
ವೀರೇಂದ್ರ ಪಪ್ಪಿಯ ಕ್ಯಾಸಿನೋಗಳಲ್ಲಿಯೇ ಅಕ್ರಮ ಬೆಟ್ಟಿಂಗ್..! ಇಡಿ ತನಿಖೆಯಿಂದ ಬಯಲು
ಕ್ಯಾಸಿನೋಗಳಲ್ಲಿ ಅಕ್ರಮ ಬೆಟ್ಟಿಂಗ್ ಜಾಲ ವ್ಯಾಪಕವಾಗಿ ಹರಡಿದೆ. ಈ ಜಾಲದಲ್ಲಿ ನೇರವಾಗಿ ಕೆಲವರ ಹೆಸರು ಬಹಿರಂಗವಾದರೆ, ಇನ್ನು ಕೆಲವರು ಬೇನಾಮಿ ಹೆಸರಲ್ಲಿ ನಡೆಸುತ್ತಿರುವುದು ಕಂಡು ಬಂದಿದೆ.
ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಎಷ್ಟೇ ಕಡಿವಾಣ ಹಾಕಿದರೂ ಅಕ್ರಮ ಅನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್‌ಗೆ ಎಗ್ಗಿಲ್ಲದೆ ನಡೆಯುತ್ತವೆ. ಇತ್ತೀಚೆಗಿನ ದಿನದಲ್ಲಿ ಇಂತಹ ಅಕ್ರಮಗಳಲ್ಲಿ ಜನಪ್ರತಿನಿಧಿಗಳೇ ಹೆಚ್ಚಾಗಿ ಭಾಗಿಯಾಗುತ್ತಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬರುತ್ತಿದೆ. ಅದರಲ್ಲಿಯೂ ಕ್ಯಾಸಿನೋಗಳಲ್ಲಿ ಅಕ್ರಮ ಬೆಟ್ಟಿಂಗ್ ಜಾಲ ವ್ಯಾಪಕವಾಗಿ ಹರಡಿದೆ. ಈ ಜಾಲದಲ್ಲಿ ನೇರವಾಗಿ ಕೆಲವರ ಹೆಸರು ಬಹಿರಂಗವಾದರೆ, ಇನ್ನು ಕೆಲವರು ಬೇನಾಮಿ ಹೆಸರಲ್ಲಿ ನಡೆಸುತ್ತಿರುವುದು ಕಂಡು ಬಂದಿದೆ.
ಅಕ್ರಮ ಆನ್‌ಲೈನ್ ಮತ್ತು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ವೀರೇಂದ್ರ ವಿರುದ್ಧ ಕ್ಯಾಸಿನೋಗಳಲ್ಲಿ ಅಕ್ರಮ ಬೆಟ್ಟಿಂಗ್ ನಡೆಸುತ್ತಿರುವ ಆರೋಪವನ್ನು ಇಡಿ ಅಧಿಕಾರಿಗಳು ಮಾಡಿದ್ದಾರೆ.
ಗೋವಾದ ಐದು ಕ್ಯಾಸಿನೊಗಳು ಸೇರಿದಂತೆ ವೀರೇಂದ್ರ ಪಪ್ಪಿ ಮತ್ತು ಆತನ ಸಹಚರರಿಗೆ ಸಂಬಂಧಿಸಿದ 31 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಈ ಪೈಕಿ ಚಿತ್ರದುರ್ಗದ 6, ಬೆಂಗಳೂರಿನ 10, ಗೋವಾದ 5, ಹುಬ್ಬಳ್ಳಿ, ಮುಂಬೈ, ಜೋಧಪುರದ ತಲಾ ಒಂದು ಕಡೆ ಮತ್ತು ಸಿಕ್ಕಿಂನಲ್ಲಿ ಐದು ಕಡೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಹಲವಾರು ಜೂಜಾಟದ ತಾಣಗಳನ್ನು ನಡೆಸುತ್ತಿದ್ದರೆ, ಆತನ ಸಹೋದರ ದುಬೈನಿಂದ ಪಪ್ಪಿಯ ಕಾಲ್ ಸೆಂಟರ್ ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ಮೂರು ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದ ಎಂದು ಇಡಿ ಹೇಳಿದೆ.
