ED Investigation | ಸಿದ್ದರಾಮಯ್ಯ ಸರ್ಕಾರದ ಸುತ್ತ ತನಿಖೆಯ ಬಲೆ ಹೆಣೆಯುತ್ತಿದೆಯೇ ಇಡಿ?

ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ತಾತ್ವಿಕ ಒಪ್ಪಿಗೆ ಹಿಂಪಡೆದ ನಂತರ ಜಾರಿ ನಿರ್ದೇಶನಾಲಯದ ತನಿಖೆಯ ಹರವು ಹೆಚ್ಚುತ್ತಿದೆ. ಸ್ಥಳೀಯ ತನಿಖಾ ಸಂಸ್ಥೆಗಳ ಹೊರತಾಗಿಯೂ ಜಾರಿ ನಿರ್ದೇಶನಾಲಯದ ಪ್ರವೇಶ ಸರ್ಕಾರಕ್ಕೆ ಮುಜುಗರ ತಂದೊಡ್ಡುತ್ತಿದೆ.;

Update: 2025-04-07 03:30 GMT

ಕಾಂಗ್ರೆಸ್ ನೇತೃತ್ವದ ಸರ್ಕಾರದ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ವಿಸ್ತರಿಸುತ್ತಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣದ ಬಳಿಕ ಈಗ ಭೋವಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪದಲ್ಲಿ ಆಳ ತನಿಖೆಗೆ ಇಳಿಯುತ್ತಿದೆ. ಜಾರಿ ನಿರ್ದೇಶನಾಲಯದ ಈ ತನಿಖೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ತನಿಖಾ ಸಂಸ್ಥೆಗಳಿಗೆ ತಿರುಗೇಟು ನೀಡುವಂತಿದೆ.

ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ತಾತ್ವಿಕ ಒಪ್ಪಿಗೆ ಹಿಂಪಡೆದ ನಂತರ ಜಾರಿ ನಿರ್ದೇಶನಾಲಯದ  ತನಿಖೆಯ ಹರವು ಹೆಚ್ಚುತ್ತಿದೆ. ಸ್ಥಳೀಯ ತನಿಖಾ ಸಂಸ್ಥೆಗಳ ಹೊರತಾಗಿಯೂ ಜಾರಿ ನಿರ್ದೇಶನಾಲಯದ ಪ್ರವೇಶ ಸರ್ಕಾರಕ್ಕೆ ಮುಜುಗರ ತಂದೊಡ್ಡುತ್ತಿದೆ. ಜಾರಿ ನಿರ್ದೇಶನಾಲಯ ಯಾವ ಯಾವ ಪ್ರಕರಣದಲ್ಲಿ ತನಿಖೆ ನಡೆಸುತ್ತಿದೆ. ತನಿಖೆಯ ಪರಿಣಾಮಗಳೇನು ಎಂಬುದರ ಕುರಿತ ವರದಿ ಇಲ್ಲಿದೆ.

ವಾಲ್ಮೀಕಿ ಹಗರಣದಲ್ಲಿ ಇಡಿ ಡ್ರಿಲ್

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಅನುದಾನದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ತರದೇ ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿದ ಪ್ರಕರಣ ಇದಾಗಿದೆ. 

2024ಫೆ.26 ರಂದು ಬ್ಯಾಂಕ್‌ ಅಧಿಕಾರಿಗಳು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ 187.33 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆಯಾಗಿತ್ತು.

ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾದ ಬಳಿಕ ಹಗರಣ ಬೆಳಕಿಗೆ ಬಂದಿತ್ತು. ಡೆತ್ ನೋಟ್ ನಲ್ಲಿ ಭ್ರಷ್ಟಾಚಾರದ ವಿವರ ಮತ್ತು ಹಲವಾರು ಅಧಿಕಾರಿಗಳು ಭಾಗಿಯಾಗಿರುವ ಮಾಹಿತಿ ಬಹಿರಂಗ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು.

ಪ್ರಕರಣದಲ್ಲಿ ಅಂದಿನ ಸಚಿವ ಬಿ. ನಾಗೇಂದ್ರ ಹೆಸರು ಉಲ್ಲೇಖವಾಗಿದ್ದರಿಂದ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ವಿವಿಧ ಅನಧಿಕೃತ ಖಾತೆಗಳಿಗೆ ಹಣ ವರ್ಗಾವಣೆಯಾದ ಕಾರಣ ಜಾರಿ ನಿರ್ದೇಶನಾಲಯ ಕೂಡ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣದ ತನಿಖೆ ಆರಂಭಿಸಿತು. ಎಸ್ ಐ ಟಿ ಹಾಗೂ ಇಡಿ ಪ್ರತ್ಯೇಕ ತನಿಖೆ ನಡೆಸಿದರೂ ತನಿಖೆಯ ಫಲಿತಾಂಶ ಭಿನ್ನವಾಗಿತ್ತು.

