Elephant Arjuna | ಮತ್ತೆ ಕಣ್ಣೆದುರು ಬರಲಿದ್ದಾನೆ ಕರುನಾಡ ಕಣ್ಮಣಿ ʼಅರ್ಜುನʼ!
ಮೈಸೂರು ದಸರಾ ಆನೆಯಾಗಿ ಕರುನಾಡಿನುದ್ದಗಲಕ್ಕೂ ಅಪಾರ ಪ್ರೀತಿ ಗಳಿಸಿದ್ದ ಆನೆ ಅರ್ಜುನನ್ನು ಸದ್ಯದಲ್ಲೇ ಕಣ್ತುಂಬಿಕೊಳ್ಳಲು ಸಜ್ಜಾಗಿ!
ಹೌದು, ದಸರಾ ಅಂಬಾರಿ ಆನೆಯಾಗಿ ಮೆರೆದಿದ್ದ ಅರ್ಜುನ ಕಳೆದ ವರ್ಷ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಗಾಯಗೊಂಡು ಸಾವುಕಂಡಿದ್ದ. ಆತನ ಆ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿತ್ತು. ಜೊತೆಗೆ ದಸರೆಯ ಹೆಮ್ಮೆಯಾಗಿ ನಾಡಿನ ಪ್ರೀತಿ, ಅಭಿಮಾನ, ಮೆಚ್ಚುಗೆ ಗಳಿಸಿದ್ದ ಅರ್ಜುನನಿಗಾಗಿ ಒಂದು ಸ್ಮಾರಕ ನಿರ್ಮಿಸುವಂತೆ ಬೇಡಿಕೆಯೂ ಕೇಳಿಬಂದಿತ್ತು. ಇದೀಗ ಸರ್ಕಾರ, ಆ ಬೇಡಿಕೆಗೆ ಸ್ಪಂದಿಸಿ ಅರ್ಜುನ ಜೀವ ಬಿಟ್ಟ ಜಾಗದಲ್ಲೇ ʼಲೈಫ್ ಸೈಜ್ʼ ಪ್ರತಿರೂಪ ನಿರ್ಮಿಸಿದೆ. ಹಾಗಾಗಿ ಮರೆಯಾಗಿದ್ದ ಅರ್ಜುನ ಮತ್ತೆ ಮೈದಡವಲು ಎಲ್ಲರಿಗೂ ಸಿಗುತ್ತಾನೆ! ಕಣ್ತುಂಬಿಕೊಳ್ಳಲು ಮತ್ತೆ ಕಣ್ಣೆದುರು ನಿಲ್ಲಲಿದ್ದಾನೆ!
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಅರ್ಜುನನ ಸ್ಮಾರಕ ನಿರ್ಮಾಣದ ಅಭಿಮಾನಿಗಳ ಕನಸು ಇದೀಗ ನನಸಾಗಿದೆ. ಅರ್ಜುನನ ಸಮಾಧಿಯ ಮೇಲೆಯೇ ಪ್ರತಿಕೃತಿ ಪ್ರತಿಷ್ಠಾಪನೆಗೆ ಬಹುತೇಕ ಸಿದ್ಧತೆಗಳು ನಡೆಯುತ್ತಿವೆ.
ಅಂತಿಮ ಹಂತದ ಸಿದ್ಧತೆಗಳ ನಡುವೆ 9.8 ಅಡಿ ಎತ್ತರ 12.4 ಅಡಿ ಉದ್ದದ ಅರ್ಜುನನ ಪ್ರತಿಕೃತಿಯ ಪುತ್ಥಳಿ ನಿರ್ಮಾಣವಾಗಿದೆ. ಮೈಸೂರು ಜಿಲ್ಲೆಯ ಬಳ್ಳೆ ಸಾಕಾನೆ ಶಿಬಿರದಲ್ಲಿ ದಕ್ಷಿಣ ಕನ್ನಡದ ಶಿಲ್ಪಿ ಧನಂಜಯ್ ಪಡು ಮತ್ತು ಅವರ ತಂಡ ಎರಡೂವರೆ ತಿಂಗಳು ಶ್ರಮವಹಿಸಿ ಪ್ರತಿಕೃತಿ ನಿರ್ಮಿಸಿದೆ. ಧನಂಜಯ್ ಅವರ ಕೈಚಳಕ ಹೇಗಿದೆ ಎಂದರೆ, ಪಕ್ಕನೆ ನೋಡಿದರೆ ಕಣ್ಣೆದುರು ಕಣ್ಮರೆಯಾದ ಅರ್ಜುನನೇ ಬಂದು ಸಾಕ್ಷಾತ್ ನಿಂತಿರುವನೋ ಎಂಬಷ್ಟು ಅದ್ಭುತವಾಗಿ ಪ್ರತಿಕೃತಿ ನಿರ್ಮಾಣವಾಗಿದೆ.
ಎಂಟು ಬಾರಿ ಅಂಬಾರಿ ಹೊತ್ತಿದ್ದ!
