ನ್ಯಾಯಾಲಯದ ಹೊಸ್ತಿಲಲ್ಲಿ ʻಧರ್ಮಭೀರುʼ ʼನಾಡಪ್ರಭುʼ ಕೆಂಪೇಗೌಡ ಚಿತ್ರಗಳ ಶೀರ್ಷಿಕೆ ವಿವಾದ

Update: 2024-07-13 00:30 GMT

ಕರ್ನಾಟಕದ ರಾಜಕಾರಣದಲ್ಲಿ ಈಗ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ, ಮೇಲಾಟ ನಡೆದಿದೆ. ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕ ಮತ್ತು ಸದ್ಯ ಕೇಂದ್ರ ದ ಉಕ್ಕು ಸಚಿವರಾಗಿರುವ ಎಚ್‌ ಡಿ ಕುಮಾರಸ್ವಾಮಿ , ನಡುವೆ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಸ್ಪರ್ಧೆ ನಡೆದಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಆರಾಧ್ಯದೈವದಂಥ ನಾಡಪ್ರಭು ಕೆಂಪೇಗೌಡರ ಮೂರ್ತಿಗಳು ಬೆಂಗಳೂರಿನ ಕೇಂದ್ರ ಸ್ಥಾನಗಳಲ್ಲಿ ನಿಂತು, ಈಗಲೂ ಬೆಂಗಳೂರನ್ನು ರಕ್ಷಿಸುತ್ತಿರುವಂತೆ ಭಾಸವಾಗುತ್ತದೆ. ಕಳೆದ ತಿಂಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಆಚರಿಸಲಾದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯ ಕಾರ್ಯಕ್ರಮ ರಾಜ್ಯ ರಾಜಕಾರಣದಲ್ಲಿ ಒಂದು ರಾದ್ಧಾಂತಕ್ಕೆ ಕಾರಣವಾಯಿತು

ಈಗ ಒಕ್ಕಲಿಗ ಸಮುದಾಯ ಹಾಗೂ ಕೆಂಪೇಗೌಡರ ಕುರಿತಾದ ಸಂಗತಿಗಳನ್ನು ಪ್ರಸ್ತಾಪ ಮಾಡಲು ಕಾರಣವೊಂದಿದೆ. ಕೆಂಪೇಗೌಡ ಅವರ ಜೀವನ ಚರಿತ್ರೆಯನ್ನು ದೃಶ್ಯ ಮಾಧ್ಯಮಕ್ಕೆ ತರಲು ಘಟಾನುಘಟಿ ನಿರ್ದೇಶಕರು ಕಣಕ್ಕಿಳಿದಿದ್ದಾರೆ ಜಾಗತಿಕ ಮಟ್ಟದಲ್ಲಿ ಕೆಂಪೇಗೌಡ ಚರಿತ್ರೆಯನ್ನು ಸಿನಿಮಾ ರೂಪಕ್ಕಿಳಿಸುವ ಅವರ ಪ್ರಯತ್ನ ಈಗ ಶೀರ್ಷಿಕಾ ವಿವಾದಕ್ಕೊಳಗಾಗಿದೆ.

ತಡೆಯಾಜ್ಞೆ ಕಾನೂನು ಕದನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ದಿನೇಶ್‌ ಬಾಬು ʻಧರ್ಮಬೀರು ನಾಡಪ್ರಭು ಕೆಂಪೇಗೌಡʼ ಚಿತ್ರ ನಿರ್ದೇಶಿಸಲು ಮುಂದಾಗಿದ್ದು, ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಚರಿತ್ರೆಯ ಕುರಿತ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೇ ಶೀರ್ಷಿಕೆ ವಿಚಾರವಾಗಿ ಮತ್ತೊಬ್ಬ ನಿರ್ದೇಶಕ ಟಿ. ಎಸ್‌ ನಾಗಾಭರಣ ತಡೆಯಾಜ್ಞೆ ತಂದಿದ್ದಾರೆ. ದಿನೇಶ್‌ ಬಾಬು ಅವರ ಚಿತ್ರಕ್ಕೆ ಉಪೇಂದ್ರ ನಾಯಕರಾದರೆ, ನಾಗಾಭರಣ ಅವರ ʻನಾಡಪ್ರಭು ಕೆಂಪೇಗೌಡʼ ಅವರ ಚಿತ್ರದಲ್ಲಿ ಡಾಲಿ ಧನಂಜಯ ಕೆಂಪೇಗೌಡರ ಪಾತ್ರವಹಿಸಲಿದ್ದಾರೆ.