12 ಕೋಟಿ ರೂ. ನಗದು ಸೇರಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳ ಜಪ್ತಿ
ವಿರೇಂದ್ರ ಪಪ್ಪಿ ತನ್ನ ಸಹಚರರೊಂದಿಗೆ ಸಿಕ್ಕಿಂನ ಗ್ಯಾಂಗ್ಟಾಕ್‌ಗೆ ಪ್ರಯಾಣಿಸಿದ್ದರು. ಅಲ್ಲಿ ಕ್ಯಾಸಿನೊಗಾಗಿ ಒಂದು ತುಂಡು ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ವಿರೇಂದ್ರ ಪಪ್ಪಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ 30 ಕಟ್ಟಡಗಳ ಮೇಲೆ ಇಡಿ ದಾಳಿ ನಡೆಸಿದ ಒಂದು ದಿನದ ನಂತರ, ಸುಮಾರು ಒಂದು ಕೋಟಿ ವಿದೇಶಿ ಕರೆನ್ಸಿ, ಸುಮಾರು 6 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಮತ್ತು ಸುಮಾರು 10 ಕೆಜಿ ತೂಕದ ಬೆಳ್ಳಿ ವಸ್ತುಗಳು ಮತ್ತು ನಾಲ್ಕು ವಾಹನಗಳು ಸೇರಿದಂತೆ 12 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು.
17 ಬ್ಯಾಂಕ್ ಖಾತೆಗಳು ಮತ್ತು ಎರಡು ಬ್ಯಾಂಕ್ ಲಾಕರ್‌ಗಳನ್ನು ಸಹ ಇಡಿ ಸ್ಥಗಿತಗೊಳಿಸಿದೆ. ವೀರೇಂದ್ರ ಪಪ್ಪಿ ಸಹೋದರ ಕೆ. ಸಿ. ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ಮನೆಗಳಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಸಹಚರರಾದ ಸಹೋದರ ಕೆ. ಸಿ. ತಿಪ್ಪೇಸ್ವಾಮಿ ಮತ್ತು ಪೃಥ್ವಿ ಎನ್. ರಾಜ್ ಅವರು ದುಬೈಯಿಂದ ಆನ್ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು ಎಂದು ಇಡಿ ಆರೋಪಿಸಿದೆ. ದಾಳಿಯ ವೇಳೆ ಭಾರೀ ಪ್ರಮಾಣದ ಹಣ ಹಾಗೂ ಚಿನ್ನಾಭರಣಗಳು ಪತ್ತೆಯಾಗಿರುವುದು ಪ್ರಕರಣದ ತೀವ್ರತೆಯನ್ನು ಸೂಚಿಸುತ್ತಿದೆ. ಬೆಟ್ಟಿಂಗ್ ದಂಧೆಯಿಂದ ಸಂಪಾದಿಸಿದ ಆದಾಯವನ್ನು ಮತ್ತಷ್ಟು ಗುರುತಿಸಲು ವೀರೇಂದ್ರನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಗ್ಯಾಂಬ್ಲಿಂಗ್, ಐಶಾರಾಮಿ ಕ್ಲಬ್ ಸದಸ್ಯತ್ವ!.
ಇಡಿ ಅಧಿಕಾರಿಗಳು ದಾಳಿ ಮಾಡಿದಂತಹ ಸಮಯದಲ್ಲಿ ಅಂತಾರಾಷ್ಟ್ರೀಯ ಗ್ಯಾಂಬ್ಲಿಂಗ್ ಮತ್ತು ಐಷಾರಾಮಿ ಕ್ಲಬ್ ಸದಸ್ಯತ್ವ ಇರೋದು ಸಾಬೀತಾಗಿದೆ. ಪರಿಶೀಲನೆ ಕಾರ್ಯ ನಡೆಸಿದ ಅಧಿಕಾರಿಗಳಿಗೆ ಹಲವಾರು ಅಂತಾರಾಷ್ಟ್ರೀಯ ಕ್ಯಾಸಿನೊ ಮತ್ತು ಐಷಾರಾಮಿ ಕ್ಲಬ್‌ಗಳ ಸದಸ್ಯತ್ವ ಕಾರ್ಡ್‌ಗಳು ದೊರೆತಿವೆ. ಇವುಗಳಲ್ಲಿ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ ಮತ್ತು ಕ್ಯಾಸಿನೊ ಜ್ಯುವೆಲ್‌ನ ಸದಸ್ಯತ್ವ ಕಾರ್ಡ್‌ಗಳು ಸೇರಿವೆ. ಇದರ ಜೊತೆಗೆ, ತಾಜ್, ಹಯಾತ್ ಮತ್ತು ಲೀಲಾ ಅಂತಹ ಪ್ರತಿಷ್ಠಿತ ಹೋಟೆಲ್‌ಗಳ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳೂ ಪತ್ತೆಯಾಗಿವೆ ಎಂದು ಇಡಿ ಮೂಲಗಳು ಹೇಳಿವೆ.
