Global Investors Meet 2025 | ಪ್ರತಿ ಹೂಡಿಕೆಗೂ ಸುಸ್ಥಿರ ಬೆಳವಣಿಗೆಯ ಖಾತ್ರಿ; ಸಿಎಂ ಭರವಸೆ

ಸದೃಢ ನೀತಿ ನಿರೂಪಣೆ, ಸಕ್ರಿಯ ಆಡಳಿತ ಮತ್ತು ವ್ಯವಹಾರ ಸ್ನೇಹಿ ಪರಿಸರ ವ್ಯವಸ್ಥೆಯಲ್ಲಿ ಪ್ರತಿ ಹೂಡಿಕೆಯೂ ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವಂತೆ ಖಾತ್ರಿಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.;

Update: 2025-02-11 15:02 GMT
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಏಕಗವಾಕ್ಷಿ ಪೋರ್ಟಲ್‌ಗೆ ಸಿಎಂ ಚಾಲನೆ ನೀಡಿದರು

ಭಾರತದ ಆರ್ಥಿಕತೆಯ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಹೂಡಿಕೆದಾರ ಸ್ನೇಹಿಯಾಗಿದೆ. ಸದೃಢ ನೀತಿ ನಿರೂಪಣೆ, ಸಕ್ರಿಯ ಆಡಳಿತ ಮತ್ತು ವ್ಯವಹಾರ ಸ್ನೇಹಿ ಪರಿಸರ ವ್ಯವಸ್ಥೆಯಲ್ಲಿ ಪ್ರತಿ ಹೂಡಿಕೆಯೂ ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವುದನ್ನು ಖಾತ್ರಿಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಹೆಚ್.ಎ.ಎಲ್, ಬಿಇಎಲ್, ಬಿಇಎಂಎಲ್ ಮುಂತಾದ ಸಾರ್ವಜನಿಕ ವಲಯದ ಉದ್ಯಮಗಳ ತವರಾಗಿರುವ ಕರ್ನಾಟಕವು ಭಾರತದ ಕೈಗಾರಿಕಾ ಬೆಳವಣಿಗೆಗೆ ಬೆನ್ನೆಲುಬಾಗಿದೆ.  ಐಐಎಸ್ಸಿ, ಐಐಎಂ ಬೆಂಗಳೂರು, ಎನ್‍ಎಲ್‍ಎಸ್.ಯು ಮುಂತಾದ ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ಸಂಶೋಧನ ಸಂಸ್ಥೆಗಳಿವೆ. 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಂದಾಗಿ ಉತ್ತಮ ಪ್ರತಿಭೆಗಳ ಆಗರವಾಗಿದೆ ಎಂದು ಹೇಳಿದರು.  

ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಸ್ಪೇಸ್ ಮತ್ತು ಬಯೋಟೆಕ್​​ನಲ್ಲಿ 400 ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಜವಾಬ್ದಾರಿಯುತ, ಸುಸ್ಥಿರ ಬೆಳವಣಿಗೆಗೆ ಆದ್ಯತೆ ನೀಡುವ ಕರ್ನಾಟಕವು, ಹಸಿರು ಆರ್ಥಿಕತೆ, ಪರಿಸರ ಸ್ನೇಹಿ ಕೈಗಾರಿಕಾ ಸಮುಚ್ಚಯ ಹಾಗೂ ಸುಸ್ಥಿರ ನಗರಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಸೌರ ಶಕ್ತಿ, ಪವನ ಶಕ್ತಿ, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಸುಸ್ಥಿರ ನಗರಾಭಿವೃದ್ದಿಯಲ್ಲೂ ನಾಯಕತ್ವ ವಹಿಸಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಸೂಕ್ತವಾದ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಆ ಮೂಲಕ ಬೆಂಗಳೂರಿನ ಜಾಗತಿಕ ಸಂಪರ್ಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಇನ್ನಷ್ಟು ಉತ್ತೇಜಿಸಲಾಗುವುದು. ರಾಜ್ಯದ 320 ಕಿ.ಮೀ ಉದ್ದದ ಕರಾವಳಿ ಪ್ರದೇಶವು ಅನೇಕ ಬಂದರುಗಳನ್ನು ಹೊಂದಿದ್ದು, ಕಡಲತೀರದ ವ್ಯಾಪಾರ, ಮೀನುಗಾರಿಕೆ ಮತ್ತು ಕರಾವಳಿ ತೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.