ಕಳೆದ ಜೂನ್‌ 21 ರಂದು ನಾಗಾಭರಣ ಚಿತ್ರದ ನಾಯಕನ ʻಮೊದಲ ನೋಟʼ̈ (first look) ಬಿಡುಗಡೆಯಾಗಿದೆ. ಇದು, ʻಧರ್ಮಬೀರು ನಾಡಪ್ರಭು ಕೆಂಪೇಗೌಡʼ ಚಿತ್ರವನ್ನು ನಿರ್ಮಿಸುತ್ತಿರುವ ಡಾ. ಕಿರಣ್‌ ತೋಟಂಬೈಲ್‌ ಅವರ ಕಣ್ಣು ಕೆಂಪಾಗಿಸಿದೆ. ಅವರು ಈಗ ಪೊಲೀಸ್‌ ಮತ್ತು ನ್ಯಾಯಾಲಯದಲ್ಲಿ ಶೀರ್ಷಿಕಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೆಂಪೇಗೌಡ ಚರಿತ್ರೆ

ಈ ಬಗ್ಗೆ ಇಬ್ಬರು ಘಟಾನುಘಟಿ ನಿರ್ದೇಶಕರ ಸಮರ್ಥನೆ ಏನು? ನೋಡೋಣ;

ದಿನೇಶ್‌ ಬಾಬು ಹೇಳುವುದು ಈ ರೀತಿ: “ನ್ಯಾಯಾಲಯದಲ್ಲಿ ಈ ವಿಷಯ ಕುರಿತು ತಡೆಯಾಜ್ಞೆ ಇದೆ. ನ್ಯಾಯಾಲಯ ಎರಡೂ ಪಕ್ಷಗಳ ವಾದವನ್ನು ಆಲಿಸಿದೆ. ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ. ಹೋಲಿಕೆ ಇರುವ ಎರಡು ಶೀರ್ಷಿಕೆಗಳ ಒಂದೇ ಕಥೆ ಆಧರಿಸಿದ ಸಿನಿಮಾ ತಯಾರಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಲ್ಲ. ನ್ಯಾಯಾಲಯ ಈ ಹಿಂದೆ ಶೀರ್ಷಿಕೆಯ ಮೇಲೆ ಕಾಪಿರೈಟ್‌ ಪ್ರಶ್ನೆ ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಂತಿಮ ತೀರ್ಮಾನಕ್ಕಾಗಿ ಕಾಯಬೇಕಿದೆ. ತೀರ್ಪು ನಮ್ಮ ಪರವಾಗಿ ಬರುವ ನಂಬಿಕೆ ನಮಗಿದೆ. ನಾವು ಈ ಚಿತ್ರದ ಚಿತ್ರೀಕರಣವನ್ನು ಶೀಘ್ರವಾಗಿ ಆರಂಭಿಸಲು ನಿರ್ಧರಿಸಿದ್ದೇವೆ. ಈ ಚಿತ್ರಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. ಧರ್ಮೇಂದ್ರ ಕುಮಾರ್‌ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಇದಕ್ಕಾಗಿ ಕೆಂಪೇಗೌಡರ ಕುರಿತಾದ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದ್ದೇವೆ. ಚಾರಿತ್ರಿಕವಾಗಿ ಯಾವುದೇ ಲೋಪದೋಷಗಳಿಲ್ಲದೆ, ಕೆಂಪೇಗೌಡರ ಚಿತ್ರಕ್ಕೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಹನ್ನೆರಡು ಮಂದಿ ಸಹಾಯಕ ನಿರ್ದೇಶಕರು ಈಗಾಗಲೇ ಈ ಚಿತ್ರಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಆಧರಿಸಿ ದೃಶ್ಯರೂಪ ತಯಾರಿಕೆಗೆ ಸಿದ್ಧತೆ ನಡೆದಿದೆ”.

