ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ, ದೊಡ್ಡ ಗೌಡರ ಮನೆಯ ಮೂರನೇ ತಲೆಮಾರಿನ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೋಲು ಕಂಡ ಬೆನ್ನಲ್ಲೇ ಪಕ್ಷದ ಆಂತರಿಕ ವಲಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಒಂದು ಕಡೆ ಸ್ವತಃ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರನ ಸತತ ಮೂರನೇ ಸೋಲಿನ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದ್ದರೆ, ಮತ್ತೊಂದು ಕಡೆ ಪಕ್ಷದ ಕಾರ್ಯಾಧ್ಯಕ್ಷ ಮತ್ತು ಕೋರ್ ಕಮಿಟಿ ಅಧ್ಯಕ್ಷರ ನಡುವೆ ವಾಕ್ಸಮರ ಭುಗಿಲೆದ್ದಿದೆ.
ಪಕ್ಷದ ಕಾರ್ಯಾಧ್ಯಕ್ಷ ಸಾ ರಾ ಮಹೇಶ್ ಮತ್ತು ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡರು ಚನ್ನಪಟ್ಟಣ ಚುನಾವಣಾ ಪ್ರಚಾರದ ವಿಷಯದಲ್ಲಿ ಪರಸ್ಪರ ಬಹಿರಂಗ ಆರೋಪ- ಪ್ರತ್ಯಾರೋಪದ ಜಂಗೀ ಕುಸ್ತಿ ಆರಂಭಿಸಿದ್ದಾರೆ.
ಪಕ್ಷದ ಕಾರ್ಯಾಧ್ಯಕ್ಷರೊಂದಿಗಿನ ಆಪ್ತರಾಗಿರುವ ಕುಮಾರಸ್ವಾಮಿ ಅವರು ತಮ್ಮೊಂದಿಗೆ ಮಾತು ಕೂಡ ಆಡುತ್ತಿಲ್ಲ ಎಂದು ಹೇಳಿದ್ದ ಜಿ ಟಿ ಡಿ ಅವರಿಗೆ ಪ್ರತಿಕ್ರಿಯಿಸಿದ್ದ ಸಾ ರಾ ಮಹೇಶ್, ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತೇನೂ ನಡೆಯುವುದಿಲ್ಲ. ನನ್ನಿಂದ ಅವರಿಗೆ(ಜಿಟಿಡಿಗೆ) ರಾಜಕೀಯವಾಗಿ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಆಣೆ ಪ್ರಮಾಣ ಮಾಡಲು ಚಾಮುಂಡಿಬೆಟ್ಟಕ್ಕೆ ಬರಲಿ ಎಂದು ಸವಾಲ್ ಹಾಕಿದ್ದರು. ಆ ಸವಾಲಿಗೆ ಇದೀಗ ಪ್ರತಿಕ್ರಿಯಿಸಿರುವ ಜಿಟಿಡಿ, ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೇ ರಾಜಕಾರಣವನ್ನು ಬಿಟ್ಟುಬಿಡುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ, ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೆ ರಾಜಕಾರಣವನ್ನೇ ಬಿಟ್ಟುಬಿಡುತ್ತೇನೆ. ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಚಾಮುಂಡಿಬೆಟ್ಟಕ್ಕೆ ಬಾ, ಅಲ್ಲಿಗೆ ಬಾ ಅಂದರೆ ಹೋಗಲು ಆಗುತ್ತದಾ? ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು? ಆ ಕಥೆ ನನಗು ಆಗಬೇಕಾ ಎಂದು ಪ್ರಶ್ನಿಸಿದರು.
ನಾನು ಹೇಳುತ್ತಿರೋದೆ ಸತ್ಯ. ನಾನು ತಪ್ಪು ಮಾಡಿದ್ದರೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ಅಂದು ಸಂಜೆಯೆ ನನ್ನ ತಾಯಿ ಬಳಿ ಹೋಗಿ ತಪ್ಪು ಒಪ್ಪುಕೊಂಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಸುಳ್ಳು ಹೇಳುವವನೂ ಅಲ್ಲ. ಸುಮ್ಮನೆ ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಚ್ಚರಿಕೆ ನೀಡಿದರು.
ನನಗೆ ಯಾರೋ ಒಬ್ಬರ ಹೆಸರು ಇಟ್ಟುಕೊಂಡ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ. ಯಾರು ಇಲ್ಲದಿದ್ದರೂ ನಾನು ರಾಜಕಾರಣ ಮಾಡಿದ್ದೇನೆ. ನನಗೆ ರಾಜಕೀಯ ಮಾಡುವುದು ಗೊತ್ತು. ನಾನು ಯಾರ ಕತ್ತನ್ನೂ ಕೊಯ್ದಿಲ್ಲ. ನನ್ನನ್ನು ಯಾರು ಯಾವ ಪಕ್ಷಕ್ಕೂ ಕರೆ ತಂದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು ಎಂದು ಜಿಟಿಡಿ ತಮ್ಮ ರಾಜಕೀಯ ವಿರೋಧಿಗಳಿಗೆ ಸಂದೇಶ ರವಾನಿಸಿದರು.
ಹೊಸ ಪ್ರಾದೇಶಿಕ ಪಕ್ಷದ ಸೂಚನೆ
ತಮ್ಮನ್ನು ಇದೇ ವೇಳೆ ಭೇಟಿ ಮಾಡಿದ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಅವರೊಂದಿಗಿನ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಜಿಡಿಡಿ, ಇಬ್ರಾಹಿಂಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟುವ ಉತ್ಸಾಹ ಇದೆ. ಆ ಬಗ್ಗೆ ನನ್ನ ಬಳಿ ಮಾತನಾಡಿದ್ದಾರೆ. ರಾಜ್ಯ ಪ್ರವಾಸ ಮಾಡುತ್ತಿದ್ದು, ಅದು ಮುಗಿದ ಬಳಿಕ ಮತ್ತೆ ಮಾತನಾಡುತ್ತೇನೆ ಎಂದು ಹೇಳಿ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ಆದರೆ, “ಈಗಿನ ಶಾಸಕರನ್ನ ಕಟ್ಟಿಕೊಂಡು ಹೊಸ ಪಕ್ಷ ಕಟ್ಟಲು ಆಗಲ್ಲ. ಪಕ್ಷ ಕಟ್ಟಲು ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ. ನಾನು ಇಂದಿನವರೆಗೂ ಯಾವ ಜೆಡಿಎಸ್ ಶಾಸಕರ ಜೊತೆಯೂ ಮಾತನಾಡಿಲ್ಲ. ಯಾರಿಗಾದ್ರು ನೋವಾಗಿದ್ದರೆ ಅವರಾಗೆ ಅವರೇ ಮಾತನಾಡಿದರೆ ಮಾತನಾಡುತ್ತೇನೆ. ನಾನಾಗೇ ನಾನು ಯಾರ ಜೊತೆಯು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.