ದೇಶದ ಅತಿ ದೊಡ್ಡ ಸ್ಟಾರ್ಟ್‌ ಅಪ್‌ ಹಬ್‌

ಹದಿನೈದು ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್ ಹಾಗೂ 40ಕ್ಕೂ ಹೆಚ್ಚು ಯೂನಿಕಾರ್ನ್​ಗಳನ್ನು ಹೊಂದಿರುವ ಕರ್ನಾಟಕವು ಭಾರತದ ಅತಿದೊಡ್ಡ ಸ್ಟಾರ್ಟ್ ಅಪ್ ಹಬ್ ಆಗಿದೆ. ಇದು ಜಾಗತಿಕವಾಗಿ ಮೊದಲ ಐದು ಸ್ಥಾನಗಳಲ್ಲಿ ಗುರುತಿಸಿಕೊಂಡಿದೆ. ಎಲಿವೇಟ್ 100 ಮತ್ತು ಬಿಯಾಂಡ್ ಬೆಂಗಳೂರು ನಂತಹ ಯೋಜನೆಗಳು ನಾವೀನ್ಯತೆಯನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಕೊಂಡೊಯ್ದು ಡಿಜಿಟಲ್ ಪರಿವರ್ತನೆಯಲ್ಲಿ ನಾಯಕತ್ವಕ್ಕೆ ಆದ್ಯತೆ ನೀಡಿವೆ ಎಂದು ಸಿಎಂ ನುಡಿದರು.  

ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುತ್ತಿರುವ ಕರ್ನಾಟಕವು ಇಂಟೆಲ್, ಟಿಎಸ್‍ಎಂಸಿ ಮತ್ತು ಮೈಕ್ರಾನ್ ಸಂಸ್ಥೆಗಳಿಂದ ಪ್ರಮುಖ ಹೂಡಿಕೆಗಳನ್ನು ಹೊಂದಿದೆ. ದೇಶದ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನಲ್ಲಿ ಶೇ.60 ರಷ್ಟನ್ನು ಪೂರೈಸುವ ಮೂಲಕ ಕರ್ನಾಟಕ ನೆಕ್ಸ್ಟ್ ಜೆನ್ ಚಿಪ್ಸ್ ಹಾಗೂ ಸಾಧನಗಳ ಜಾಗತಿಕ ಪೂರೈಕೆದಾರ ಎನಿಸಿದೆ ಎಂದು ವಿವರಿಸಿದರು.