ಉಪೇಂದ್ರ ಆಯ್ಕೆ

“ಕೆಂಪೇಗೌಡರ ಪಾತ್ರವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಿರುವ ಕಾರಣದಿಂದ ನಾವು ಉಪೇಂದ್ರ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಪಾತ್ರಕ್ಕೆ ಹಲವರ ಹೆಸರು ಮುಂದೆ ಬಂದರೂ, ಉಪೇಂದ್ರ ಅವರೇ ಸೂಕ್ತ ಎಂದು ನಮಗನ್ನಿಸಿತು. ಈ ಹಿಂದೆ ಅವರು ವಿಭಿನ್ನ ಕಥಾ ಹಂದರಗಳಿರುವ ಚಿತ್ರಗಳಲ್ಲಿ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚಿಗೆ ಗಳಿಸಿರುವ ಕಾರಣ ಅವರು ನಮ್ಮ ಸಹಜ ಆಯ್ಕೆ. ನಾನು (ದಿನೇಶ್‌ ಬಾಬು) ಈ ಹಿಂದೆ ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೂ ನಿರ್ದೇಶನದ ವ್ಯಾಕರಣ ಗೊತ್ತಿರುವುದರಿಂದ ಎಲ್ಲರೂ ಸೇರಿ ಕೆಂಪೇಗೌಡರನ್ನು ಕುರಿತು ಜಾಗತಿಕ ಮಟ್ಟದ ಸಿನಿಮಾ ಮಾಡಬೇಕೆಂಬುದು ನಮ್ಮ ಮಹಾತ್ವಾಕಾಂಕ್ಷೆ. ಐತಿಹಾಸಿಕ ಕಥೆಯಾಗಿರುವುದರಿಂದ ಈ ಚಿತ್ರದ ಕ್ಯಾನ್ವಾಸ್‌ ಬೃಹದಾಕಾರವಾಗಿದೆ. ಹಲವಾರು ಪಾತ್ರಗಳು ಸೃಷ್ಟಿಯಾಗಿವೆ. ಉಪೇಂದ್ರ ಅವರೊಂದಿಗೆ ಶ್ರೀನಗರ ಕಿಟ್ಟಿ, ವಸಿಷ್ಠ ಸಿಂಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕಾಗಿ ಸೂಕ್ತ ನಾಯಕಿಯ ಹುಡುಕಾಟ ನಡೆದಿದೆ”.

ಇಂಗ್ಲಿಷ್‌-ಕನ್ನಡದ ದ್ವಿಭಾಷಾ ಸಿನಿಮಾ

“ಈ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪಿಸಬೇಕೆನ್ನುವ ಮಹಾತ್ವಾಕಾಂಕ್ಷೆ ನಮ್ಮದು. ಹಾಗಾಗಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಈ ಚಿತ್ರವನ್ನು ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಇಂಗ್ಲಿಷ್‌ ಪೋಸ್ಟರ್‌ ಕೂಡ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ The Founder of Bengaluru ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಮೊದಲು ಇಂಗ್ಲಿಷ್‌ ಅವತರಣಿಕೆಯನ್ನು ಚಿತ್ರೀಕರಿಸಲಾಗುವುದು. ಈಗ ಬೆಂಗಳೂರು ವಿಶ್ವದ ಭೂಪಟದಲ್ಲಿ ತನ್ನದೇ ಸ್ಥಾನಮಾನ ಕಲ್ಪಿಸಿಕೊಂಡಿದೆ. ಬೆಂಗಳೂರು ಇತಿಹಾಸ ಕೂಡ ಇಂದು ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ ಈ ಚಿತ್ರವನ್ನು global ಮಟ್ಟದಲ್ಲಿ ಮಾಡಬೇಕೆನ್ನುವುದು ನಮ್ಮ ತಿಳುವಳಿಕೆ”.