ಎಸ್ಐಟಿ 3072 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿ, ನಾಗೇಂದ್ರ ಪಾತ್ರದ ಬಗ್ಗೆ ಉಲ್ಲೇಖ ಮಾಡಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ 4970 ಪುಟಗಳ ಆರೋಪ ಪಟ್ಟಿಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಹಗರಣದ ಪ್ರಮುಖ ರೂವಾರಿ ಎಂದು ಉಲ್ಲೇಖಿಸಿತ್ತು. ನಾಗೇಂದ್ರ ಅಣತಿಯಂತೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದೂ ಆರೋಪಿಸಿತ್ತು. ಬಳಿಕ ನಾಗೇಂದ್ರ ಬಂಧನವಾಗಿ, ಕೆಲ ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. 

ಬಳ್ಳಾರಿ ಚುನಾವಣೆಗೆ ನಿಗಮ ಹಣ ಬಳಕೆ

ವಾಲ್ಮೀಕಿ ನಿಗಮದಿಂದ 20.19 ಕೋಟಿ ರೂ. ಗಳನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದ ಸಂಗತಿ ಇಡಿ ತನಿಖೆಯಿಂದ ಬೆಳಕಿಗೆ ಬಂದಿತ್ತು. ನಾಗೇಂದ್ರ ಅವರು ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಬೇಕಾದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ವಾರ್ಡ್‌ವಾರು ಹಂಚಿಕೆ ಮಾಡಿದ್ದರು ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. 

ಮುಡಾ ಹಗರಣದಲ್ಲೂ ಇಡಿ ಎಂಟ್ರಿ

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14 ನಿವೇಶನಗಳ ಹಂಚಿಕೆ ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತ ದಾಖಲಿಸಿದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ  ಇಸಿಐಆರ್ ದಾಖಲಿಸಿಕೊಂಡಿತ್ತು. ಮೂಡಾದಲ್ಲಿ 50:50 ಅನುಪಾತದಡಿ ಬದಲಿ ನಿವೇಶನ ಪಡೆದ ಆರೋಪದ ಮೇಲೆ ಉದ್ಯಮಿಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳ ನಿವಾಸಗಳು ಹಾಗೂ ಮುಡಾದ ಮಾಜಿ ಆಯುಕ್ತರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಕೂಡ ಹಾಕಿಕೊಂಡಿತ್ತು. ಜೊತೆಗೆ 50:50 ಅನುಪಾತದಲ್ಲಿ ಅಕ್ರಮವಾಗಿ ಪಡೆದಿರುವ 631 ನಿವೇಶನಗಳ ವಿವರ ಪಡೆದು ತನಿಖೆ ತೀವ್ರಗೊಳಿಸಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ 14 ನಿವೇಶನ ಹಂಚಿಕೆ ಜೊತೆಗೆ 1905 ನಿವೇಶನ ಹಂಚಿಕೆಯಲ್ಲೂ ಗೋಲ್‌ಮಾಲ್‌ ನಡೆದಿದ್ದು, ಅಧಿಕಾರಿಗಳು ಭಾರೀ ಪ್ರಮಾಣದ ಹಣ, ಅಕ್ರಮ ಲಾಭ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿತ್ತು.

ಮುಡಾ ಹಗರಣದ ತನಿಖೆ ಕುರಿತಂತೆ ಇ.ಡಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರಿಗೂ ತಮ್ಮ ತನಿಖಾ ವರದಿ ಮಾಹಿತಿ ಹಂಚಿಕೊಂಡಿದ್ದರು. ಬಿ.ಎಂ. ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಮುಡಾ ಅಧಿಕಾರಿಗಳ ಕರ್ತವ್ಯಲೋಪ, ನಕಲಿ ಸಹಿ ದಾಖಲೆ ತಿದ್ದುಪಡಿ ಸಾಕ್ಷ್ಯನಾಶವೂ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಪ್ರಭಾವ ಬಳಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಇಡಿ ಹೇಳಿತ್ತು. ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದಾಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದು, ಮುಡಾ ಸದಸ್ಯರೂ ಕೂಡ ಆಗಿದ್ದರು. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದರು ಎಂದು ಇ.ಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ಲೋಕಾಯುಕ್ತ ನ್ಯಾಯಾಲಯ ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್‌ ನೀಡಿದ್ದು, ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಹೈಕೋರ್ಟ್‌ ಇಡಿ ತನಿಖೆಗೆ ಅನುಮತಿ ನೀಡುವುದು ಸಿಎಂ ಹಾಗೂ ಹಗರಣದಲ್ಲಿ ಭಾಗಿಯಾಗಿ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಭೋವಿ ಅಭಿವೃದ್ಧಿ ನಿಗಮದ ಹಗರಣ

ಭೋವಿ ಅಭಿವೃದ್ಧಿ ನಿಗಮದಿಂದ 97 ಕೋಟಿ ರೂ. ದುರುಪಯೋಗ ಮತ್ತು ಅಕ್ರಮ ವರ್ಗಾವಣೆ ಆರೋಪದ ಮೇಲೆ ಸಿಐಡಿ ಹಾಗೂ ಇಡಿ ಯಿಂದ ಪ್ರತ್ಯೇಕ ತನಿಖೆ ನಡೆಯುತ್ತಿದೆ. ಏ.4 ರಂದು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಚೇರಿ ಹಾಗೂ ಆರೋಪಿತ ಅಧಿಕಾರಿಗಳ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು, ಡಿಜಿಟಲ್ ದಾಖಲೆಗಳು ಮತ್ತು ಆಸ್ತಿ ವಿವರಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಮಾಜಿ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರನ್ನು ಬಂಧಿಸಲಾಗಿದೆ.