ಇನ್‍ಫೋಸಿಸ್, ವಿಪ್ರೋ, ಟಿಸಿಎಸ್, ಗೂಗಲ್, ಅಮೆಜಾನ್ ಮತ್ತು ಆಪಲ್ ನಂತಹ ಪ್ರಮುಖ ಟೆಕ್ ಕಂಪನಿಗಳಿಗೆ ನೆಲೆಯಾಗಿರುವ ರಾಜ್ಯವು ಭಾರತದ ಸಾಫ್ಟ್ ವೇರ್ ರಫ್ತಿಗೆ ಶೇ 40 ರಷ್ಟು ಕೊಡುಗೆ ನೀಡುತ್ತಿದೆ. ಡಿಜಿಟಲ್ ಅರ್ಥಿಕತೆಯನ್ನು ಭವಿಷ್ಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಅಣಿಮಾಡಲು ಕರ್ನಾಟಕವು ಎಐ ಆಡಳಿತ, ಬ್ಲಾಕ್ ಚೈನ್ ಅಳವಡಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಟೆಸ್ಲಾ, ಓಲಾ ಎಲೆಕ್ಟ್ರಿಕ್, ಏಥರ್ ಎನರ್ಜಿ ಮತ್ತು ಮಹಿಂದ್ರಾ ಎಲೆಕ್ಟ್ರಿಕ್ ಹೂಡಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ, ಭಾರತದ ಇವಿ ರಾಜಧಾನಿಯಾಗಿ ಹೊರಹೊಮ್ಮಿದೆ. ಶೇ. 65 ಕ್ಕೂ ಹೆಚ್ಚು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದ್ದು, ಕರ್ನಾಟಕ ಭಾರತದ ಅತಿ ದೊಡ್ಡ ಏರೋಸ್ಪೇಸ್ ಕೇಂದ್ರವೂ ಆಗಿದೆ. ಕ್ವಿನ್ ಸಿಟಿ ಯನ್ನು (ಕರ್ನಾಟಕ ವರ್ಲ್ಡ್ ಇನ್ನೊವೇಷನ್ ನೆಟ್‍ವರ್ಕ್) ಕೃತಕ ಬುದ್ಧಿಮತ್ತೆ, ಅಂತರಿಕ್ಷ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬಯೋಟೆಕ್ ಗಾಗಿಯೇ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಹೂಡಿಕೆದಾರರಿಗೆ ಕಾನೂನು ಸುವ್ಯವಸ್ಥೆ ಪಾಲನೆ ಒಳಗೊಂಡು ಸುಭದ್ರವಾದ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಗಾಲಿ ಕುರ್ಚಿಯಲ್ಲಿ ಬಂದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ವ್ಹೀಲ್‌ ಚೇರ್‌ನಲ್ಲಿ ಆಗಮಿಸಿದರು. ಸಮಾವೇಶ ಉದ್ಘಾಟನೆ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರು ಪಕ್ಕದಲ್ಲಿದ್ದವರ ಸಹಾಯದಿಂದ ಎದ್ದು ನಿಂತರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿದ್ದರಾಮಯ್ಯ ಅವರ ಕೈಹಿಡಿದು ಆಸರೆಯಾದರು.

ಸಿಎಂ ಸಿದ್ದರಾಮಯ್ಯ ಅವರ ಎಡಗಾಲಿನ ಮಂಡಿ ನೋವು ಹಿನ್ನೆಲೆಯಲ್ಲಿ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಡಾ. ಸತ್ಯನಾರಾಯಣ ಅವರು ತಪಾಸಣೆ ನಡೆಸಿ ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕರ ನೆರವಿನೊಂದಿಗೆ ಸಿದ್ದರಾಮಯ್ಯ ಅವರು ವ್ಹೀಲ್‌ಚೇರ್‌ನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. 

ಏಕಗವಾಕ್ಷಿ ಪೋರ್ಟಲ್‌ಗೆ ಚಾಲನೆ

ಕೈಗಾರಿಕಾ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವ ಹಾಗೂ ಉದ್ಯಮ ಸಂಬಂಧ 30ಕ್ಕೂ ಹೆಚ್ಚುಇಲಾಖೆಗಳ 150 ಸೇವೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು.

ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರೂಪಿಸಿರುವ ಈ ಪೋರ್ಟಲ್‌ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದುಕೊರತೆಗಳಿಗೆ ಪರಿಹಾರವನ್ನು ಸರಳಗೊಳಿಸಲಿದೆ. ಕ್ಷಿಪ್ರಗತಿಯಲ್ಲಿ ಹೂಡಿಕೆ ನನಸಾಗುವಂತೆ ಮಾಡಲಿದೆ. ಹೂಡಿಕೆದಾರರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಿಗಬೇಕಾಗಿರುವ ಸೇವೆಗಳನ್ನೂ ಕೂಡ ಅಧಿಕಾರಿಶಾಹಿಯ ಅಡೆತಡೆಯಿಲ್ಲದೆ ಪಡೆದುಕೊಳ್ಳಬಹುದಾಗಿದೆ.

ಏಕಗವಾಕ್ಷಿ ಪೋರ್ಟಲ್‌ ಏನು?

ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಬೇರೆಬೇರೆ ಇಲಾಖೆಗಳಿಗೆ ಅಲೆಯಬೇಕಾಗಿತ್ತು. ಇದರಿಂದ ಅನುಮೋದನೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದ 30 ಇಲಾಖೆಗಳ ಎಲ್ಲ ಸೇವೆಗಳನ್ನೂ ಒಂದೆಡೆ ತಂದಿದ್ದು, ಏಕಗವಾಕ್ಷಿ ಪೋರ್ಟಲ್‌ ಪರಿಚಯಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧರಿಸಿ ವಿನ್ಯಾಸಗೊಳಿಸಿರುವ ಚಾಟ್-ಬಾಟ್ ಸೌಲಭ್ಯದಲ್ಲಿ ಉದ್ಯಮಿಗಳು ತಮಗೆ ಬೇಕಾದ ಸೇವೆ ಹಾಗೂ ಮಾಹಿತಿಯನ್ನು ತಮ್ಮ ಇಷ್ಟದ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಸೇವೆಗಳು ಮೊಬೈಲ್‌ನಲ್ಲೂ ಸಿಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿವರಿಸಿದ್ದಾರೆ.

ಏಕಗವಾಕ್ಷಿ ವ್ಯವಸ್ಥೆಯಡಿ `ಕರ್ನಾಟಕ ಉದ್ಯೋಗ ಮಿತ್ರ’ದ ಮೂಲಕ ಹೂಡಿಕೆದಾರರಿಗೆ ಪ್ರಮಾಣಪತ್ರ ಆಧರಿತ ಅನುಮೋದನೆ (ಎಬಿಸಿ) ನೀಡಲಾಗುವುದು. ಉದ್ಯಮಿಗಳು ಅನುಮೋದನೆಗೆ ಕಾಯದೆ, ತಕ್ಷಣವೇ ಕಟ್ಟಡ ಕಾಮಗಾರಿ ಮತ್ತು ಇತರೆ ಸಿದ್ಧತೆ ಆರಂಭಿಸಬಹುದು. ಈ ವ್ಯವಸ್ಥೆಯನ್ನು ರಾಷ್ಟ್ರ ಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಬೆಸೆಯಲಾಗಿದೆ. ಈ ಪೋರ್ಟಲ್‌ನಲ್ಲಿ ಕೈಗಾರಿಕೆಗೆ ಬೇಕಾದ ಭೂಮಿ ಹುಡುಕಾಟ, ಮಂಜೂರಾತಿ, ಕಟ್ಟಡ ನಕಾಶೆಗೆ ಅನುಮೋದನೆ ಮುಂತಾದ ಕೆಐಎಡಿಬಿ ಸೇವೆಗಳೂ ಸಿಗಲಿವೆ. 

ಹೊಸ ವ್ಯವಸ್ಥೆಯಲ್ಲಿ ಜಿಐಎಸ್ ಆಧರಿತ ಕೈಗಾರಿಕಾ ಮಾಹಿತಿ ಒದಗಿಸಲಾಗುವುದು. ಕೈಗಾರಿಕೆಗೆ ತಮ್ಮ ಸ್ವಂತ ಅಥವಾ ಕಂದಾಯ ಭೂಮಿ ಬಳಸುವವರಿಗೆ ಅನುಕೂಲವಾಗಲಿದೆ. ನಿರಾಕ್ಷೇಪಣಾ ಪತ್ರ ಇತ್ಯಾದಿಗಳಿಗೆ ವಿಝರ್ಡ್ ತಂತ್ರಜ್ಞಾನದ ಸಾಧನ ಇದರಲ್ಲಿದೆ. ಹಾಗೆಯೇ, ಉದ್ಯಮಿಗಳು ತಮಗೆ ಸಿಗಲಿರುವ ಪ್ರೋತ್ಸಾಹನಾ ಭತ್ಯೆ, ರಿಯಾಯಿತಿ ಮತ್ತು ವಿನಾಯಿತಿಗಳನ್ನು `ವಿಝರ್ಡ್ ಮತ್ತು ಕ್ಯಾಲ್ಕ್ಯುಲೇಟರ್’ ಮೂಲಕ ತಿಳಿದುಕೊಳ್ಳಬಹುದು. 