ಅಂದಿನ ಬೆಂಗಳೂರು ಸೆಟ್‌ ನಿರ್ಮಾಣ

ಇವಿಷ್ಟು ದಿನೇಶ್‌ ಬಾಬು ಅವರು ಹೇಳಿರುವ ಮಾತುಗಳು. “ ಚಿತ್ರದ ನಿರ್ಮಾಣ ಪೂರ್ವ ಕೆಲಸಗಳು ಭರದಿಂದ ಸಾಗಿವೆ. ಬೆಂಗಳೂರಿನ ಹೊರವಲಯದಲ್ಲಿ ಮೂರ್ನಾಲ್ಕು ಎಕರೆ ಪ್ರದೇಶದಲ್ಲಿ ಇದಕ್ಕಾಗಿ ಬೃಹದ್‌ ಸೆಟ್‌ ಹಾಕಲು ಸಿದ್ಧತೆ ನಡೆದಿದೆ. ಅಲ್ಲಿ ಅಂದಿನ ಬೆಂಗಳೂರು ನಗರವನ್ನು ಪುನರ್‌ ಸೃಷ್ಟಿ ಮಾಡುವ ಯೋಜನೆ ಇದೆ. ಸುಮಾರು ಮೂರ್ನಾಲ್ಕು ತಿಂಗಳು ಚಿತ್ರೀಕರಣ ನಡೆಸುವ ಆಲೋಚನೆ ಇದೆ. ಬಳಿಕ ವಿಎಫ್‌ ಎಕ್ಸ್‌ ಕೆಲಸಗಳು ಸಾಕಷ್ಟಿವೆ ಚಿತ್ರೀಕರಣೋತ್ತರ (post production) ಕೆಲಸ ಸಾಕಷ್ಟ ಸಮಯ ಹಿಡಿಯಲಿದೆ. ಹೆಚ್ಚು ಕಡಿಮೆ ಸಿನಿಮಾ ಮುಂದಿನ ವರ್ಷದ ಜೂನ್‌ ವೇಳೆಗೆ ಕೆಂಪೇಗೌಡರ ೫೧೬ ರ ಜಯಂತಿಯ ಸಂದರ್ಭದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ” ಎಂಬುದು ತಂಡದ ಸದಸ್ಯರ ಮಾತುಗಳು.

ಹತ್ತು ವರ್ಷದ ಇತಿಹಾಸ

ಹಾಗಾದರೆ, ʻನಾಡಪ್ರಭು ಕೆಂಪೇಗೌಡʼ ಶೀರ್ಷಿಕೆಯನ್ನಿಟ್ಟುಕೊಂಡು ಚಿತ್ರ ನಿರ್ದೇಶಿಸುತ್ತಿರುವ ನಾಗಾಭರಣ ಹೇಳುವುದೇನು? ಈ ಚಿತ್ರದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ನಾಗಾಭರಣ ಅವರ ಪುತ್ರ, ನಿರ್ದೇಶಕ ಪನ್ನಗಾಭರಣ ಅವರ ಸಮರ್ಥನೆ ಈ ರೀತಿ ಇದೆ; “ಈ ಚಿತ್ರದ ಶೀರ್ಷಿಕೆ ʻನಾಡಪ್ರಭು ಕೆಂಪೇಗೌಡʼವಿನ ಹಕ್ಕು ನನ್ನ ತಂದೆ ನಾಗಾಭರಣ ಅವರ ಬಳಿ ಕಳೆದ ಹತ್ತು ವರ್ಷದಿಂದ ಇದೆ. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳ ಅನುಸಾರವಾಗಿ ಕಳೆದ ಹತ್ತು ವರ್ಷದಿಂದ ಈ ಶೀರ್ಷಿಕೆಯನ್ನು ನವೀಕರಿಸುತ್ತಲೇ ಇದ್ದಾರೆ. ಈ ನಿಯಮಕ್ಕೆ ಧಕ್ಕೆ ತಂದಿರುವವರು ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿರುವ ಇನ್ನೊಂದು ತಂಡ. ಅವರು ಶೀರ್ಷಿಕೆಯನ್ನು ನೊಂದಣಿ ಕೂಡ ಮಾಡಿಸಿಲ್ಲ. ನಮ್ಮ ಶೀರ್ಷಿಕೆಯ ಹಿಂದೆ ʻಧರ್ಮಭೀರುʼ ಎಂಬ ಪದವೊಂದನ್ನು ಸೇರಿಸಿದ್ದಾರೆ ಅಷ್ಟೆ. ಇದು ಕಾನೂನಿನ ಪ್ರಕಾರ ತಪ್ಪು ಎಂಬುದು ನಮ್ಮ ಭಾವನೆ. ಯಾರಾದರೂ ಯಾವ ವಿಷಯದ ಬಗ್ಗೆ ಬೇಕಾದರೂ ಚಿತ್ರ ಮಾಡಬಹುದು. ಎಲ್ಲರಿಗೂ ಆ ಸ್ವಾತಂತ್ಯವಿದೆ. ಅದರೆ ಅವರು ನಿಯಮ ಪಾಲಿಸಬೇಕು. ಹಾಗಾಗಿ ನಾವು ತಕರಾರು ಎತ್ತಿದ್ದೇವೆ” .

