಿದ ನಿವೇಶನಗಳಿಗೆ ಯಾವುದೇ ರೀತಿಯ ದಾಖಲೆಗಳಿಲ್ಲ, ಆದ್ದರಿಂದ ಅವುಗಳನ್ನೂ ಸಕ್ರಮಗೊಳಿಸಿ, ತೆರಿಗೆ ವ್ಯಾಪ್ತಿಗೆ ತನ್ನಿ ಎಂದಿದ್ದಾರೆ.
ಇಂತಹ ನಿವೇಶನಗಳನ್ನು ಜಿಲ್ಲಾಡಳಿತವೇ ಗುರುತಿಸಿ ದಾಖಲೆ ನೀಡಬೇಕು, ಏಪ್ರಿಲ್ ನಂತರ ಯಾವೊಂದು ನಿವೇಶನವೂ ಅನಧಿಕೃತವಾಗಿರಬಾರದು ಎಂದು ಕಟ್ಟಾದೇಶ ಮಾಡಿದ್ದಾರೆ.
“ಭೂ ಸುರಕ್ಷಾ” ಯೋಜನೆ
ಭೂ ದಾಖಲೆಗಳ ರಕ್ಷಣೆ ಹಾಗೂ ದುರುಪಯೋಗ ಆಗದಂತೆ, ದಾಖಲೆ ತಿದ್ದಲು ಅವಕಾಶ ಇಲ್ಲದಂತೆ “ಭೂ ಸುರಕ್ಷಾ” ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಸೂಚಿಸಿದರು.
ತಂತ್ರಾಂಶ ಸಮರ್ಪಕ ಬಳಕೆ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ, ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೆ ಮೂಲಕ ಆಸ್ತಿ ಚೀಟಿ (ಪ್ರಾಪರ್ಟಿ ಕಾರ್ಡ್) ನೀಡಲಾಗುತ್ತಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ, ಉಳಿದ ಜಿಲ್ಲೆಗಳಲ್ಲೂ ಡ್ರೋನ್ ಸರ್ವೆ ಆರಂಭಿಸಬೇಕು ಎಂದು ಹೇಳಿದ್ದಾರೆ.
ಭೂ ದಾಖಲೆ ಕಂಪ್ಯೂಟರೀಕರಣ
ಭೂ ಸುರಕ್ಷಾ ಯೋಜನೆ ಮೂಲಕ ಭೂದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆದಿದ್ದು, ಇದುವರೆಗೆ ಸುಮಾರು 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಪೂರ್ಣಗೊಂಡಿದ್ದು, ರಾಜ್ಯದ ಎಲ್ಲಾ 31 ಜಿಲ್ಲೆಗಳ ಭೂ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ ಎಂದರು.
ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಸದರಿ ಭೂಮಿ ಸ್ವಾಧೀನ ಸಂದರ್ಭದಲ್ಲಿ ಎಕ್ಸ್‌ಗ್ರೇಷಿಯಾ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.