ಇನ್ನು ಇದೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಹಲವು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿದೆ. ಇತ್ತೀಚೆಗೆ ಭೋವಿ ನಿಗಮದ ಫಲಾನುಭವಿಗಳಿಗೆ ಉಪಕರಣಗಳನ್ನು ಪೂರೈಸುತ್ತಿದ್ದ ಯುವ ವಕೀಲೆ ಜೀವಾ ಎಂಬುವರು ಅಧಿಕಾರಿಗಳ ಕಿರುಕುಳ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಪ್ರಕರಣದ ತನಿಖೆ ಚುರುಕು ಪಡೆದಿದೆ. 

ರನ್ಯಾ ಕೇಸ್‌ನಲ್ಲೂ ಇಡಿ ತನಿಖೆ

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್‌ ಪ್ರಕರಣದಲ್ಲೂ ಇಡಿ ತನಿಖೆ ನಡೆಸುತ್ತಿದೆ. ಡಿಆರ್‌ಐ ತನಿಖೆಯ ಜೊತೆಯಲ್ಲೇ ಇಡಿ ಕೂಡ ಚಿನ್ನ ಕಳ್ಳಸಾಗಣೆ ಹಾಗೂ ರನ್ಯಾ ರಾವ್‌ ಜೊತೆ ನಂಟಿರುವ ಪ್ರಭಾವಿಗಳ ಪತ್ತೆಗೆ ತನಿಖೆ ನಡೆಸುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಐಎಂಎ ಪ್ರಕರಣದಲ್ಲೂ ಇಡಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರ ವಿಚಾರಣೆ ನಡೆಯುತ್ತಿದೆ.

ವಿಶ್ವಾಸಾರ್ಹತೆ ಕಳೆದುಕೊಂಡ ತನಿಖಾ ಸಂಸ್ಥೆಗಳು 

ಕರ್ನಾಟಕದ ತನಿಖಾ ಸಂಸ್ಥೆಗಳು ಸರ್ಕಾರಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಪ್ರಕರಣಗಳಲ್ಲಿ ಪುರಾವೆಗಳಿದ್ದರೂ ಸರ್ಕಾರ ಅಥವಾ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸಿಬಿಐ, ಇಡಿ ಇನ್ನಿತರೆ ತನಿಖಾ ಸಂಸ್ಥೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಅವ್ಯವಹಾರ ಸಾಬೀತುಪಡಿಸುವ ಸಾಕಷ್ಟು ದಾಖಲೆಗಳಿವೆ.  ಆದಾಗ್ಯೂ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ. ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಹಲವು ಆಯಾಮಗಳಲ್ಲಿ ಪ್ರಕರಣವನ್ನು ವಿಶ್ಲೇಷಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. 1996 ರಲ್ಲಿ ಜಮೀನು ಮಾಲೀಕ ದೇವರಾಜು ಭೂಸ್ವಾಧೀನ ಕೈ ಬಿಡಲು ಕೋರಿದ್ದರು. ಆ ಪತ್ರದಲ್ಲಿ ಡಿಸಿಎಂ ಎಂದು ಬರೆಯಲಾಗಿದೆ.  ಆದರೆ, ರಾಜ್ಯದ ತನಿಖಾ ಸಂಸ್ಥೆಗಳು ಡಿಸಿಎಂ ಯಾರು ಎಂಬುದನ್ನು ಪತ್ತೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ಬೇಸರ ಹೊರಹಾಕಿದರು.

ಕುಶಾಲನಗರದಲ್ಲಿ ನಡೆದ ಚಿನ್ನಸಾಗಣೆ ಪ್ರಕರಣದಲ್ಲೂ ಅಧಿಕಾರಿಗಳೇ ಶಾಮೀಲಾಗಿರುವುದಕ್ಕೆ ಸಾಕ್ಷ್ಯಗಳಿದ್ದವು. ಅದೂ ಕೂಡ ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ, ಕರ್ನಾಟಕದ ತನಿಖಾಧಿಕಾರಿಗಳಿಗೆ ತನಿಖೆ ನಡೆಸುವುದೇ ತಿಳಿದಿಲ್ಲ ಎನಿಸುತ್ತದೆ. ಅಪರಾಧಕ್ಕೆ ಪೂರಕವಾದ ಸಾಕ್ಷ್ಯ ಸಂಗ್ರಹಿಸುವುದಿಲ್ಲ ಅನ್ನುವುದಾದರೆ ಪ್ರಭಾವಕ್ಕೊಳಗಾಗಿ ಕಾಟಾಚಾರದ ತನಿಖೆ ಕೈಗೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು. 

Tags:    

Similar News