ಪನ್ನಗಾಭರಣ ಹೇಳುವ ಮಾತುಗಳಿಗೂ ಅರ್ಥವಿದೆ. ಈ ಬರಹಗಾರನಿಗೇ ಅರಿವಿರುವಂತೆ ನಾಗಾಭರಣ ಈ ಚಿತ್ರ ಕುರಿತು ಹನ್ನೆರಡು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಮೂವತ್ತೆರಡು ಡ್ರಾಫ್ಟ್‌ ಕೆಲಸ ನಡೆದಿತ್ತು. ಹೀಗಾಗಿ ತಮ್ಮ ಕಲ್ಪನೆಯ ಕೆಂಪೇಗೌಡರಿಗೆ ಧಕ್ಕೆಯಾಗಬಹುದೆಂಬ ಸಹಜ ಆತಂಕ ಭರಣರದ್ದು. ಆದರೆ ʼಧರ್ಮಭೀರು ನಾಡಪ್ರಭು ಕೆಂಪೇಗೌಡʼ ನಿರ್ಮಾಪಕರು ತಾವು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (ಡಬ್ಬಿಂಗ್‌ ಸಂದರ್ಭದಲ್ಲಿ ಡಬ್ಬಿಂಗ್‌ ಚಿತ್ರಗಳ ಬೆಂಬಲಕ್ಕಾಗಿ ಹುಟ್ಟಿಕೊಂಡ ಪರ್ಯಾಯ ವಾಣಿಜ್ಯ ಮಂಡಳಿ ಇದು) ಯಲ್ಲಿ ಶೀರ್ಷಿಕೆಯನ್ನು ನೊಂದಾಯಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈಗ ಯಾವ ಮಂಡಳಿಯನ್ನು ಪುರಸ್ಕರಿಸುವುದು, ಯಾವುದನ್ನು ತಿರಸ್ಕರಿಸುವುದು ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೂ ನ್ಯಾಯಾಲಯದ ಮೊರೆ ಹೋಗಬೇಕೇನೋ ಅರ್ಥವಾಗುತ್ತಿಲ್ಲ.