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ ಎಂಟು ಬಾರಿ ಚಾಮುಂಡೇಶ್ವರಿ ದೇವಿಯ ಸಹಿತ ಅಂಬಾರಿ ಹೊತ್ತಿದ್ದ ಅರ್ಜುನ ತನ್ನ ಸೌಮ್ಯ ಸ್ವಭಾವದಂತೆಯೇ ತನ್ನ ಶೌರ್ಯ, ಪರಾಕ್ರಮಕ್ಕೂ ಹೆಸರಾಗಿದ್ದ. ಹಾಗಾಗಿಯೇ ಲಕ್ಷಾಂತರ ಜನರ ನಡುವೆ ಅತ್ಯಂತ ಶಿಸ್ತಿನಿಂದ ಅಂಬಾರಿ ಹೊತ್ತು ಸಾಗುತ್ತಿದ್ದಂತೆಯೇ ದಟ್ಟಡವಿಯಲ್ಲಿ ಮದವೇರಿದ ಮದ್ದಾನೆಗಳನ್ನು ಸೊಕ್ಕಡಗಿಸಿ ಪಳಗಿಸಿ ಸರಪಳಿ ಹಾಕಿ ಎಳೆದು ತರುವುದರಲ್ಲೂ ನಿಪುಣನಾಗಿದ್ದ.
ಆದರೆ, ಕಳೆದ ವರ್ಷದ ಡಿಸೆಂಬರ್ 4 ಮಾತ್ರ ಆತನ ಪಾಲಿಗೆ ಅದೃಷ್ಟದ ದಿನವಾಗಿರಲಿಲ್ಲ. ಬಲಿಷ್ಠ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ನಿಂತು ವೀರಾವೇಶದಿಂದ ಹೊರಾಡಿದ ಅರ್ಜುನ, ಅದರ ದಾಳಿಗೆ ಘಾಸಿಗೊಂಡು ಪ್ರಾಣಬಿಟ್ಟಿದ್ದ. ಆದರೆ, ಸಾವಿನಲ್ಲೂ ತ್ಯಾಗ ಮೆರೆದಿದ್ದ ಅರ್ಜುನ, ತಾನು ಸಾವಿಗೆ ಒಡ್ಡಿಕೊಂಡು, ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆಯ ಹತ್ತಾರು ಸಿಬ್ಬಂದಿಯ ಪ್ರಾಣ ಉಳಿಸಿದ್ದ. ನೈಜ ಧೀರೋದ್ಧಾತ ಹೋರಾಟದ ಮೂಲಕ ಹುತಾತ್ಮನಾಗಿದ್ದ.
ಅರ್ಜುನನ ಆ ತ್ಯಾಗ ಮತ್ತು ಬಲಿದಾನದ ಹಿನ್ನೆಲೆಯಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸರ್ಕಾರ, ಮೈಸೂರಿನ ಬಳ್ಳೆ ಹಾಗೂ ಹಾಸನದಲ್ಲಿ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಿತ್ತು.
ಅರ್ಜುನನ ಪ್ರತಿಕೃತಿ ವಿಶೇಷ
ಅರ್ಜುನ ಆನೆಯ ಉದ್ದ, ಎತ್ತರ, ಆನೆಯ ದಂತ ಸೇರಿದಂತೆ ಮೈಮಾಟವನ್ನು ಸಂಪೂರ್ಣ ಯಥಾ ನಕಲು ಮಾಡಿದಂತೆ ಪ್ರತಿಕೃತಿ ನಿರ್ಮಾಣ ಮಾಡಿರುವುದು ವಿಶೇಷ.
ಹಾಗಾಗಿ ಒಮ್ಮೆಲೇ ನೋಡಿದರೆ ಕಾಡಿನ ನಡುವೆ ಜೀವಂತ ಅರ್ಜುನನೇ ಎದುರಾದನೇನೋ ಎಂಬಷ್ಟು ಆಕರ್ಷಕವಾಗಿ ಪ್ರತಿಕೃತಿ ಮೂಡಿಬಂದಿದೆ.
ಸದ್ಯ ಕಾಡಿನ ನಡುವೆಯೇ ಅರ್ಜುನ ಸಾವು ಕಂಡ ಜಾಗದಲ್ಲೇ ಪ್ರತಿಕೃತಿ ನಿರ್ಮಾಣವಾಗಿರುವುದರಿಂದ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಸಾಧ್ಯತೆ ಇದೆ. ಹಾಗಾಗಿ ಅರ್ಜುನ ಸಮಾಧಿಯ ಸುತ್ತ ಕಂದಕ ತೋಡಿ, ಸೋಲಾರ್ ಬೇಲಿ ನಿರ್ಮಿಸಿ ಪ್ರತಿಕೃತಿಗೆ ರಕ್ಷಣೆ ನೀಡುವ ಕಾರ್ಯ ಕೂಡ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅರ್ಜುನ ವೀಕ್ಷಣೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.