ಶಾಸಕ ವೀರೇಂದ್ರ ಪಪ್ಪಿ ಪ್ರಕರಣ: 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.
ಇದುವರೆಗಿನ ದಾಳಿಗಳಲ್ಲಿ ಆರೋಪಿ ಮತ್ತು ಅವರ ಸಂಬಂಧಿಕರಿಗೆ ಸೇರಿದ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ. ವಶಪಡಿಸಿಕೊಂಡಿದೆ.;
ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ಇ.ಡಿ.) ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದೆ. ಇದರಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಮತ್ತು ಐಷಾರಾಮಿ ಕಾರುಗಳು ಸೇರಿವೆ.
ಇ.ಡಿ. ಅಧಿಕಾರಿಗಳು ಸೆಪ್ಟೆಂಬರ್ 6ರಂದು ಚಳ್ಳಕೆರೆಯಲ್ಲಿರುವ ಕೆ.ಸಿ. ವೀರೇಂದ್ರ ಹಾಗೂ ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ, 24 ಕೋಟಿ ರೂ. ಮೌಲ್ಯದ 21.43 ಕೆ.ಜಿ. ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಗಳು, 10.985 ಕೆ.ಜಿ. ತೂಕದ 11 ಚಿನ್ನ ಲೇಪಿತ ಬೆಳ್ಳಿ ಗಟ್ಟಿಗಳು ಹಾಗೂ 1 ಕೆ.ಜಿ. ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಇದುವರೆಗಿನ ದಾಳಿಗಳಲ್ಲಿ ಆರೋಪಿ ಮತ್ತು ಅವರ ಸಂಬಂಧಿಕರಿಗೆ ಸೇರಿದ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ. ವಶಪಡಿಸಿಕೊಂಡಿದೆ.
ಬೆಟ್ಟಿಂಗ್ ಜಾಲದ ತನಿಖೆ
ಇದಕ್ಕೂ ಮುನ್ನ, ಇ.ಡಿ. ಅಧಿಕಾರಿಗಳು ಆರೋಪಿ ಕೆ.ಸಿ. ವೀರೇಂದ್ರ ಅವರನ್ನು 15 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ, ಆರೋಪಿಯು ‘ಕಿಂಗ್ 567’, ‘ರಾಜಾ 567’, ‘ಪ್ಲೇ 567’, ‘ಪ್ಲೇವಿನ್ 567’ ಇತ್ಯಾದಿ ಹೆಸರುಗಳಲ್ಲಿ ಹಲವು ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳ ಮೂಲಕ ಗಳಿಸಿದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಹಲವು ಪೇಮೆಂಟ್ ಗೇಟ್‌ವೇಗಳನ್ನು ಬಳಸಿರುವುದು ಇ.ಡಿ. ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ಕೆ.ಸಿ. ವೀರೇಂದ್ರ, ಅವರ ಕುಟುಂಬ ಸದಸ್ಯರು ಹಾಗೂ ಸಹಚರರು ವಿದೇಶಿ ಪ್ರಯಾಣದ ಟಿಕೆಟ್‌ಗಳಿಗಾಗಿ ಕೋಟ್ಯಂತರ ರೂಪಾಯಿ ವಿನಿಯೋಗಿಸಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ಮೂಲಕ ಬಂದ ಆದಾಯವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ, ನಂತರ ವಿಮಾನ ಟಿಕೆಟ್ ಬುಕ್ ಮಾಡಲು ಬಳಸಿಕೊಂಡಿರುವುದು ಇ.ಡಿ. ತನಿಖೆಯಲ್ಲಿ ತಿಳಿದುಬಂದಿದೆ.
"ಅಕ್ರಮ ಆನ್‌ಲೈನ್ ಚಟುವಟಿಕೆಗಳಿಂದ ಬಂದ ಹಣವನ್ನು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬಳಸಲಾಗಿದೆ. ಈ ಹಣದ ಮೂಲವನ್ನು ಮರೆಮಾಚಲು ಮಧ್ಯವರ್ತಿಗಳ ಖಾತೆಗಳನ್ನು ಬಳಸಿಕೊಂಡಿರುವುದು ಸಾಕ್ಷ್ಯಗಳಿಂದ ಬಯಲಾಗಿದೆ" ಎಂದು ಇ.ಡಿ. ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಐಷಾರಾಮಿ ಕಾರುಗಳ ಜಪ್ತಿ
ಕೆ.ಸಿ. ವೀರೇಂದ್ರ ಮತ್ತು ಅವರ ಕುಟುಂಬ ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಬೇರೆ ವ್ಯಕ್ತಿಗಳು ಹಾಗೂ ಕಂಪನಿಗಳ ಹೆಸರಿನಲ್ಲಿ ನೋಂದಣಿ ಮಾಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮರ್ಸಿಡೀಸ್ ಬೆಂಝ್ (KA 55, P 0003) ಕಾರನ್ನು ಅನಿಲ್ ಗೌಡ ಅವರಿಗೆ ಸೇರಿದ ಎಬಿಹೆಚ್ ಇನ್ಫ್ರಾಸ್ಟ್ರಕ್ಚರ್ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ.
ರೇಂಜ್ ರೋವರ್ (KA 45, N 0003) ಕಾರಿನ ಖರೀದಿಗೆ ಗುಲ್ಶನ್ ಖಟ್ಟರ್ ಎಂಬುವವರ ‘ಫೋನಿಪೈಸಾ’ ಸಂಸ್ಥೆಯಿಂದ ಹಣಕಾಸು ನೆರವು ನೀಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.