ಹೂಡಿಕೆಯ ವಿಚಾರದಲ್ಲಿ ನೆರೆಹೊರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಕೈಗಾರಿಕಾ ಯೋಜನೆಗಳ ವಿಚಾರದಲ್ಲಿ ಉಳಿದ ಪ್ರಕ್ರಿಯೆಗಳು ಸುಲಭವೂ ತ್ವರಿತವೂ ಆಗಿರಲೇಬೇಕು. ಇಲ್ಲದಿದ್ದರೆ, ಅವಕಾಶಗಳು ಬೇರೆಯವರ ಪಾಲಾಗುತ್ತವೆ. ಏಕಗವಾಕ್ಷಿ ವ್ಯವಸ್ಥೆ ತರುತ್ತೇವೆಂದು ಮಾತು ಕೊಟ್ಟಿದ್ದೆವು. ಅದು ಈಗ ಈಡೇರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. 

16 ದೇಶಗಳ ರಾಯಭಾರಿಗಳು ಭಾಗಿ 

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳಲ್ಲದೇ ಹಲವು ದೇಶಗಳ ರಾಯಭಾರಿಗಳು ಭಾಗವಹಿಸಿದ್ದಾರೆ.

ಬಹ್ರೇನ್ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ.ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದ್ದಾರೆ.

ಆನಂದ್ ಮಹೀಂದ್ರಗೆ ಕೊಡಗಿನ ಸವಿನೆನಪು 

ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಉದ್ಯಮಿ ಆನಂದ್ ಮಹೀಂದ್ರ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು. 60 ವರ್ಷಗಳ ನೆನಪಿನಾಳಕ್ಕೆ ಜಾರಿದ ಅವರು, 1960ರ ಆಚೀಚೆ ತಾವು ತಮ್ಮ ತಂದೆ-ತಾಯಿಗಳೊಂದಿಗೆ ಕೊಡಗಿನ ಕುಟ್ಟದಲ್ಲಿ ಬೆಳೆದ ದಿನಗಳನ್ನು ಮೆಲುಕು ಹಾಕಿದರು. ಪಂಜಾಬಿನವರಾದ ತಾವು ಇಲ್ಲಿನ ಕಾಫಿ ಪ್ಲಾಂಟೇಶನ್ ನಲ್ಲಿ ಕಲಿತ ಪಾಠಗಳನ್ನೇ ಉದ್ಯಮದಲ್ಲೂ ಅಳವಡಿಸಿಕೊಂಡಿರುವುದಾಗಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ತಾವು ರಾಜ್ಯದಲ್ಲಿ ಮರುಬಳಕೆ ಇಂಧನ, ಪ್ರವಾಸ ಮತ್ತು ಆತಿಥ್ಯೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣೆ, ವಿದ್ಯುಚ್ಚಾಲಿತ ತ್ರಿಚಕ್ರ ವಾಹನ ತಯಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದರು.

ಮಹೀಂದ್ರ ಸಮೂಹವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ 5,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 6,000 ಕೋಟಿ ರೂ. ಹೂಡುವುದಾಗಿ ಪ್ರಕಟಿಸಿದರು. ಕೊನೆಯಲ್ಲಿ `ಕರ್ನಾಟಕಕ್ಕೆ ಧನ್ಯವಾದಗಳು’ ಎನ್ನುವ ಮೂಲಕ ಕನ್ನಡದಲ್ಲೇ ಮಾತು ಮುಗಿಸಿ, ಎಲ್ಲರ ಮನ ಗೆದ್ದರು.

1 ಲಕ್ಷ ಕೋಟಿ ರೂ. ಹೂಡಿಕೆ: ಸಜ್ಜನ್ ಜಿಂದಾಲ್

ತಮ್ಮ ನೇತೃತ್ವದ ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಿದೆ. ಇದರಲ್ಲಿ ಉಕ್ಕು ಉತ್ಪಾದನೆ ವಲಯದಲ್ಲಿ 45 ಸಾವಿರ ಕೋಟಿ ರೂ. ಮತ್ತು ಆತಿಥ್ಯೋದ್ಯಮ, ಸೌರವಿದ್ಯುತ್, ಪರಿಸರಸ್ನೇಹಿ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ 56 ಸಾವಿರ ಕೋಟಿ ರೂ. ಹೂಡಲಾಗುವುದು ಎಂದು ಉದ್ಯಮಿ ಸಜ್ಜನ್ ಜಿಂದಾಲ್ ಹೇಳಿದರು.

Tags:    

Similar News