Mysore MUDA Case| ಮುಡಾದ 160 ನಿವೇಶನಗಳ ಜಪ್ತಿಗೆ ಇಡಿ ಆದೇಶ
ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ನಿವೇಶನ ಮೌಲ್ಯ 81 ಕೋಟಿ ರೂ. ಇದೆ. ಮಾರುಕಟ್ಟೆ ದರ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. 160 ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡುವಂತೆ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪತ್ನಿ ಪಾರ್ವತಿ ಅವರು ಆರೋಪಿಯಾಗಿರುವ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಆಪ್ತರು ಬೇನಾಮಿ ಹೆಸರಿನಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪದ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಸಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ನಿವೇಶನ ಮೌಲ್ಯ 81 ಕೋಟಿ ರೂ. ಇದೆ. ಮಾರುಕಟ್ಟೆ ದರ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ. ರವಿ ಎಂಬುವರ ಹೆಸರಲ್ಲಿ 31 ನಿವೇಶನ, ಅಬ್ದುಲ್ ವಾಹಿದ್ ಎಂಬುವರ ಹೆಸರಲ್ಲಿ 41 ನಿವೇಶನ, ಕ್ಯಾಥಡ್ರಾಲ್ ಸೊಸೈಟಿ ಹೆಸರನಿಲ್ಲಿ 40 ನಿವೇಶನ, ಇತರರಿಗೆ ಸೇರಿದ 48 ನಿವೇಶನಗಳನ್ನು ಜಪ್ತಿ ಮಾಡುವಂತೆ ಹೇಳಿದೆ.
2023ರ ಸೆಪ್ಟೆಂಬರ್ 11ರಂದು ರವಿ ಹೆಸರಲ್ಲಿ 31 ನಿವೇನಗಳು ನೋಂದಣಿಯಾಗಿವೆ. ಮೈಸೂರು ನಗರದ ಹೃದಯಭಾಗ ಕುವೆಂಪುನಗರದಲ್ಲಿಯ 12 ನಿವೇಶನಗಳು, ದಟ್ಟಗಳ್ಳಿ, ವಿಜಯನಗರದಲ್ಲಿ 19 ನಿವೇಶನಗಳು ರವಿ ಹೆಸರಿಗೆ ನೋಂದಣಿಯಾಗಿವೆ.
ಅಬ್ದುಲ್ ವಾಹಿದ್ ಎಂಬುವರ ಹೆಸರಿಗೆ 2023ರ ಮಾರ್ಚ್ 8ರಂದು ಒಂದೇ ದಿನದಲ್ಲಿ 28 ನಿವೇಶನಗಳು ನೋಂದಣಿಯಾಗಿವೆ. 2023ರ ಸೆಪ್ಟೆಂಬರ್ 1ರಂದು ಅಬ್ದುಲ್ ವಾಹಿದ್ ಹೆಸರಿಗೆ 13 ವಿಜಯನಗರ, ಜೆ.ಪಿ.ನಗರ, ನಾಚನಹಳ್ಳಿಪಾಳ್ಯದಲ್ಲಿನ ನಿವೇಶನಗಳು ನೋಂದಣಿಯಾಗಿವೆ.