Loksabha Election 2024 | ಬಿಎಸ್‌ವೈ ವಿರುದ್ಧ ಈಶ್ವರಪ್ಪ ಗುಡುಗು: ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ

ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಹಾಗೂ ಅವರು ಪುತ್ರರ ವಿರುದ್ಧ ಕೆಎಸ್‌ ಈಶ್ವರಪ್ಪ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Update: 2024-03-14 14:38 GMT

ಬೆಂಗಳೂರು: ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈ ತಪ್ಪಿರುವುದಕ್ಕೆ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಹರಿಹಾಯ್ದಿದ್ದಾರೆ.

ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, “ರಾಜ್ಯದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ʼಗೋ ಬ್ಯಾಕ್ʼ ಚಳುವಳಿ ಬೇರೆ ಯಾರ ವಿರುದ್ಧವೂ ನಡೆದಿಲ್ಲ. ಅಂತಹವರನ್ನು ಉಡುಪಿ-ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರಕ್ಕೆ ಕರೆದುಕೊಂಡು ಬಂದು, ಸದಾನಂದ ಗೌಡ ಅವರಿಗೆ ಟಿಕೆಟ್‌ ತಪ್ಪಿಸಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

“ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟಿ ಲಕ್ಷಾಂತರ ಜನರನ್ನು ಸಂಘಟಿಸಿದ್ದೆ. ಅದು ಅವರ ಕಣ್ಣು ಕುಕ್ಕಿತ್ತು. ಯಡಿಯೂರಪ್ಪ, ಅಮಿತ್‌ ಶಾ ಬಳಿ ಹೋಗಿ ರಾಯಣ್ಣ ಬ್ರಿಗೇಡ್‌ ನಿಲ್ಲಿಸುವಂತೆ ಒತ್ತಾಯಿಸಿದರು. ದೊಡ್ಡವರ ಮಾತು ಕೇಳಿ ನಾನು ಸುಮ್ಮನಾದೆ” ಎಂದು ಈಶ್ವರಪ್ಪ ಹೇಳಿದ್ದಾರೆ.

ರಾಯಣ್ಣ ಬ್ರಿಗೇಡ್‌ ಮುಂದುವರಿದಿದ್ರೆ ಅದು ಹಿಂದುಳಿದ ವರ್ಗಗಳ ದೊಡ್ಡ ಸಂಘಟನೆ ಆಗುತ್ತಿತ್ತು. ಈಗ ಟಿಕೆಟ್ ಕೊಡುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ನಾನು ಎಂಎಲ್ಎ, ಎಂಎಲ್ಸಿ ಅಥವಾ ಎಂಪಿ ಆಗಬೇಕು ಎಂದು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷದ ಅಷ್ಟು ದೊಡ್ಡ ಸಂಘಟನೆಯನ್ನು ಕೇವಲ ಅಪ್ಪ-ಮಕ್ಕಳು ಇಟ್ಟು ಕೊಂಡಿದ್ದಾರೆ, ಇದರ ವಿರುದ್ಧ ಪ್ರತಿಭಟಿಸಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ನನ್ನ ಮಗನಿಗೆ ಟಿಕೆಟ್‌ ಕೊಡುತ್ತೇನೆ ಎಂದು ಹೇಳಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅನ್ಯಾಯ ಮಾಡಿದ್ದಾರೆ. ಸಿ.ಟಿ.ರವಿ, ನಳಿನ್‌ ಕುಮಾರ್‌ ಕಟೀಲ್, ಪ್ರತಾಪ್ ಸಿಂಹ‌ ಹಾಗೂ ಸದಾನಂದಗೌಡಗೆ ಅನ್ಯಾಯವಾಗಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್ ಪ್ರಕರಣದಲ್ಲಿ ಕ್ಲೀನ್‌ ಚಿಟ್ ಸಿಕ್ಕ 2 ದಿನದಲ್ಲಿ ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ, ಕ್ಲೀ‌ನ್‌ ಚಿಟ್‌ ಸಿಕ್ಕರೂ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಈಶ್ವರಪ್ಪ ಅವರು ಆಕ್ರೋಶ ಹೊರ ಹಾಕಿದ್ದಾರೆ.

Tags:    

Similar News