ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಶಿಕ್ಷಣ ತಜ್ಞರ ಸ್ವಾಗತ: ಯಾಕೆ?

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.;

Update: 2025-02-16 03:00 GMT
ಹೊಸದಾಗಿ ಆರಂಭಿಸಲಾಗಿರುವ ನೃಪತುಂಗ ವಿವಿಯ ಸಾಂದರ್ಭಿಕ ಚಿತ್ರ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.

ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯಡಿ 10 ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಬೀದರ್​ ವಿವಿಯನ್ನು ಹೊರತು ಪಡಿಸಿ ಉಳಿದೆಲ್ಲವುಗಳನ್ನು ಮುಚ್ಚಲು ಸಂಪುಟ ಉಪ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂಬ ಮಾಹಿತಿಯಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ.ಎಸ್. ಬಾಲಸುಬ್ರಮಣ್ಯ ಹಾಗೂ ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಡಿ.ಎಸ್. ಪೂರ್ಣಾನಂದ ಅವರು ಹೊಸ ವಿವಿಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ.

ಹಳೆಯ ವಿವಿಗಳಿಗೆ ಒತ್ತು ಕೊಡಿ

ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುವ ಬದಲು ಹಳೆಯ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಒತ್ತು ಕೊಡಿ. ಅಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅತಿಥಿ ಉಪನ್ಯಾಸಕರ ಬದಲು ಪೂರ್ಣಾವಧಿ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಡಾ. ಎ.ಎಸ್. ಬಾಲಸುಬ್ರಮಣ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದೇ ವಿಷಯವನ್ನು ಪ್ರತಿಪಾದಿಸಿರುವ ಡಾ. ಡಿ.ಎಸ್. ಪೂರ್ಣಾನಂದ ಅವರು ಕೂಡ, ಹೊಸ ವಿವಿಗಳನ್ನು ಮುಚ್ಚುವುದನ್ನು ಸ್ವಾಗತಿಸಿದ್ದಾರೆ. ಜೊತೆಗೆ ಕಳೆದ 15-20 ವರ್ಷಗಳಿಂದ ಪೂರ್ಣಾವಧಿ ಬೋಧಕ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡುತ್ತಿಲ್ಲ. ಅತಿಥಿ ಉಪನ್ಯಾಸಕರಿಗೆ ಸೂಕ್ತ ಗೌರವಧನ ಸಿಗುತ್ತಿಲ್ಲ. ಹೀಗಾಗಿ ಉನ್ನತ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಹಳೆಯ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಡಬೇಕು ಎಂದಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...

Full View

ಆಂತರಿಕ ವರದಿ ತರಿಸಿಕೊಂಡಿದ್ದ ರಾಜ್ಯ ಸರ್ಕಾರ

ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಲು ಸರ್ಕಾರ ದೊಡ್ಡ ಮೊತ್ತದ ಹಣ ಕೊಡಬೇಕು. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ಭೂಮಿ ಕೂಡ ಬೇಕಾಗಿದೆ. ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. 342 ಕೋಟಿ ಮೊತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ ಮೂಲಸೌಕರ್ಯ ಸಲಕರಣೆ ವಾಹನ ಪೀಠೋಪಕರಣ ಇತರೆ ವಸ್ತುಗಳ ಖರೀದಿಸಲು ಅಗತ್ಯವಿದೆ ಎಂಬ ಆಂತರಿಕ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿತ್ತು. ನಂತರ 'ರಾಜ್ಯದ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಪರಿಸ್ಥಿತಿಗಳ ಅಧ್ಯಯನ'ಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು.

ಡಿಸಿಎಂ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, 'ರಾಜ್ಯ ಸರ್ಕಾರವು, ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ಮಾಡಲಿದೆ. ಈ ಹಿಂದೆ ನೂತನ ವಿಶ್ವವಿದ್ಯಾಲಯದ ಬಗ್ಗೆ ಮಾಡಿದ್ದ ಕಾನೂನಿನಲ್ಲಿ ಪ್ರತಿ ವಿವಿಗೆ ಕೇವಲ 2 ಕೋಟಿ ಹಣ ಮೀಸಲಿಟ್ಟಿದ್ದರು. ಯಾವುದೇ ಜಮೀನು ನೀಡಿರಲಿಲ್ಲ. ಮಂಡ್ಯ, ಚಾಮರಾಜನಗರ ಭಾಗದಲ್ಲಿ ಎಲ್ಲರೂ ಮೈಸೂರು ವಿವಿಗೆ ಮೊದಲ ಆದ್ಯತೆ ನೀಡಿದ ಪರಿಣಾಮ ಇತರೇ ವಿವಿಗಳಲ್ಲಿ ಪ್ರವೇಶಾತಿ ಕುಸಿತವಾಗಿತ್ತು. ಈ ಬಗ್ಗೆ ಆಂತರಿಕ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳು ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ರಚಿಸಿದ್ದರು. ಈ ಬಗ್ಗೆ ನಾವು ಚರ್ಚೆ ಮಾಡಿ, ಬಂದಿರುವ ಸಲಹೆಗಳನ್ನು ಪರಾಮರ್ಶಿಸಿದ್ದೇವೆ. ಈ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಲು ಆಗಿಲ್ಲ. ಮಾಹಿತಿ ನೀಡಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಇಡುತ್ತೇವೆ. ನಂತರ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ' ಎಂದಿದ್ದಾರೆ.

ಯಾವ ವಿಶ್ವವಿದ್ಯಾಲಯಗಳು ಬಾಗಿಲು ಹಾಕಲಿವೆ? 

ಹಾಸನ, ಚಾಮರಾಜನಗರ ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ.

Tags:    

Similar News