ಇತಿಹಾಸಕ್ಕೆ ಯಾವ ಕಾಪಿರೈಟ್

ಈ ಎರಡೂ ವಾದಗಳನ್ನು ಕೇಳಿಸಿಕೊಂಡಾಗ; ಧುತ್ತೆಂದು ಎದುರಾಗುವ ಪ್ರಶ್ನೆ; “ಇತಿಹಾಸಕ್ಕೆ ಯಾವ ಕಾಪಿರೈಟ್?”‌ ‌ನಾಗಾಭರಣ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗದೆ ಆರು ವರ್ಷಗಳೇ ಕಳೆದಿವೆ,. ʻಕಾನೂರಾಯಣʼ ಅವರ ಹಿಂದಿನ ಚಿತ್ರ. ಅನಂತರ ಅವರು, ಸತತವಾಗಿ ಒಂದಿಷ್ಟು ಚಿತ್ರಗಳ ಕುರಿತು ಕೆಲಸಮಾಡುತ್ತಿದ್ದಾರದರೂ, ಅವು ಯಾವುದೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ನಿಜ. ʻಧರ್ಮಭೀರು ನಾಡಪ್ರಭು ಕೆಂಪೇಗೌಡʼ ಹಾಗೂ ʼನಾಡಪ್ರಭು ಕೆಂಪೇಗೌಡʼ ಶೀರ್ಷಿಕೆಗಳ ನಡುವೆ ಸಾಮ್ಯತೆ ಇದೆ. ಆದರೆ, ನಾಡಪ್ರಭು ಕೆಂಪೇಗೌಡರ ಕುರಿತು ಚಿತ್ರ ಮಾಡುವಂತಿಲ್ಲ ಎಂಬುದು ಎಷ್ಟು ಸಮಂಜಸ? ಎಂಬ ಪ್ರಶ್ನೆಯನ್ನು ಸಿನಿಮಾ ಲೇಖಕ, ವಿಮರ್ಶಕ ಚೇತನ್‌ ನಾಡಿಗೇರ್‌ ಎತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. ಹೇಳಿಕೇಳಿ ಕೆಂಪೇಗೌಡರು ಚಾರಿತ್ರಿಕ ವ್ಯಕ್ತಿ, ಒಂದು ಕಥೆ, ಕಾದಂಬರಿಯಾದರೆ ಕಾಪಿರೈಟ್‌ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಒಂದು ನೈಜ ಘಟನೆ ಅಥವಾ ಐತಿಹಾಸಿಕ ಸಂಗತಿ ಕುರಿತು ಚಿತ್ರ ಮಾಡುವಾಗ ಅದರಲ್ಲಿ ಕಾಪಿರೈಟ್‌ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ? ಎಂಬ ಬಗ್ಗೆ ಈಗ ಕನ್ನಡ ಚಿತ್ರರಂಗದಲ್ಲಿ ಚರ್ಚೆ ಆರಂಭವಾಗಿದೆ. ಹೌದು ಪ್ರತಿಯೊಬ್ಬ ನಿರ್ದೇಶಕನಿಗೂ ಅಂಥ ವಸ್ತುಗಳ ಬಗ್ಗೆ ಭಿನ್ನಭಿನ್ನವಾದ ಚಿಂತನೆ, ದೃಷ್ಟಿಕೋನಗಳಿರುತ್ತವೆ. ಅದನ್ನು ಆಭಿವ್ಯಕ್ತಿಗೊಳಿಸುವ ರೀತಿಯೂ ವಿಭಿನ್ನವಾಗಿರುತ್ತದೆ. ಅದನ್ನು ಪ್ರಶ್ನಿಸಲು ಸಾಧ್ಯವೇ? “ 1955ರಲ್ಲಿ ಶಂಕರ್‌ಸಿಂಗ್‌ ಅವರು ʻಶಿವಶರಣೆ ನಂಬಿಯಕ್ಕʼ ಚಿತ್ರ ನಿರ್ದೇಶಿಸಿದ್ದರು. ಅದೇ ವರ್ಷ ಬಿ.ಆರ್.‌ ಪಂತುಲು ಅವರು ʻಶಿವಶರಣೆ ನಂಬೆಕ್ಕʼ ಎಂಬ ಚಿತ್ರ ಮಾಡಿದ್ದರು. ಈ ಎರಡೂ ಚಿತ್ರಗಳಿಗೂ ಚಿತ್ರ ಕಥೆ ಬರೆದವರು ಪಿ. ಗುಂಡೂರಾವ್‌ ಅವರು. ಎರಡೂ ಚಿತ್ರಗಳೂ ನಂಬೆಕ್ಕನ ಮಹಿಮೆಯನ್ನು ಪರಿಚಯಿಸದ್ದೇ ಅಲ್ಲದೆ, ಪ್ರೇಕ್ಷಕರ ಮೆಚ್ಚಿಗೆಯನ್ನೂ ಗಳಿಸಿದ್ದವು” ಎಂದು ಚೇತನ್ ನಾಡಿಗೇರ್‌ ಹೇಳುತ್ತಾರೆ.

ಒಂದು ವಾದದಂತೆ; ಇದುವರೆಗೆ ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಕುರಿತು ಐವತ್ತಕ್ಕೂ ಹೆಚ್ಚು ಚಿತ್ರಗಳು ಬಂದಿವೆ. ಹಾಗೆಯೇ ಮಹಾಭಾರತ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಒಬ್ಬೊಬ್ಬ ನಿರ್ದೇಶಕನೂ ತನ್ನದೇ ರೀತಿಯಲ್ಲಿ ಈ ಎರಡು ಮಹಾಕಾವ್ಯಗಳನ್ನು ನೋಡಿದ್ದಾನೆ. ಗಾಂಧೀಜಿ, ಅಂಬೇಡ್ಕರ್‌, ಭಗತ್‌ ಸಿಂಗ್‌, ಸಾಯಿಬಾಬ, ಶಿವಾಜಿ, ಬಸವಣ್ಣ ಕುರಿತು ಇದುವರೆಗೆ ಎಷ್ಟು ಚಿತ್ರಗಳು ಬಂದಿಲ್ಲ. ಕನ್ನಡದಲ್ಲೇ, ಬಸವಣ್ಣ, ಕಾಳಿದಾಸ, ಸಂಗೊಳ್ಳಿ ರಾಯಣ್ಣ, ಅಲ್ಲಮ, ಕುರಿತು ಒಂದಕ್ಕಿಂತ ಹೆಚ್ಚಿನ ಚಿತ್ರಗಳು ಬಂದಿವೆ. ಕಳೆದ ಇಪ್ಪತ್ತು ವರ್ಷದಲ್ಲಿ ಮರಾಠಿ ಚಿತ್ರರಂಗದಲ್ಲಿ ಶಿವಾಜಿ ಕುರಿತು ಎಂಟು ಚಿತ್ರಗಳು ಬಂದಿವೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ʻಓಂʼ ನಿಂದ ಆರಂಭವಾಗಿ ʻಕೈವʼ ವರೆಗೆ ಭೂಗತ ಜಗತ್ತಿನ ಜಯರಾಜ್‌, ಕೊತ್ವಾಲ್‌ ರಾಮಚಂದ್ರ ಕುರಿತು ಎಷ್ಟ ಚಿತ್ರಗಳು ಬಂದಿಲ್ಲ?. ಯಾವುದೋ ಒಂದು ವಿಷಯ, ವಸ್ತು, ನೈಜ ಘಟನೆ ಕುರಿತು, ಒಬ್ಬರು ಚಿತ್ರ ಮಾಡಿದರೆಂದರೆ ಇನ್ನೊಬ್ಬರು ಚಿತ್ರ ಮಾಡಬಾರದೆಂದೇನಿಲ್ಲ. ನೈಜ ಘಟನೆಗಳು, ವಸ್ತುಗಳು, ಚಾರಿತ್ರಿಕ ವಸ್ತುಗಳು ಯಾರ ಸ್ವತ್ತೂ ಅಲ್ಲ.