ಬೆಟ್ಟಿಂಗ್ ದಂಧೆಯಲ್ಲಿ ಕೋಟಿ ಕೋಟಿ ಹಣ ಗಳಿಕೆ:
ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಆಸ್ತಿ ಪತ್ರಗಳು ಪತ್ತೆಯಾಗಿವೆ. ಐಶಾರಾಮಿ ಕಾರುಗಳು ಸಿಕ್ಕಿವೆ. ಅವರ ಮಾಲಿಕತ್ವದ ಕ್ಯಾಸಿನೋಗಳು ಎಂದು ಇಡಿ ಹೇಳಿದೆ. ಆದರೆ ವೀರೇಂದ್ರ ಪಪ್ಪಿ ಮೂಲತಃ ಶ್ರೀಮಂತರಲ್ಲ. ಸಾಮ್ಯಾನ ಕುಟುಂಬದಲ್ಲಿ ಜನಿಸಿದ್ದ ವೀರೇಂದ್ರ ಪಪ್ಪಿ ಆರಂಭದಲ್ಲಿ ಬಡ್ಡಿ ವ್ಯವಹಾರ ನಡೆಸಿ ಬೆಳೆದಿದ್ದಾರೆ. ಬಡ್ಡಿಗೆ ಹಣಕೊಟ್ಟು ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ. ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ವೀರೇಂದ್ರ ಪಪ್ಪಿ ಆರೋಪಿಯಾಗಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ಬೆಟ್ಟಿಂಗ್ ದಂಧೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಮಾಡಿ ಅದನ್ನು ಬೇರೆ ಬೇರೆ ಉದ್ಯಮಕ್ಕೆ ಹೂಡಿಕೆ ಮಾಡಿ ಶ್ರೀಮಂತರಾದರು ಎಂದು ಹೇಳಲಾಗಿದೆ.
ಆನ್‌ಲೈನ್ ಬೆಟ್ಟಿಂಗ್ ಆರಂಭ:
ಬೆಟ್ಟಿಂಗ್ ದಂಧೆಯಲ್ಲಿ ಭಾರೀ ಪ್ರಮಾಣದ ಹಣದ ವಹಿವಾಟು ನೋಡಿದ ವೀರೇಂದ್ರ ಪಪ್ಪಿ, ನಂತರ ಆನ್‌ಲೈನ್ ಬೆಟ್ಟಿಂಗ್‌ಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ. ಈ ಮೂಲಕ ಅಕ್ರಮ ಹಣ ವಹಿವಾಟು ನಡೆಸಿರುವುದು ಗೊತ್ತಾಗಿದೆ. ಆನ್‌ಲೈನ್ ಬೆಟ್ಟಿಂಗ್ ಮೂಲಕ ಕೋಟ್ಯಂತರ ರೂ. ಗಳಿಕೆ ಮಾಡಿ ನಂತರ ತಮ್ಮ ವ್ಯವಹಾರವನ್ನು ದೇಶದ ಇತರೆ ರಾಜ್ಯಗಳಿಗೆ ನಂತರ ವಿದೇಶಕ್ಕೆ ವಿಸ್ತರಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ನೋಟು ರದ್ದತಿ ವೇಳೆಯಲ್ಲಿಯೂ ದಾಳಿ:
2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಆಗ ಚಾಲ್ತಿಯಲ್ಲಿದ 500, 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಬದಲಿಗೆ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಅದೇ ವರ್ಷ ಡಿ.16ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವೀರೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಆಗ ಮನೆಯ ಸ್ನಾನಗೃಹದ ಗೋಡೆಯೊಳಗೆ ಅಡಗಿಸಿ ಇಟ್ಟಿದ್ದ ಕಪಾಟಿನಲ್ಲಿ 5 ಕೋಟಿ ರೂ. ನಗದು ಪತ್ತೆಯಾಗಿತ್ತು. ಅದರಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಅಲ್ಲದೇ, 30 ಕೆ.ಜಿಯಷ್ಟು ಚಿನ್ನ ಪತ್ತೆಯಾಗಿತ್ತು.ಅಕ್ರಮ ಹಣದ ಮೂಲದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ನಂತರ ಮುಚ್ಚಲಾಯಿತು