ಕೆಂಪೇಗೌಡ ಚಿತ್ರದ ವಿವಾದ ಕಳೆದ ವರ್ಷ ನಡೆದ ವಿವಾದವನ್ನು ನೆನಪಿಸುತ್ತದೆ. ಅದು ರಮ್ಯ ನಿರ್ದೇಶನದ “ಸ್ವಾತಿ ಮುತ್ತಿನ ಮಳೆಹನಿಯೇ” ಚಿತ್ರದ ಶೀರ್ಷಿಕೆ ಕುರಿತಾದದ್ದು. ಈ ಶೀರ್ಷಿಕೆಯನ್ನು ಬಳಸಬಾರದೆಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್‌ ಬಾಬು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ವಿಚಿತ್ರವೆಂದರೆ ಆ ಶೀರ್ಷಿಕೆಯ ಹಕ್ಕು ಅವರ ಬಳಿಯೂ ಇರಲಿಲ್ಲ.

ಕೊನೆಯಲ್ಲಿ ಮತ್ತೊಮ್ಮೆ ಕೆಂಪೇಗೌಡರ ಚಿತ್ರದ ಕುರಿತೇ ಹೇಳುವುದಾದರೆ, ಇಂಥದ್ದೊಂದು ಚಿತ್ರವನ್ನು ಮಾಡುವುದಾಗಿ ಮೊದಲು ಘೋಷಿಸಿದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯ ಕೇಂದ್ರದ ಉಕ್ಕು ಸಚಿವರಾಗಿರುವ ಎಚ್.‌ ಡಿ ಕುಮಾರಸ್ವಾಮಿ ಅವರು. ಕುಮಾರಸ್ವಾಮಿ ಅವರು 2017ರಲ್ಲಿ ಚಿತ್ರದ ಘೋಷಣೆಯಾಗಿತ್ತು. 2018ರಲ್ಲಿ ಚಿತ್ರೀಕರಣ ಆರಂಭವಾಗುವುದಾಗಿ ಅವರು ಹೇಳಿದ್ದರು. ಆದರೆ ಅವರು ಕಾರಣಾಂತರದಿಂದ ಈ ಚಿತ್ರ ಮಾಡಲು ಸಾಧ್ಯವಾಗಲೇ ಇಲ್ಲ. ಈಗ ಕೆಂಪೇಗೌಡರ ಕುರಿತ ಚಿತ್ರವನ್ನು ತಾವು ಮೊದಲೇ ಘೋಷಿಸಿದ್ದರಿಂದ, ಆ ಚಿತ್ರವನ್ನು ಬೇರೆ ಯಾರೂ ಮಾಡುವಂತಿಲ್ಲ ಎಂಬ ತಗಾದೆ ತೆಗೆದರೆ ಗತಿ ಏನು?”

ಏಕೆಂದರೆ, ಒಕ್ಕಲಿಗ ನಾಯಕತ್ವಕ್ಕಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ ಈ ಚಿತ್ರ ನಿರ್ಮಾಣ ನೆರವಾಗಲೂ ಸಾಧ್ಯವಾಗಬಹುದು.

Tags:    

Similar News